ಸರ್ಕಾರದ ನಿಷ್ಕ್ರಿಯತೆ, ಸಚಿವರ ಅಸಾಮರ್ಥ್ಯ ಮಾಧುಸ್ವಾಮಿಯಿಂದ ಬಯಲು: ಕಾಂಗ್ರೆಸ್

j c madhuswamy
  • ಮಾಧುಸ್ವಾಮಿಯವರದ್ದು ಎನ್ನಲಾದ ಆಡಿಯೋ ಸಂಭಾಷಣೆ ಹಂಚಿಕೊಂಡ ಕಾಂಗ್ರೆಸ್‌ 
  • 'ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ ಅಷ್ಟೇ' ಎಂದ ಸಚಿವರು!

“ಸರ್ಕಾರದ ನಿಷ್ಕ್ರಿಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿವೆ” ಎಂದು ಕಾಂಗ್ರೆಸ್‌ ಕುಟುಕಿದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ ಸಿ ಮಾಧುಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಕಾಂಗ್ರೆಸ್‌ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

“ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿಷ್ಕ್ರಿಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?” ಎಂದು ತಿವಿದಿದೆ.‌

ಆಡಿಯೋ ಸಂಭಾಷಣೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಬ್ಯಾಂಕ್‌ಗಳಲ್ಲಿ ರೈತರ ಸಾಲದ ವಿಚಾರದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುವ ಸಚಿವರು, “ಇದೆಲ್ಲವೂ ನನಗೆ ಗೊತ್ತು. ಸಚಿವ ಸೋಮಶೇಖರ್‌ ಗಮನಕ್ಕೂ ಇದನ್ನು ತರಲಾಗಿದೆ. ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಏನು ಮಾಡೋದು?” ಎಂದು ಅಸಹಾಯಕವಾಗಿ ಕೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ.

“ಬ್ಯಾಂಕಿನವರಿಗೆ ರೈತರಷ್ಟೇ ಅಲ್ಲ. ನಾನೂ ಹಣ ಕಟ್ಟಿದ್ದೇನೆ. ಸರ್ಕಾರ ನಡೆಯುತ್ತಿಲ್ಲ. ಮ್ಯಾನೇಜ್‌ ಮಾಡುತ್ತಿದ್ದೇವೆ ಅಷ್ಟೆ. ತಳ್ಳಿದರೆ ಸಾಕು ಇನ್ನೆಂಟು ತಿಂಗಳು ಎಂದು ತಳ್ಳುತ್ತಿದ್ದೇವೆ” ಎಂದೂ ತಿಳಿಸಿದ್ದಾರೆ.

ಅದು ನಿಜವಾಗಿಯೂ ಸಚಿವ ಮಾಧುಸ್ವಾಮಿಯವರ ಧ್ವನಿಯೇ ಅಲ್ಲವೇ ಎನ್ನುವುದು ಖಚಿತವಾಗಿಲ್ಲ.    

ನಿಮಗೆ ಏನು ಅನ್ನಿಸ್ತು?
0 ವೋಟ್