ʻಪುಣ್ಯಕೋಟಿʼಗಾಗಿ ಸರ್ಕಾರಿ ನೌಕರರ ವೇತನ ಕಡಿತಕ್ಕೆ ರಾಜ್ಯ ಸರ್ಕಾರ ಆದೇಶ : ನೌಕರರ ಸಂಘಗಳಿಂದ ಬಹಿರಂಗ ವಿರೋಧ

CM
  • ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ ಗುರುಸ್ವಾಮಿ ತೀವ್ರ ವಿರೋಧ
  • ಕಡಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

ʼಪುಣ್ಯಕೋಟಿ ದತ್ತು ಯೋಜನೆʼಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕರಿ ನೌಕರರ ವೇತನದಿಂದ ಒಂದು ದಿನದ ಸಂಬಳ ಕಡಿತ ಮಾಡಿ ನಿಗದಿತ ಯೋಜನೆಗೆ ಬಳಸುವ ಕುರಿತು ಸರ್ಕಾರ ಆದೇಶಿಸಿದೆ. ಆದರೆ, ಸ್ವತಃ ಸಚಿವಾಲಯದ ನೌಕರರಿಂದಲೇ ಸರ್ಕಾರದ ಈ ನಡೆಗೆ ವಿರೋಧ ವ್ಯಕ್ತವಾಗಿದ್ದು, ತಮ್ಮ ವೇತನ ಕಡಿತ ಮಾಡದಂತೆ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿ ಉಮಾ ಕೆ ಅವರು ರಾಜ್ಯಪಾಲರ ಆದೇಶಾನುಸಾರ ನಡಾವಳಿ ಪತ್ರ ಹೊರಡಿಸಿದ್ದು, ನಡಾವಳಿ ಪ್ರತಿ ಈ ದಿನ.ಕಾಮ್‌ಗೆ ಲಭಿಸಿದೆ.

Eedina App

2022-23ರ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ದತ್ತು ಯೋಜನೆ ಆರಂಭಿಸುವುದಾಗಿ ಘೋಷಿಸಿದ್ದರು. ಸದರಿ ಯೋಜನೆಯ ದ್ಯೇಯೋದ್ದೇಶಕ್ಕೆ ಪೂರಕವಾಗಿ ಗೋವುಗಳನ್ನು ಪೋಷಿಸುವ ಕಾರ್ಯದಲ್ಲಿ ರಾಜ್ಯದ ಸರ್ಕಾರಿ ನೌಕರರು ಸಹಕರಿಸುವಂತೆ ಶಿಕ್ಷಕರ ದಿನಾಚರಣೆ ವೇಳೆ ಮನವಿ ಮಾಡಿದ್ದರು.

ಮುಖ್ಯಮಂತ್ರಿಗಳ ಮನವಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್‌ ಷಡಾಕ್ಷರಿ ಸ್ಪಂದಿಸಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ಸಂಬಳ ಕೊಡಲು ಒಪ್ಪಿಗೆ ಸೂಚಿಸಿದ್ದರು. ಭಾರತೀಯ ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳು ದೇಶದ ಸಂಸ್ಕೃತಿ ಪ್ರತೀಕ. ಗೋ ಸಂತತಿಯನ್ನು ರಕ್ಷಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಹಾಗೂ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವವಿದ್ಯಾಲಯ/ಸ್ವಾಯತ್ತ ಸಂಸ್ಥೆಗಳ ನೌಕರರ ವೇತನದಿಂದ ಒಂದು ದಿನದ ಸಂಬಳ ಕಡಿತ ಮಾಡಿ ನಿಗದಿತ ಯೋಜನೆಗೆ ಬಳಸುವಂತೆ ಸಿ ಎಸ್‌ ಷಡಾಕ್ಷರಿ ಆರ್ಥಿಕ ಇಲಾಖೆಗೆ ಕೋರಿದ್ದರು.

AV Eye Hospital ad

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಪ್ರಸ್ತಾವಣೆ ಪರಿಗಣಿಸಿದ ಸರ್ಕಾರ, ʼಎʼ ವೃಂದ ನೌಕರರಿಂದ 11 ಸಾವಿರ ರೂ, ʼಬಿʼ ವೃಂದ ನೌಕರರಿಂದ 4 ಸಾವಿರ ರೂ, ʼಸಿʼ ವೃಂದ ನೌಕರರಿಂದ 400 ಕಡಿತಗೊಳಿಸಲು ಆದೇಶ ನೀಡಿ, ʼಡಿʼ ನೌಕರಿಗೆ ವಿನಾಯಿತಿ ಕಲ್ಪಿಸಿದೆ.

ನವೆಂಬರ್‌ ತಿಂಗಳಿನ ಒಂದು ದಿನದ ಸಂಬಳ ಕಡಿತ

ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರ ವೇತನದಲ್ಲಿ ನವೆಂಬರ್‌ ತಿಂಗಳಿನ ಒಂದು ದಿನದ ಸಂಬಳ ಕಡಿತಗೊಳಿಸಿ, ಆ ಮೊತ್ತವನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರ ಖಜಾನೆಗೆ ಸಂದಾಯ ಮಾಡಲು ಸೂಚಿಸಲಾಗಿದೆ.

ವೇತನದಿಂದ ನಿಗದಿತ ಹಣವನ್ನು ಕೊಡಲಿಚ್ಚಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ನವೆಂಬರ್‌ 25ರೊಳಗೆ ತಿಳಿಸಿದರೆ, ಅಂತಹ ನೌಕರರ ವೇತನದಿಂದ ಸಂಬಳ ಕಡಿತ ಮಾಡತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಚಿವಾಲಯ ನೌಕರರ ವಿರೋಧ

ವೇತನ ಕಡಿತ ವಿಚಾರವಾಗಿ ವಿಧಾನಸಭಾ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಪಿ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರಿ ನೌಕರರ ವೇತನ ಕಡಿತ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಯಾರ ಒಪ್ಪಿಗೆ ಇಲ್ಲದೆ ತಾವೇ ಏಕಮುಖವಾಗಿ ನಿರ್ಧರಿಸಿದ್ದಾರೆ. ಹೀಗಾಗಿ  ಸಚಿವಾಲಯದ ನೌಕರರು ಯಾರೂ ಈ ಕ್ರಮಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಾವೆಲ್ಲ ವೇತನ ಕಡಿತ ಮಾಡದಂತೆ ಲಿಖಿತವಾಗಿ ಬರೆದುಕೊಡುತ್ತಿದ್ದೇವೆ” ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app