ವಿಶ್ವವಿದ್ಯಾಲಯಗಳ ವ್ಯವಹಾರದಲ್ಲಿ ಮೂಗು ತೂರಿಸುವ ಸರ್ಕಾರ: ಹೈಕೋರ್ಟ್ ತರಾಟೆ

High Court
  • 25 ವರ್ಷಗಳ ಹಿಂದೆಯೇ ನ್ಯಾಯಾಲಯದಿಂದ ಸರ್ಕಾರಕ್ಕೆ ಎಚ್ಚರಿಕೆ
  • ಆದೇಶ ಬದಿಗೊತ್ತಿ ಮೂಗು ತೂರಿಸುವುದು ನ್ಯಾಯಾಂಗ ನಿಂದನೆ

ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದಂತೆ 25 ವರ್ಷಗಳ ಹಿಂದೆಯೇ ಸ್ವಷ್ಟಪಡಿಸಿದ್ದರೂ, ಸರ್ಕಾರ ಮೂಗು ತೂರಿಸುವುದನ್ನು ಮುಂದುವರಿಸಿದೆ” ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಯುಎಎಸ್) ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ಪಿ ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲಿರುವ ಹುದ್ದೆಗಳಿಗೆ ತಾತ್ಕಾಲಿಕ ಅಥವಾ ಅರೆ ತಾತ್ಕಾಲಿಕ ಆಧಾರದ ಮೇಲೆ ನೇಮಕಾತಿ ಮಾಡುವಾಗ ಹಿರಿಯ ಪ್ರಾಧ್ಯಾಪಕರನ್ನು ಮಾತ್ರ ನೇಮಿಸಿಕೊಳ್ಳಬೇಕು. ಅದಕ್ಕಾಗಿ 2019ರ ಸೂಚನೆಯನ್ನು ಅನುಸರಿಸಬೇಕೆಂದು ಯುಎಎಸ್‌ಗೆ ರಾಜ್ಯ ಸರ್ಕಾರ ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಪೀಠವು ನೀಡಿದ ಆದೇಶವನ್ನು ಪ್ರಶ್ನಿಸಿ, ಯುಎಎಸ್ ಮೇಲ್ಮನವಿ ಸಲ್ಲಿಸಿತ್ತು. 

“ವಿಶ್ವವಿದ್ಯಾಲಯಗಳು ಸರ್ಕಾರಿ ಇಲಾಖೆಗಳ ವಿಸ್ತರಣೆಯಲ್ಲ. ಅಥವಾ ಅಧಿಕಾರ ವ್ಯವಸ್ಥೆಯ ಅಂಗಸಂಸ್ಥೆಗಳಲ್ಲ. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳು. ಹಾಗಾಗಿ ಅವುಗಳ ಸ್ವಾಯತ್ತತೆಯನ್ನು ಗೌರವಿಸಬೇಕು. ಸರ್ಕಾರಿ ಇಲಾಖೆಗಳ ಕಾರ್ಯದರ್ಶಿಗಳು, ಕಾನೂನು ವ್ಯಾಪ್ತಿಯನ್ನು ಮೀರಿ ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಹೇಳಿದೆ.

“ಹೀಗಾಗಲೇ, 1998ರಲ್ಲಿ ನ್ಯಾಯಾಲಯವು ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸದಂತೆ ಸರ್ಕಾರಕ್ಕೆ ಆದೇಶ ನೀಡಿದ್ದರೂ, ಸರ್ಕಾರ ಹಸ್ತಕ್ಷೇಪ ಮಾಡುತ್ತಲೇ ಇದೆ. ಈ ನಡೆಯು ನ್ಯಾಯಾಂಗ ನಿಂದನೆಯಾಗುತ್ತದೆ” ಎಂದು ಪೀಠವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಇದನ್ನು ಓದಿದ್ದೀರಾ? ಅಧಿಕಾರಿಗಳಿಗೆ, ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಮೇಲೆ ಗೌರವವಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

2019ರಲ್ಲಿ ಸರ್ಕಾರ ನೀಡಿದ್ದ ಕೆಲವು ಸೂಚನೆಗಳಿಂದ, ವಿಶ್ವವಿದ್ಯಾನಿಲಯದ ವ್ಯವಹಾರಗಳಲ್ಲಿ ಸರ್ಕಾರ ಭಾಗಿಯಾಗುತ್ತಿದೆ ಎಂದು ವಿಭಾಗೀಯ ಪೀಠವು ಗಮನಿಸಿತ್ತು. ಜೊತೆಗೆ 'ಯುಎಎಸ್ ಕಾಯ್ದೆ-2009'ರ ಪ್ರಕಾರ, ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಅಭಿಪ್ರಾಯದ ಮೇರೆಗೆ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಲು ಉಪಕುಲಪತಿಗಳಿಗೆ ಅಧಿಕಾರ ನೀಡಲಾಗಿದೆ.

"ಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡದ ಆಡಳಿತ ಮಂಡಳಿಯು, ಸೇವಾ ಹಿರಿತನವನ್ನು ಬದಿಗಿರಿಸಿ, ನಿಯಮದಂತೆ ಮೀಸಲಾತಿ ಅನುಸಾರಿ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡುವ ನಿರ್ಧಾರ ತೆಗೆದುಕೊಂಡಿದೆ" ಎಂದು ವಿಭಾಗೀಯ ಪೀಠವು ಉಪಕುಲಪತಿಗಳ ತೀರ್ಮಾನವನ್ನು ಎತ್ತಿಹಿಡಿದಿದೆ.

ಕೃಷಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಆರ್ ಬಸವರಾಜಪ್ಪ ಅವರನ್ನು ʼಶೈಕ್ಷಣಿಕ ನಿರ್ದೇಶಕʼರನ್ನಾಗಿ ನೇಮಿಸಿರುವ ಉಪಕುಲಪತಿಗಳ ನಿರ್ಧಾರವನ್ನು ವಿಭಾಗೀಯ ಪೀಠವು ಪುರಸ್ಕರಿಸಿದೆ. 

ಈ ಮೊದಲು, ಶಿಕ್ಷಣ ನಿರ್ದೇಶಕರ ಹುದ್ದೆಗೆ ಬಸವರಾಜಪ್ಪ ಅವರಿಗಿಂತ ಹಿರಿಯರಾಗಿರುವ ತಮ್ಮನ್ನು ನೇಮಿಸಬೇಕು ಎಂದು ದಿಗಂಬರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠವು ಪುರಸ್ಕರಿಸಿತ್ತು. ಅಲ್ಲದೆ, ಬಸವರಾಜಪ್ಪ ಅವರ ನೇಮಕವನ್ನು ರದ್ದುಗೊಳಿಸಿತ್ತು. ಏಕ ಸದಸ್ಯ ಪೀಠದ ತೀರ್ಪಿನ ವಿರುದ್ಧ ಯುಎಎಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ದ್ವಿಸದಸ್ಯ ಪೀಠ, ಉಪಕುಲಪತಿಗಳ ನಿರ್ಧಾರವನ್ನು ಎತ್ತಿಹಿಡಿದಿದೆ. ಬಸವರಾಜಪ್ಪ ಅವರನ್ನು ಶಿಕ್ಷಣ ನಿರ್ದೇಶಕರಾಗಿ ಮುಂದುವರಿಸಲು ಆದೇಶಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್