‘ಚಿಲುಮೆ’ ಸಂಸ್ಥೆ ಮೂಲಕ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಸರ್ಕಾರದ ಸಂಚು: ಸಿದ್ದರಾಮಯ್ಯ ಗಂಭೀರ ಆರೋಪ

ಕಾಂಗ್ರೆಸ್
  • ʼಬೊಮ್ಮಾಯಿ, ಅಧಿಕಾರಿಗಳು ವೋಟರ್‌ ಐಡಿ ಹಗರಣದಲ್ಲಿ ಭಾಗಿʼ: ಆರೋಪ
  • ತನ್ನ ಏಜೆಂಟರನ್ನು ಅಧಿಕಾರಿಗಳಂತೆ ಬಿಂಬಿಸಿ ಮಾಹಿತಿ ಸಂಗ್ರಹಿಸಿದ 'ಚಿಲುಮೆ' 

"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳೆಲ್ಲ ವೋಟರ್‌ ಐಡಿ ಹಗರಣದಲ್ಲಿ ಭಾಗಿಯಾಗಿದ್ದು, ‘ಚಿಲುಮೆ’ ಎಂಬ ಖಾಸಗಿ ಸಂಸ್ಥೆ ಮೂಲಕ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಸಂಚು ರೂಪಸಿದ್ದಾರೆ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಅವರು ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್‌ ಜೊತೆ ಗುರುವಾರ ಬೆಳಿಗ್ಗೆ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದರು.

Eedina App

“ ‘ಚಿಲುಮೆ’ ಎಂಬ ಖಾಸಗಿ ಸಂಸ್ಥೆ (ಎನ್‌ಜಿಒ) ತನ್ನ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದೆ. ಬೆಂಗಳೂರು ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆಗಿದ್ದು, ಅಕ್ರಮದ ಹೊಣೆಯನ್ನು ಮುಖ್ಯಮಂತ್ರಿಗಳು ಹೊರಬೇಕು. ಅಲ್ಲದೇ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಅವರು ಆಗ್ರಹಿಸಿದರು.

“ಮಾಜಿ ಉಪಮುಖ್ಯಮಂತ್ರಿ ಆಪ್ತರಾದ ಕೃಷ್ಣಪ್ಪ ರವಿಕುಮಾರ್ ‘ಚಿಲುಮೆ’ ಸಂಸ್ಥೆಯ ರೂವಾರಿಯಾಗಿದ್ದು, ಮತದಾರರಿಗೆ  ಜಾಗೃತಿ ಮೂಡಿಸಲು ಉಚಿತವಾಗಿ ಸೇವೆ ಮಾಡುತ್ತೇವೆ ಎಂದು ಮುಂದೆ ಬಂದಿದ್ದರು. ಕಳೆದ ಆಗಸ್ಟ್‌ನಲ್ಲಿ ಬಿಬಿಎಂಪಿ ಯಾವುದೇ ಜಾಹೀರಾತು ನೀಡದೇ ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಮತದಾನ ನೋಂದಣಿ  ಹಾಗೂ ಆಧಾರ್‌ ಕಾರ್ಡ್‌ ಸೇರಿಸಲು 'ಚಿಲುಮೆ' ಸಂಸ್ಥೆಗೆ ಅನುಮತಿ ನೀಡಿದೆ. ಇದರಲ್ಲಿ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. 'ಚಿಲುಮೆ' ಏಜೆಂಟರನ್ನೇ ಬೂತ್ ಲೆವಲ್‌ (ಬಿಎಲ್‌ಓ) ಆಫೀಸರ್‌ ಮಾಡಲಾಗಿದೆ. ಸರ್ಕಾರಿ ನೌಕರರು ಮಾತ್ರ ಬಿಎಲ್‌ಓ ಅಧಿಕಾರಿಗಳಾಗಲು ಸಾಧ್ಯ. ಕಾನುನು ಬಾಹಿರವಾಗಿ ಈ ನೇಮಕ ಮಾಡಲಾಗಿದ್ದು, ಭಾರತೀಯ ದಂಡ ಸಂಹಿತೆ ಪ್ರಕಾರ ಇದು ಅಪರಾಧ” ಎಂದರು.

AV Eye Hospital ad

“ಓಟರ್‌ ಐಡಿ ಅಕ್ರಮದ ಬಗ್ಗೆ ದೂರು ಕೊಡಲು ಕಾಂಗ್ರೆಸ್‌ ನಿರ್ಧರಿಸಿದೆ. ಅಧಿಕಾರದಲ್ಲಿ ಉಳಿಯುವ ನೈತಿಕತೆ ಬೊಮ್ಮಾಯಿ ಅವರಿಗಿಲ್ಲ. ಮುಖ್ಯಮಂತ್ರಿಗಳ ಬಂಧನವಾಗಬೇಕು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು” ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

“ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ ಇರುವೆ. ಇಂತಹ ಘಟನೆ ಕಂಡಿರಲಿಲ್ಲ. ವಿವಧ ರೀತಿಯಲ್ಲಿ ಲಂಚ ನೋಡಿದ್ದೇವೆ. ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿದೆ. ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲು ಬಿಜೆಪಿ ಇಂತಹ ಷಡ್ಯಂತ್ರ ಹೆಣೆದಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಆರೋಪಿಸಿದರು.

“ಚಿಲುಮೆ ಸಂಸ್ಥೆ ಉಚಿತವಾಗಿ ಮತದಾರರ ಜಾಗೃತಿ ಮೂಡಿಸಲು ಮನವಿ ಸಲ್ಲಿಸಿದೆ. ಆದರೆ, ಅದೇ ಸಂಸ್ಥೆ ತಕ್ಷಣ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿ, ದಿನಕ್ಕೆ 1200 ರಿಂದ 1500ವರೆಗೆ ಸಂಬಳ ಕೊಟ್ಟು ಓಟ್‌ ಜಾಸ್ತಿ ಮಾಡಿಕೊಳ್ಳಲು ತಂತ್ರ ಹಣೆದಿದೆ. ಖಾಲಿ ವಿಳಾಸ ಗುರುತಿಸಿ, ಅಲ್ಲಿ ಬೇರೆ ಕ್ಷೇತ್ರದ ಮತದಾರರನ್ನು ಸೇರಿಸಲಾಗಿದೆ. ಅಲ್ಪಸಂಖ್ಯಾತರ ಮತ ಕಿತ್ತು ಹಾಕುವ ಷಡ್ಯಂತ್ರ ಇದು” ಎಂದು ದೂರಿದರು.

ಮಲ್ಲೇಶ್ವರಂನ 'ಡಿಎಪಿ ಹೊಂಬಾಳೆ' ಹೋಗಿ 'ಚಿಲುಮೆ ಎಂಟರ್‌ ಪ್ರೈಸಸ್‌' ಆಗಿದೆ. ಬಿಬಿಎಂಪಿ ಚುನಾವಣೆ ಮುಂದಕ್ಕೆ ಯಾಕೆ ಹಾಕುತ್ತಿದ್ದಾರೆ ಎಂಬುದಕ್ಕೆ ಈ ಅಕ್ರಮದಲ್ಲಿ ಉತ್ತರ ಸಿಗುತ್ತದೆ. ಇದು ಮತದಾನದ ಹಕ್ಕಿನ ಕಗ್ಗೊಲೆಯಾಗಿದ್ದು, ಕಾಂಗ್ರೆಸ್‌ ಈ ವಿಚಾರಕ್ಕೆ ತಾರ್ಕಿಕ ಅಂತ್ಯ ಹಾಡಲಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ವೋಟರ್ ಐಡಿ ನೆಪದಲ್ಲಿ ಮತದಾರರ ಮಾಹಿತಿ ಕದ್ದ ಬೊಮ್ಮಾಯಿ ಸರ್ಕಾರ; ಕಾಂಗ್ರೆಸ್‌ನಿಂದ ಪೊಲೀಸ್ ಕಮಿಷನರ್‌ಗೆ ದೂರು

‘ಖಾಸಗಿ ಸಂಸ್ಥೆಯೊಂದು (ಎನ್‌ಜಿಒ) ಮತದಾರರ ಅಂಕಿಅಂಶಗಳನ್ನು (ಡಾಟಾ) ಅಕ್ರಮವಾಗಿ ಸಂಗ್ರಹಿಸುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಕಾರಣ. ಅವರ ಮೇಲೆ ಎಫ್‌ಐಆರ್‌ ದಾಖಲಿಸಿ, ಅವರನ್ನು ಬಂಧಿಸಬೇಕು. ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುವ ಈ ಅಪರಾಧದ ಬಗ್ಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಒತ್ತಾಯಿಸಿದರು.

“ಡಾಟಾ ಸಂಗ್ರಹಿಸಲು 'ಚಿಲುಮೆ' ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡಾ ಇದಕ್ಕೆ ಕಾರಣ. ಮಹದೇವಪುರ ಕ್ಷೇತ್ರದಲ್ಲಿ ಮೊದಲು ಮಾಹಿತಿ ಸಂಗ್ರಹಿಸಲಾಗಿದೆ. ಡಾಟಾ ಸಂಗ್ರಹಕ್ಕೆ ಆಗಸ್ಟ್ 20ರಂದು ಆದೇಶ ಹೊರಡಿಸಲಾಗಿದೆ. 'ಚಿಲುಮೆ' ಸಂಸ್ಥೆಯವರು ಸರ್ಕಾರಿ ಅಧಿಕಾರಿಗಳೆಂದು ಮಾಹಿತಿ ಸಂಗ್ರಹಿಸಿದ್ದಾರೆ” ಎಂದು ದೂರಿದರು.

‘ಮತದಾರರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಬೇಕು. ಆದರೆ, ಇಲ್ಲಿ ಖಾಸಗಿ ಸಂಸ್ಥೆ ಸಂಗ್ರಹಿಸಿದೆ. ಮತದಾರರ ಮೊಬೈಲ್ ಸಂಖ್ಯೆ, ವಿಳಾಸ, ಇತರ ವೈಯಕ್ತಿಕ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಈ ಮಾಹಿತಿ ಸಂಗ್ರಹಿಸಿದ್ದಾರೆ. ಕೃಷ್ಣಪ್ಪ ರವಿಕುಮಾರ್ ಎಂಬುವವರು ಇದರ ಹಿಂದೆ ಇದ್ದಾರೆ. ಈ ವ್ಯಕ್ತಿ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಹಾಲಿ ಸಚಿವರ ಆಪ್ತ’ ಎಂದು ಸೂಚ್ಯವಾಗಿ ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್‌, ಶಾಸಕರಾದ ಕೆ.ಜೆ. ಜಾರ್ಜ್, ಎಚ್.ಎಂ. ರೇವಣ್ಣ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app