ಸೆಪ್ಟೆಂಬರ್‌ 19ಕ್ಕೆ ಸಿಇಟಿ ರ್‍ಯಾಂಕ್‌ ಕುರಿತ ಸರ್ಕಾರದ ಮೇಲ್ಮನವಿ ವಿಚಾರಣೆ

  • ಸಿಇಟಿ ರ್‍ಯಾಂಕ್‌ನಲ್ಲಿ ಶೇ. 50:50 ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ
  • 2020- 21ನೇ ಸಾಲಿನ ವಿದ್ಯಾರ್ಥಿಗಳ ಸಿಇಟಿ ರ್‍ಯಾಂಕ್‌ನಲ್ಲಿ ಗೊಂದಲ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ರ್‍ಯಾಂಕ್‌ ಪರಿಷ್ಕರಣೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್‌ ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ.

2021ನೇ ಸಾಲಿನ ಪುನರಾವರ್ತಿತ ವಿದ್ಯಾರ್ಥಿಗಳು 2022ರಲ್ಲಿ ಸಿಇಟಿ ಬರೆದಿದ್ದು, ಇವರ ದ್ವಿತೀಯ ಪಿಯುಸಿ ಅಂಕಗಳನ್ನು ಸಿಇಟಿ ರ್‍ಯಾಂಕ್‌ಗೆ ಪರಿಗಣಿಸದೆ ಇರುವುದರಿಂದ, ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕಷ್ಟವಾಗುತ್ತದೆ ಎಂದು ಪುನರಾವರ್ತಿತ ವಿದ್ಯಾರ್ಥಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.

ಸತತ ಒಂದು ತಿಂಗಳ ವಿಚಾರಣೆಯ ನಂತರ 2021ನೇ ಸಾಲಿನ ವಿದ್ಯಾರ್ಥಿಗಳು ಪಿಯುಸಿ ಅಂಕಗಳು ಮತ್ತು ಸಿಇಟಿ ಅಂಕಗಳನ್ನು ಶೇ. 50:50ರಷ್ಟು ಪರಿಗಣಿಸಿ ಸಿಇಟಿ ರ್‍ಯಾಂಕ್‌ ಪಟ್ಟಿಯನ್ನು ಪರಿಷ್ಕರಿಸಿ ಫಲಿತಾಂಶ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸೆಪ್ಟೆಂಬರ್ 3ರಂದು ನಿರ್ದೇಶಿಸಿತ್ತು. 

ಹೊಸದಾಗಿ ಸಿಇಟಿ ಬರೆದ ಮಕ್ಕಳಿಗೆ ಅನ್ಯಾಯವಾಗಲಿದೆ ಎಂದು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಪಿಯು ಮಂಡಳಿಯ ಅಧೀನ ಕಾರ್ಯದರ್ಶಿ ಹಾಗೂ ಕೆಇಎ ಮೇಲ್ಮನವಿ ಸಲ್ಲಿಸಿದ್ದವು. ಹಂಗಾಮಿ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ (ಸೆಪ್ಟೆಂಬರ್ 15) ವಿಚಾರಣೆ ನಡೆಸಲು ದಿನಾಂಕ ನಿಗದಿಯಾಗಿತ್ತು.

ಈ ಸುದ್ದಿ ಓದಿದ್ದೀರಾ? ಕೆಸಿಇಟಿ ವಿವಾದ | ಸಿಇಟಿ ಗೊಂದಲದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳ ಆಕ್ರೋಶ

ಇಂದು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠವು ತಮ್ಮ ಮೇಲ್ಮನವಿಯ ಕಚೇರಿಯ ಆಕ್ಷೇಪಣೆಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್