ದೇವನಹಳ್ಳಿ | ʼಕೆಐಎಡಿಬಿಯಿಂದ 3,000 ಕುಟುಂಬಗಳ ಬೀದಿಪಾಲುʼ; ರೈತರ ನಿರಂತರ ಧರಣಿ

13 ಹಳ್ಳಿಗಳಲ್ಲಿ ಸರಿಸುಮಾರು 3,000ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲರ ಬದುಕು ಕೃಷಿಯನ್ನೇ ಅವಲಂಬಿಸಿ ನಡೆಯುತ್ತಿದೆ. ಅವರ ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಕೆಐಎಡಿಬಿ ಮುಂದಾಗಿದೆ.

ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 13 ಹಳ್ಳಿಗಳ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ, 37ನೇ ದಿನಕ್ಕೆ ಕಾಲಿಟ್ಟಿದೆ. ಆದರೂ, ಇದೂವರೆಗೆ ಯಾವುದೇ ಅಧಿಕಾರಿಗಳು ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲವೆಂಬುದು ರೈತರ ಅಳಲು.

ದೇವನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಮೊದಲ ಹಂತದಲ್ಲಿ 300 ಎಕರೆ ಭೂಮಿಯನ್ನು ಇದೇ ಹೋಬಳಿಯಲ್ಲಿ ಕೆಐಎಡಿಬಿ ವಶಪಡಿಸಿಕೊಂಡಿದೆ. ಆ ಭೂಮಿಯೇ ಇನ್ನೂ ಬಳಕೆಯಾಗದೆ ಉಳಿದಿದ್ದರೂ, ಮತ್ತೆ 13 ಹಳ್ಳಿಗಳಲ್ಲಿ ಸುಮಾರು 1,800 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ರೈತರಿಗೆ ಕೆಐಎಡಿಬಿ ನೋಟಿಸ್‌ ನೀಡಿದೆ. 

Eedina App

ಏಕಾಏಕಿ ನೋಟಿಸ್‌ ನೀಡಲಾಗಿರುವ 13 ಹಳ್ಳಿಗಳಲ್ಲಿ ಸರಿಸುಮಾರು 3,000ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲರ ಬದುಕು ಕೃಷಿಯನ್ನೇ ಅವಲಂಬಿಸಿ ನಡೆಯುತ್ತಿದೆ. ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಬಹುಪಾಲು ಭೂಮಿಯು ಕೃಷಿ ಭೂಮಿಯಾಗಿದೆ. ಆ ಭೂಮಿಯಲ್ಲಿ ತರಕಾರಿ, ದ್ರಾಕ್ಷಿ, ಮಾವು, ರೇಷ್ಮೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ.

ಅಲ್ಲದೆ, ಹಲವಾರು ರೈತರು ತಮ್ಮ ಕೃಷಿ ಭೂಮಿಯಲ್ಲಿಯೇ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಇನ್ನು ಕೆಲವರು ಕೃಷಿಯ ಜೊತೆಗೆ ಪೂರಕ ಆದಾಯ ಮೂಲವಾಗಿರುವ ಕೋಳಿ ಫಾರಂ, ಪಾಲಿಹೌಸ್‌ಗಳನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಳ್ಳಿಗಳ ಪಶುಪಾಲನೆಗೆ ಮೇವಿನ ಮೂಲವೂ ಕೃಷಿ ಮತ್ತು ಗ್ರಾಮದ ಗೋಮಾಳವೇ ಆಗಿದೆ. ಹೀಗಿರುವಾಗ, ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಕೆಐಎಡಿಬಿ ಮುಂದಾಗಿರುವುದು, ರೈತರು ಮತ್ತು ಹಳ್ಳಿಗರ ಬದುಕನ್ನೇ ಕಸಿದುಕೊಂಡಂತಾಗುತ್ತಿದೆ.

AV Eye Hospital ad

ರೈತರು ನಿರ್ಗತಿಕರಾಗುವ ಆತಂಕ

"ಹಳ್ಳಿಗಳಲ್ಲಿರುವ ಬಹುಪಾಲು ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದಾರೆ. ಸ್ವಾಧೀನ ಪ್ರಕ್ರಿಯೆ ಮುಂದುವರೆದರೆ, ಕೃಷಿ ಮಾತ್ರವೇ ಗೊತ್ತಿರುವ ಸುಮಾರು 300 ರೈತ ಕುಟುಂಬಗಳು ಭೂಮಿ ಕಳೆದುಕೊಂಡು, ಬೀದಿ ಪಾಲಾಗುತ್ತವೆ. 450ಕ್ಕೂ ಹೆಚ್ಚು ಕುಟುಂಬಗಳು ಕೃಷಿಯನ್ನೂ ಮಾಡಲಾಗದೆ, ಇತರ ಕೆಲಸಗಳನ್ನೂ ಮಾಡಲಾಗದ ತ್ರಿಶಂಕು ಸ್ಥಿತಿಗೆ ಬರುತ್ತಾರೆ" ಎಂದು ಪ್ರತಿಭಟನಾನಿರತ ರೈತ ಮುಖಂಡ ಕಾರೇಹಳ್ಳಿ ಶ್ರೀನಿವಾಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಭೂರಹಿತರು ಮತ್ತು ಬಡಕುಟುಂಬಗಳಿಗೆ ಮಂಜೂರು ಮಾಡಲಾಗಿದ್ದ ಸುಮಾರು 500 ಎಕರೆ ಭೂಮಿಯನ್ನೂ ಸ್ವಾಧೀನ ಪ್ರಕ್ರಿಯೆ ಒಳಗೊಂಡಿದೆ. ಇದರಿಂದಾಗಿ, ಅವರೆಲ್ಲರೂ, ಭೂಮಿ ಕಳೆದುಕೊಂಡು, ಮತ್ತೆ ನಿರ್ಗತಿಕರಾಗುತ್ತಾರೆ ಎಂದು ರೈತರು ಹೇಳುತ್ತಾರೆ. 

ಹೆಚ್ಚು ಜನರು ವಾಸಿಸುತ್ತಿರುವ ಇದೇ ಹೋಬಳಿಯಲ್ಲಿ ವಿಮಾನ ನಿಲ್ದಾಣ, ಏರೋಸ್ಪೇಸ್, ಎಸ್‌ಇಝಡ್‌, ಹರಳೂರು ಕೈಗಾರಿಕಾ ಪ್ರದೇಶಕ್ಕಾಗಿ ಪದೇ ಪದೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಈಗ ಮತ್ತೆ ಕೆಐಎಡಿಬಿ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿರುವುದು ಹಳ್ಳಿಗಳನ್ನು ನಿರ್ನಾಮ ಮಾಡುತ್ತಿದೆ. ಸಾಮಾಜಿಕ ಪರಿಸರದ ಮೇಲೂ ಭಾರೀ ಪರಿಣಾಮ ಬೀರಲಿದೆ ಎಂದು ಗ್ರಾಮಗಳ ಜನರು ಕಿಡಿಕಾರಿದ್ದಾರೆ. 

ಖಾಲಿ ಉಳಿದಿವೆ ಕೆಐಎಡಿಬಿ ಸ್ವಾಧೀನದಲ್ಲಿರುವ ಭೂಮಿ

ಇದೆಲ್ಲದರ ನಡುವೆಯೂ, "ಕೈಗಾರಿಕಾ ಪ್ರದೇಶಗಳಾದ ದಾಬಸ್ ಪೇಟೆ, ಹೊಸಕೋಟೆ, ನೆಲಮಂಗಲ, ಹರಳೂರು ಭಾಗಗಳಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಭೂಮಿ ಖಾಲಿ ಇವೆ. ಸಿಎಜಿ ಆಡಿಟ್ ಅಧ್ಯಯನದ ಪ್ರಕಾರ, ರಾಜ್ಯದಲ್ಲಿ ಕೆಐಎಡಿಬಿ ಸ್ವಾಧೀನದಲ್ಲಿರುವ ಸಾವಿರಾರು ಎಕರೆ ಭೂಮಿ ಕಾಲಿ. ಇಷ್ಟೆಲ್ಲ ಖಾಲಿ ಇರುವಾಗ ಹೊಸ ಸ್ವಾದೀನ ಪ್ರಕ್ರಿಯೆಯ ಅನಿವಾರ್ಯವಾದರೂ ಏನು" ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುನಿಸೊಣ್ಣಪ್ಪ ಪ್ರಶ್ನಿಸಿದ್ದಾರೆ. 

ಕೆಐಎಡಿಬಿಯ ಭೂದಾಹಕ್ಕೆ ನಾವು ಬಲಿಯಾಗುವುದಿಲ್ಲ. ಸಾಮಾಜಿಕ ಭದ್ರತೆ, ಆಹಾರದ ಸಾರ್ವಭೌಮತ್ವ, ಉದ್ಯೋಗ ಖಾತ್ರಿ, ಬದುಕಲು ಯೋಗ್ಯ ಪರಿಸರದ ಭರವಸೆ ಇಲ್ಲದ ಕೈಗಾರಿಕಾ ಯೋಜನೆಗಳಿಗೆ ನಾವು ಮಣೆ ಹಾಕುವುದಿಲ್ಲ ಎಂದಿರುವ ರೈತರು, ಈ ಹಿಂದೆ ಉಪವಿಭಾಗಾಧಿಕಾರಿ ಮತ್ತು ಭೂ ಸ್ವಾಧೀನಾಧಿಕಾರಿಗಳಿಗೆ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಸ್ಪಂಧಿಸದ ಕಾರಣ, ಅನಿರ್ಧಿಷ್ಠಾವಧಿ ಹೋರಾಟವನ್ನು ರೈತರು ಕೆಗೆತ್ತಿಕೊಂಡಿದ್ದಾರೆ. ಸರ್ಕಾರವು ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಹೋರಾಟನಿರತರು ಪಟ್ಟುಹಿಡಿದ್ದಾರೆ. 

ಸಚಿವರನ್ನು ಭೇಟಿ ಮಾಡಿದ್ದ ರೈತರು

ಪ್ರತಿಭಟನಾನಿರತ ರೈತರು ಫೆಬ್ರವರಿ 25 ರಂದು, ಕೈಗಾರಿಕ ಸಚಿವರಾದ ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಿದ್ದರು. ಸಚಿವರು ಸ್ಥಳೀಯ ಶಾಸಕರು, ಸಂಸದರು, ಮತ್ತು ರೈತರೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇದೂವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ಮಧ್ಯೆ, ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ. ಕೆ ಸುಧಾಕರ್, ಸಚಿವ ಎಂಟಿಬಿ ನಾಗರಾಜು ಮತ್ತು ಡಾ. ಅಶ್ವಥನಾರಾಯಣ್ ಅವರನ್ನು ರೈತರು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅವರಿಂದಲೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ.

ಕಳೆದ ಒಂದು ತಿಂಗಳಿನಿಂದಲೂ ಪ್ರತಿಭಟನೆ ನಡೆಯುತ್ತಿದ್ದರು, ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವ ಕುರಿತು ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಅನಿರ್ಧಿಷ್ಟಾವಧಿ ಹೋರಾಟ ಅನಿವಾರ್ಯ. ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಚುರುಕುಗೊಳ್ಳಲಿದೆ ಎನ್ನುತ್ತಾರೆ ರೈತ ಹೋರಾಟಗಾರರು. 

ಹೋರಾಟಕ್ಕೆ ಹಲವು ಸಂಘಟನೆಗಳ ಬೆಂಬಲ

ಕಳೆದ 37 ದಿನಗಳಿಂದ ಚನ್ನರಾಯಪಟ್ಟಣದ ನಾಡ ಕಚೇರಿ ಮುಂಭಾಗ ನಡೆಯುತ್ತಿರುವ ರೈತರ ಧರಣಿಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಅಖಿಲ ಭಾರತ ಕಿಸಾನ್ ಸಭಾದ ಕೃಷ್ಣಪ್ರಸಾದ್ ಅವರು ಧರಣಿಯಲ್ಲಿ ಭಾಗಿಯಾಗಿ, ರೈತರ ಜೊತೆಗಿರುವುದಾಗಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚುಕ್ಕಿ ನಂಜುಂಡಸ್ವಾಮಿ ಮತ್ತು ಹಿರಿಯ ಹೋರಾಟಗಾರರಾದ ಸುರೇಶ್ ಬಾಬು ಪಾಟೀಲ, ಪ್ರಾಂತ್ಯರೈತ ಸಂಘದ ಬಯ್ಯಾರೆಡ್ಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ನೀರಾವರಿ ಹೋರಾಟಗಾರ ಆಂಜನರೆಡ್ಡಿ ಅವರೂ ರೈತರನ್ನು ಬೆಂಬಲಿಸಿದ್ದಾರೆ.

ಬಳ್ಳಾರಿಯ ಜಾಗನೂರು-ಸಿರಿವಾರ ಭೂ ರಕ್ಷಣ ಸಮಿತಿಯ ನೂರಾರು ಕಾರ್ಯಕರ್ತರು ದೇವನಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ಪಾದಯಾತ್ರೆ ನಡೆಸಿ ಬೆಂಬಲ ಸೂಚಿಸಿದ್ದಾರೆ,

ಚನ್ನರಾಯಪಟ್ಟಣ ಹೋಬಳಿಯ ಪ್ರತಿಭಟನಾನಿರತ ರೈತರಿಗೆ ರಾಜ್ಯ ಮತ್ತು ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದರೂ, ಸರ್ಕಾರ ರೈತರ ಅಳಲನ್ನು ನಿರ್ಲಕ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟವು ಮತ್ತಷ್ಟು ತೀವ್ರಗೊಳ್ಳುವುದಾಗಿ ರೈತರ ಹೋರಾಟಗಾರರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app