
- ಸಂವಿಧಾನದಲ್ಲಿ ಎಲ್ಲರಿಗೂ ವ್ಯಾಪಾರ ಮಾಡುವ ಹಕ್ಕಿದೆ
- ಹಿಂದೂ ಸಂಘಟನೆಗಳಿಗೆ ಸಚಿವ ಮಾಧುಸ್ವಾಮಿ ಎಚ್ಚರಿಕೆ
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವುದು ಕಾನೂನು ಉಲ್ಲಂಘನೆ, ಇಂತಹ ಕೆಲಸದಲ್ಲಿ ತೊಡಗಿರುವ ಹಿಂದೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಎಚ್ಚರಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಿಂದೂ ಸಂಘಟನೆಗಳು ನಿರ್ಬಂಧ ಹೇರಿವೆ. ಹಿಂದೂ ದೇವಾಲಯಗಳ ಎದುರು ಮತ್ತು ಹಿಂದೂ ಸಂತೆಗಳಲ್ಲಿ ವ್ಯಾಪಾರ ಮಾಡುವ ಮುಸ್ಲಿಮರನ್ನು ಒತ್ತಾಯಪೂರ್ವಕವಾಗಿ ನಿಷೇಧಿಸಲಾಗುತ್ತಿದೆ.
ಶನಿವಾರ ಧಾರವಾಡದ ನುಗ್ಗಿಕೇರಿಯ ಹನುಮಾನ್ ದೇವಾಲಯದ ಬಳಿ ಹಣ್ಣಿನ ಅಂಗಡಿ ಇಟ್ಟಿದ್ದ ನಬಿಸಾಬ್ ಮುಸ್ಲಿಂ ವ್ಯಾಪಾರಿ ಎಂಬ ಏಕೈಕ ಕಾರಣಕ್ಕೆ ಶ್ರೀರಾಮ ಸೇನೆಯವರು 5 ಕ್ವಿಂಟಾಲ್ ಕಲ್ಲಂಗಡಿಯನ್ನು ರಸ್ತೆಗೆ ಎಸೆದು ಧ್ವಂಸ ಮಾಡಿದ್ದರು. ಈ ಘಟನೆ ನಾಡಿನ ಜನರ ಮನ ಕಲಕಿತ್ತು. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ನಡೆದು ಒಂದು ದಿನವಾದರೂ ಮುಖ್ಯಮಂತ್ರಿಯಾಗಲಿ ಸಂಬಂಧಪಟ್ಟ ಸಚಿವರಾಗಲಿ ಯಾರೂ ತುಟಿ ಬಿಚ್ಚದೆ ಇರುವುದು, ಸಾರ್ವಜನಿಕರ ಟೀಕೆಗೆ ಕಾರಣವಾಗಿತ್ತು. ಇದೀಗ ಕಾನೂನು ಸಚಿವ ಮಾಧುಸ್ವಾಮಿ ಮೊದಲ ಬಾರಿಗೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನು ಉಲ್ಲಂಘಿಸಿದರೆ ಕ್ರಮ
ಶನಿವಾರ ನಡೆದ ನುಗ್ಗಿಕೇರಿ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆ ಸಿ ಮಾಧುಸ್ವಾಮಿ, "ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ವ್ಯಾಪಾರ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಹೀಗಾಗಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವವರು ಅಥವಾ ಗಲಾಟೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ. ಕಾನೂನು ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ?: ನುಗ್ಗಿಕೇರಿ ಘಟನೆ| ತುಟಿ ಬಿಚ್ಚದ ಆಡಳಿತದ ವಿರುದ್ಧ ಜನಾಕ್ರೋಶ, ಟ್ರೆಂಡ್ ಆದ #ArrestSanghiGoons
"ಮುಸ್ಲಿಂ ವರ್ತಕರ ನಿರ್ಬಂಧಕ್ಕೆ ಸರ್ಕಾರದ ಬೆಂಬಲವಿಲ್ಲ. ಹಿಂದೂಪರ ಸಂಘಟನೆಗಳವರು ಏಕೆ ಹೀಗೆ ಮಾಡುತ್ತಿದ್ದಾರೆ? ಕಾನೂನು ಕೈಗೆತ್ತಿಕೊಂಡರೆ, ಮಿತಿ ಮೀರಿ ವರ್ತಿಸಿದರೆ ಸರ್ಕಾರ ಕ್ರಮ ವಹಿಸಿಯೇ ತೀರುತ್ತದೆ. ಇದರಲ್ಲಿ ಎರಡು ಮಾತಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.