ಮಕ್ಕಳಿಗೆ ಸಿಗದ ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್: ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

  • 'ವಿದ್ಯಾಪ್ರವೇಶ' ಮತ್ತು 'ಕಲಿಕಾ ಚೇತರಿಕೆ' ಯೋಜನೆ ಹೆಸರಿಗೆ ಮಾತ್ರ
  • ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್ ನೀಡದೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ

"ಒಂದೆಡೆ ರಾಜ್ಯ ಸರ್ಕಾರದ ಸಚಿವರು, ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ದುಷ್ಟಕೂಟ ಕಮಿಷನ್ ದಂಧೆಯಲ್ಲಿ ತೊಡಗಿಸಿಕೊಂಡು ರಾಜ್ಯದ ಖಜಾನೆ ಲೂಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸೈಕಲ್, ಶೂ, ಸಾಕ್ಸ್ ನೀಡದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ" ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, "ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸೈಕಲ್, ಶೂ ಮತ್ತು ಸಾಕ್ಸ್ ಗಳನ್ನು, ಕಳೆದೆರಡು ಶೈಕ್ಷಣಿಕ ವರ್ಷಗಳಂತೆ ಈ ವರ್ಷವೂ ರಾಜ್ಯ ಸರ್ಕಾರ ನಿಲ್ಲಿಸಿದೆಯಂತೆ. ಹಿಂದಿನ ವರ್ಷಗಳಲ್ಲಿ ಕೊರೊನಾ ಕಾರಣ ನೀಡಿದ್ದ ಸರ್ಕಾರ, ಈ ವರ್ಷ 40% ಕಮಿಷನ್‌ ದಂದೆಯಿಂದಾಗಿ ಖಾಲಿಯಾಗಿರುವ ಖಜಾನೆ ತೋರಿಸುತ್ತಿದೆ" ಎಂದು ಟೀಕಿಸಿದ್ದಾರೆ.

"ಈ ದಿನದವರೆಗೆ ಶಾಲಾ ಮಕ್ಕಳಿಗೆ ನೀಡಬೇಕಾಗಿದ್ದ ಪಠ್ಯಪುಸ್ತಕಗಳ ಬಗ್ಗೆ ಖಚಿತ ತೀರ್ಮಾನವನ್ನು ಕೈಗೊಳ್ಳಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೆಲವು ಶಾಲೆಗಳಿಗೆ ಹಳೆಯ ಪಠ್ಯ, ಇನ್ನು ಕೆಲವು ಶಾಲೆಗಳಿಗೆ ಹೊಸ ಪಠ್ಯ, ಉಳಿದ ಶಾಲೆಗಳಿಗೆ ಪಠ್ಯವೇ ಇಲ್ಲದಂತಹ ದುಸ್ಥಿತಿ ಇದೆ" ಎಂದು ಆರೋಪಿಸಿದ್ದಾರೆ.

"ಕೊರೊನಾ ಕಾಲದ ಕಲಿಕಾ ಅಂತರವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ 'ವಿದ್ಯಾಪ್ರವೇಶ' ಮತ್ತು 'ಕಲಿಕಾ ಚೇತರಿಕೆ' ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇದಕ್ಕೆ ಸಂಬಂಧಿಸಿದ ಕಲಿಕಾ ಹಾಳೆಗಳನ್ನು ಕೂಡಾ ಪೂರೈಸಲು ಸರ್ಕಾರದಲ್ಲಿ ದುಡ್ಡಿಲ್ಲ" ಎಂದು ಟೀಕಿಸಿದ್ದಾರೆ.

"ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಿರುವ ಕಲಿಕಾ ಹಾಳೆಗಳನ್ನು ಶಿಕ್ಷಕರು ಸ್ವಂತ ಖರ್ಚಿನಿಂದ ಡೌನ್ ಲೋಡ್ ಮಾಡಿಕೊಂಡು, ಜೆರಾಕ್ಸ್ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಷ್ಟೊಂದು ಗತಿಗೇಡಿನ ಸರ್ಕಾರ ಹಿಂದೆ ಇರಲಿಲ್ಲ, ಮಂದೆ ಬರಲಾರದು" ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫ್ಲೆಕ್ಸ್‌, ಬ್ಯಾನರ್ ತೆರವಿಗೆ ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್ ಸೂಚನೆ

"ವಿದ್ಯಾರ್ಥಿಗಳಿಗೆ ಸೈಕಲ್‌ ನೀಡುವ ಯೋಜನೆ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರದ್ದು, ಆ ಯೋಜನೆಯನ್ನು ಕೂಡಾ ಸ್ಥಗಿತಗೊಳಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆಯೇ?" ಎಂದು ಹೇಳಿದ್ದಾರೆ.

"ಬಡ ಮಕ್ಕಳಿಗಾಗಿ ನಮ್ಮ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಒಂದೊಂದಾಗಿ ಸ್ಥಗಿತಗೊಳಿಸಲು ಸರ್ಕಾರ ಹೊರಟಿದೆ. ವಿದ್ಯಾಸಿರಿ ಯೋಜನೆಗೆ ಹಣ ನೀಡುತ್ತಿಲ್ಲ. ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿ ಊಟಕ್ಕೂ ಕಲ್ಲು ಹಾಕುತ್ತಿದೆ. ಈಗ ಸೈಕಲ್, ಶೂ, ಸಾಕ್ಸ್‌ಗಳನ್ನು ಕೂಡಾ ಕಿತ್ತುಕೊಳ್ಳುತ್ತಿದೆ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್