ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸರ್ಕಾರಗಳು ಸೋತಿವೆ : ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಕಳವಳ

santosh hegde
  • ʼಕೋವಿಡ್‌ ವಿನಾಯಿತಿ ಬಳಸಿಕೊಂಡ ಸರ್ಕಾರಗಳು ಯುವ ಜನರ ಬಾಳಿನಲ್ಲಿ ಆಟ ಆಡುತ್ತಿವೆʼ
  • ರಾಜ್ಯ ಮಟ್ಟದ ಯುವ ಜನರ ಸಮಾವೇಶ ಉದ್ಘಾಟಿಸಿ ನಿವೃತ್ತ ನ್ಯಾ. ಸಂತೋಷ್‌ ಹೆಗ್ಡೆ ಅಭಿಮತ 

ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದ್ದು, ನಿರುದ್ಯೋಗ ಸಮಸ್ಯೆಯಂತೂ ಭಾರತದ ಯುವ ಸಮೂಹವನ್ನು ಸಾಕಷ್ಟು ಭಾದಿಸುತ್ತಿದೆ. ಇದಕ್ಕೆ ಪರಿಹಾರ ಹುಡುಕುವಲ್ಲಿ ಸರ್ಕಾರಗಳು ಸಂಪೂರ್ಣ ಸೋತಿವೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಗುರುವಾರ ಅಖಿಲ ಭಾರತ ನಿರುದ್ಯೋಗ ಯುವಜನರ ಹೋರಾಟ ಸಮಿತಿ ಆಯೋಜಿಸಿದ್ದ ʼರಾಜ್ಯ ಮಟ್ಟದ ಯುವ ಜನರ ಸಮಾವೇಶʼ ಉದ್ಘಾಟಿಸಿ ಅವರು ಮಾತನಾಡಿದರು.

“ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ನಿರೀಕ್ಷೆ ಈಗ ಬೇರೆಯೇ ಇದೆ. ಯುವಕರು ದೇಶದ ಭವಿಷ್ಯ ಎಂಬುದನ್ನು ಆಡಳಿತದಲ್ಲಿರುವವರು ಮರೆತಿದ್ದಾರೆ. ನ್ಯಾಯಾಂಗದ ಹೆದರಿಕೆಯಂತೂ ಅವರಿಗೆ ಇಲ್ಲವೇ ಇಲ್ಲ. ಅನಿವಾರ್ಯವಾಗಿ ಪ್ರತಿಭಟನೆಯೇ ನಮ್ಮ ಮುಂದಿರುವ ದಾರಿ. ಸರ್ಕಾರಕ್ಕೆ ಬಿಸಿ ಮುಟ್ಟುವವರೆಗೂ ನಾವು ಶಾಂತಿಯಿಂದ ಪ್ರತಿಭಟಿಸಬೇಕು” ಎಂದು ಪ್ರತಿಪಾಧಿಸಿದರು.

ಕೋವಿಡ್‌ ವಿನಾಯಿತಿ ಈಗ ಆಟವಾಗಿದೆ

“ಕೋವಿಡ್‌ ವಿನಾಯಿತಿ ಬಳಸಿಕೊಂಡ ಸರ್ಕಾರಗಳು ಯುವ ಜನರ ಬಾಳಿನಲ್ಲಿ ಆಟ ಆಡುತ್ತಿವೆ. ದುರಾಸೆಯ ಪ್ರತಿಫಲ ಸಮಾಜವನ್ನು ಕಾಡುತ್ತಿದೆ. ಆಡಳಿತದ ನಿರ್ಧಾರಗಳ ವಿರುದ್ಧ ನ್ಯಾಯಾಲಯ ಮೊರೆ ಹೋದರೆ ಕೋರ್ಟ್‌ನಲ್ಲೂ ಸರಿಯಾದ ಸಮಯಕ್ಕೆ ನ್ಯಾಯಸಿಗುತ್ತಿಲ್ಲ. ಈ ಎಲ್ಲ ಹತಾಸೆ ಯುವಜನರ ಮನಸಲ್ಲಿ ಮೂಡಿ ಆಕ್ರೋಶಕ್ಕೆ ಕಾರಣವಾಗಿದೆ” ಎಂದರು.

“ಭ್ರಷ್ಟಾಚಾರ ಸಮಾಜದಲ್ಲಿ ಬೆಳೆಯಲು ಸರ್ಕಾರ ಮತ್ತು ಲಂಚಕೊಡುವವರು ಕಾರಣ. ಲಂಚ ಕೊಡುವವರು ಹಾಗೂ ಅದನ್ನು ಪಡೆದುಕೊಳ್ಳುವವರು ಯಾವತ್ತಿಗೂ ಮೋಸಗಾರರು. ಅವರಿಗೆ ಯಾವುದೇ ಅನುಕಂಪ ಬೇಡ. ಇದಕ್ಕೆಲ್ಲ ಪರಿಹಾರ ಕಾನೂನಿನಲ್ಲಿ ಸಾಧ್ಯವಿದೆ ಅಂತ ನನಗೆ ಈಗಲೂ ಅನ್ನಿಸುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಹಗರಣಗಳ ಸರಮಾಲೆ

50ರ ದಶಕದಲ್ಲಿ ʼಜೀಪ್‌ ಹಗರಣʼ, 60ರ ದಶಕದಲ್ಲಿ ಬೋಪರ್ಸ್‌ ಹಗರಣ, 70ರ ದಶಕದಲ್ಲಿ ಕಾಮರ್ಸ್‌ ಹಗರಣ, 2010 ಕೋಲ್ಗೇಟ್‌ ಮತ್ತು 2ಜಿ ಹಗರಣ ಹೀಗೆ ಪ್ರತಿ ಹಗರಣದಲ್ಲೂ ಬಜೆಟ್‌ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಪಿಎಸ್‌ಐ ಅಕ್ರಮದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಸುಮಾರು 50 ಲಕ್ಷ ರೂ.ವರೆಗೂ ಅಭ್ಯರ್ಥಿಗಳ ಬಳಿ ವಸೂಲಿ ಮಾಡಲಾಗಿದೆ ಎಂಬ ಆರೋಪಗಳು ಇವೆ. ಇದಕ್ಕೆಲ್ಲ ಕಾರಣ ದುರಾಸೆ. ಮೋಸದ ಹಿಂದೆ ತೃಪ್ತಿ ಯಾವತ್ತೂ ಇರಲ್ಲ. ಕಾನೂನು ಚೌಕಟ್ಟಿನಲ್ಲಿ ತೃಪ್ತಿ ಪಡಬೇಕು” ಎಂದರು.

“ಲೋಕಾಯುಕ್ತನಾಗಿ ನೇಮಕವಾದ ಮೇಲೆ ಬಹಳ ಅನ್ಯಾಯ ಕಂಡೆ. ಜೈಲಿಗೆ ಹೋಗಿ ಬಂದವರನ್ನು ಸಮಾಜ ವಿರೋಧಿಗಳು ಎಂದು ಭಾವಿಸಲಾಗುತ್ತಿತ್ತು. ಈಗ ಏನಾಗಿದೆ? ಜೈಲಿಗೆ ಹೋಗಿ ಬಂದರೆ ಅವರನ್ನು ಸತ್ಕಾರ ಮಾಡಲಾಗುತ್ತದೆ. ಇದು ನಮ್ಮ ಸಮಾಜವೇ” ಎಂದು ಪ್ರಶ್ನಿಸಿದರು.

ಪ್ರತಿ ಕುಟುಂಬ ಗೌರವಯುತವಾಗಿ ಬದುಕಬೇಕು

“ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಾತಿನಲ್ಲಿ ನಂಬಿಸಿ ದ್ರೋಹ ಮಾಡುತ್ತಿದ್ದಾರೆ. ಅವಿವೇಕಿತನದ ಉದ್ಯೋಗ ನೀತಿಯನ್ನು ತಿರಸ್ಕರಿಸಬೇಕು. ಪ್ರತಿ ಕುಟುಂಬಗಳು ಗೌರವಯುತವಾಗಿ ಬದುಕುವ ವಾತಾವರಣ ಸರ್ಕಾರ ನಿರ್ಮಿಸಬೇಕು. ಇದು ಆಗದಿದ್ದಲ್ಲಿ ಅಧಿಕಾರ ಕುರ್ಚಿಯಿಂದ ಕೆಳಗಿಳಿಯಬೇಕು” ಎಂದು ಚಿಂತಕ ಮಂಗ್ಳೂರು ವಿಜಯ ಆಕೋಶ ವ್ಯಕ್ತಪಡಿಸಿದರು.

“ಸರ್ಕಾರದಿಂದ ನಾವು ಭೀಕ್ಷೆ ಕೇಳಬೇಕಿಲ್ಲ. ಯಾವುದೇ ಸರ್ಕಾರ ನಮಗೆ ಉಪಕಾರ ಮಾಡುವುದು ಬೇಡ. ತನ್ನ ಕೆಲಸ ಏನಿದೆ ಅದನ್ನು ಮಾಡಲಿ ಅಷ್ಟೇ ಸಾಕು. ಉದ್ಯೋಗ ಸಿಗದೇ ಯುವಜನತೆ ಗೌರವ ಬದುಕಿನಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಯುವಕರಲ್ಲಿ ಕೀಳರಿಮೆ ಮೂಡುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಪೇ ಸಿಎಂ ಪೋಸ್ಟರ್ ಅಭಿಯಾನ | ಕಾಂಗ್ರೆಸ್ಸಿಗರ ಮೇಲೆ ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ

ಜೈಲಿಗೆ ಹೋಗೋಣ

“ಎಲ್ಲ ಯುವಕರು ಪ್ರತಿಭಟಿಸಬೇಕು. ಆ ಮೂಲಕ ಜೈಲಿಗೆ ಹೋಗಬೇಕು. ನಂತರ ಉದ್ಯೋಗ ಕೊಡೋವರೆಗೂ ಜೈಲಿನಿಂದ ಕದಲಲ್ಲ ಎಂದು ಪಟ್ಟು ಹಿಡಿಯಬೇಕು. ಆಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ? ನೋಡೋಣ” ಎಂದರು.

ಯುವಜನ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ ಎಸ್‌ ಕುಮಾರ್‌ ಮಾತನಾಡಿ, “ದೇಶದಲ್ಲಿ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಭಾರತದ ಡೆಮಾಕ್ರಟಿಕ್‌ ಡಿಸಾಸ್ಟರ್‌ಆಗಿ ಬದಲಾಗುತ್ತಿದೆ. ಆಧಾನಿ ಜಗತ್ತಿನ ಎರಡನೇ ಶ್ರೀಮಂತನಾಗಿರುವುದೇ ಇದಕ್ಕೆಲ್ಲ ಸಾಕ್ಷಿ. ಬಂಡವಾಳಶಾಹಿ ಪರವೇ ಸರ್ಕಾರ ಕೆಲಸ ಮಾಡುತಿವೆ” ಎಂದು ಕಿಡಿಕಾರಿದರು.

“ಕ್ರಾಂತಿ ಎಂದರೆ ಬೇರೆನೂ ಅಲ್ಲ; ಯುವಕರ, ಬಡವರ ಹಾಗೂ ಕಾರ್ಮಿಕರ ಮಧ್ಯೆ ಹೋಗಿ ದೇಶದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು. ನಮ್ಮ ಮುಂದೆ ರೈತ ಹೋರಾಟ ಮಾದರಿಯಾಗಿದೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ 8.5 ಲಕ್ಷ ಕೇಂದ್ರ ಸರ್ಕಾರದ ವಲಯದಲ್ಲಿ ಉದ್ಯೋಗ ಖಾಲಿ ಇದೆ. ದೇಶದಲ್ಲಿ ಒಟ್ಟಾರೆ 25 ಲಕ್ಷ ಸರ್ಕಾರಿ ನೌಕರಿಗಳು ತುಂಬಿಕೊಳ್ಳಬೇಕಿದೆ” ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180