ಕೊಡಗು | ಮಿನಿ ತಾರಾಲಯ ಮತ್ತು ವಿಜ್ಞಾನ ಕೇಂದ್ರಕ್ಕೆ ಸರ್ಕಾರದಿಂದ ಅನುಮೋದನೆ

Taralaya
  • ವಿಜ್ಞಾನ ಕೇಂದ್ರಕ್ಕೆ ₹4 ಕೋಟಿ, ಮಿನಿ ತಾರಾಲಯಕ್ಕೆ ₹5.7 ಕೋಟಿ ಮಂಜೂರು
  • ಕರ್ಣಂಗೇರಿ ಗ್ರಾಮದ 3 ಎಕರೆ ಪ್ರದೇಶದಲ್ಲಿ ನಿರ್ಮಾಣ

“ಕೊಡಗು ಜಿಲ್ಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಮಿನಿ ತಾರಾಲಯ ನಿರ್ಮಾಣ ಮಾಡುವ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ” ಎಂದು ಜಿಲ್ಲಾಧಿಕಾರಿ ಸತೀಶ ಬಿ.ಸಿ. ಹೇಳಿದ್ದಾರೆ

₹9.7 ಕೋಟಿ ಅಂದಾಜು ವೆಚ್ಚದಲ್ಲಿ ಮಿನಿ ತಾರಾಲಯ ಮತ್ತು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಯೋಜನೆ ಹಾಕಲಾಗಿದೆ. ವಿಜ್ಞಾನ ಕೇಂದ್ರಕ್ಕೆ ₹4 ಕೋಟಿ  ಮಂಜೂರಾಗಿದ್ದರೆ, ಮಿನಿ ತಾರಾಲಯಕ್ಕೆ ₹5.7 ಕೋಟಿ ಮೀಸಲಿಡಲಾಗಿದೆ ಎಂದರು

ಕರ್ನಾಟಕ ಸೈನ್ಸ್ ಮತ್ತು ಟೆಕ್ನಾಲಜಿ ಪ್ರಮೋಷನ್ ಸೊಸೈಟಿ (ಕೆಎಸ್‌ಟಿಪಿಎಸ್) ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಮನಗರ | ಮಲ್ಲೂರು ಗ್ರಾಮದಲ್ಲಿ ಪ್ರಾಣಿಗಳಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ

ಈ ವಿಷಯವಾಗಿ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದೆ. ತಾರಾಲಯ ಹಾಗೂ ವಿಜ್ಞಾನ ಕೇಂದ್ರ ಪರಿಸರ ಸ್ನೇಹಿಯಾಗಿ ಇರುವಂತೆ  ಸೂಚಿಸಿದ್ದು, ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದ 3 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಜಿಲ್ಲೆಯ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು. 

ವಿಜ್ಞಾನ ಕೇಂದ್ರದಲ್ಲಿ ಮಕ್ಕಳಿಗಾಗಿ ಅನೇಕ ವಿಶೇಷ ಅಂಶಗಳನ್ನು ತರಲಾಗುವುದು.  ಪ್ರಯೋಗಗಳ ಮೂಲಕ ವಿಜ್ಞಾನವನ್ನು ಕಲಿಯಲು ಅನುವು ಮಾಡಿಕೊಡಲಾಗುವುದು. ಕಾಮಗಾರಿಗೆ ಚಾಲನೆ ನೀಡುವ ಮುನ್ನ ಮಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ವಿಜ್ಞಾನ ಕೇಂದ್ರಗಳ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ. ಯೋಜನೆ ರೂಪಿಸಿದ ನಂತರ ಕೆಎಸ್‌ಟಿಪಿಎಸ್‌ಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.

ಮೂಲ : ಟೈಮ್ಸ್‌ ಆಫ್‌ ಇಂಡಿಯಾ
ನಿಮಗೆ ಏನು ಅನ್ನಿಸ್ತು?
0 ವೋಟ್