‘ಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆಗೆ ಭರ್ಜರಿ ಸಿದ್ಧತೆ: 90 ಸಾವಿರಕ್ಕೂ ಹೆಚ್ಚು ಜನರಿಂದ ಆನ್ಲೈನ್ ನೋಂದಣಿ

D K Shivakumar
  • ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ
  • ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ:  ಡಾ ಜಿ ಪರಮೇಶ್ವರ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆಗಸ್ಟ್‌ 15ರಂದು ಆಯೋಜಿಸಿರುವ ‘ಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆಗೆ ಭರ್ಜರಿ ಸಿದ್ಧತೆ ನಡೆದಿದೆ.

ʼಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ ನೇತೃತ್ವದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. 

“ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಈಗಾಗಲೇ 90 ಸಾವಿರಕ್ಕೂ ಹೆಚ್ಚು ಜನರು ಆನ್ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ವ್ಯವಸ್ಥೆಗಾಗಿ 11 ಉಪಸಮಿತಿ ರಚಿಸಲಾಗಿದ್ದು, ಜವಾಬ್ದಾರಿ ಹಂಚಿಕೆ ಮಾಡಲಾಗಿದೆ” ಎಂದು ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ.

ಸ್ವಾತಂತ್ರ್ಯ ನಡಿಗೆಯಲ್ಲಿ ಪಾಲ್ಗೊಳ್ಳುವ ಪ್ರತಿ ವ್ಯಕ್ತಿಗೆ ಟಿ-ಶರ್ಟ್, ಕ್ಯಾಪ್ ಹಾಗೂ ಕಿಟ್ ವಿತರಿಸಲಾಗುತ್ತಿದೆ. ಸಾರಿಗೆ, ಆಹಾರ ಹಾಗೂ ಮಾಧ್ಯಮ ಸೇರಿದಂತೆ ವಿವಿಧ ಸಂಗತಿಗಳತ್ತ ಗಮನ ಹರಿಸಲು ಉಪಸಮಿತಿಗಳ ರಚನೆಯಾಗಿದೆ. 

ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ

ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕೆಆರ್ ವೃತ್ತ, ಹಡ್ಸನ್ ಸರ್ಕಲ್, ಜೆಸಿ ರಸ್ತೆ, ಮಿನರ್ವ ವೃತ್ತ, ವಿವಿಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಮೂಲಕ ಸ್ವಾತಂತ್ರ್ಯ ನಡಿಗೆ ಸಾಗಲಿದೆ. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಾದಯಾತ್ರೆಯು ಸಾಗಿಬರುವ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾದಯಾತ್ರೆ ಮಾರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಒಂದರಂತೆ 6 ಆಂಬುಲೆನ್ಸ್, ವೈದ್ಯರ ತಂಡ ಸಜ್ಜುಗೊಳಿಸಲಾಗಿದೆ. ಅಲ್ಲಲ್ಲಿ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಸಂಜೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಖ್ಯಾತ ಗಾಯಕ ಹರಿಹರನ್ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಭಾಷಣಗಳು ಇರುವುದಿಲ್ಲ ಎನ್ನಲಾಗಿದೆ.‌

ಈ ಸುದ್ದಿ ಓದಿದ್ದೀರಾ? ಕುರ್ಚಿ ಉಳಿಸಿಕೊಳ್ಳಲು ನೆಹರೂ ಫೋಟೋ ಕೈಬಿಡುವಷ್ಟು ಗುಲಾಮಗಿರಿ ಬಂತೆ ಬೊಮ್ಮಾಯಿ ಅವರೇ?: ಸಿದ್ದರಾಮಯ್ಯ ಕಿಡಿ

ಉಚಿತ ಮೆಟ್ರೋ ಪಾಸ್ ವ್ಯವಸ್ಥೆ

ಸೋಮವಾರ ನಡೆಯಲಿರುವ 'ಸ್ವಾತಂತ್ರ್ಯ ನಡಿಗೆ'ಯಲ್ಲಿ ಭಾಗವಹಿಸುವ ಹೊರ ಜಿಲ್ಲೆ ಜನರ ಅನುಕೂಲಕ್ಕೆ ಕಾಂಗ್ರೆಸ್ ಪಕ್ಷ ಬೆಂಗಳೂರು ನಗರದ ಹೊರ ವಲಯದಲ್ಲಿ ವಾಹನ ನಿಲುಗಡೆ ಹಾಗೂ ಮೆಟ್ರೋ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಪಾದಯಾತ್ರೆ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಸಾಗಿದ ನಂತರ ಜನರು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ತಾವುಗಳು ಬಂದ ಮೆಟ್ರೋ ನಿಲ್ದಾಣದವರೆಗೆ ವಾಪಸ್ ತೆರಳಲು ಉಚಿತ ಮೆಟ್ರೋ ಪಾಸ್ ವ್ಯವಸ್ಥೆ ಮಾಡಲಾಗಿದೆ.

“ನಗರದಲ್ಲಿ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಈ ವ್ಯವಸ್ಥೆ ಕಲ್ಪಿಸಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇನ್ನು ಬೆಂಗಳೂರಿನ ಜನರು ತಮ್ಮ ವಾಹನ ಬದಲಿಗೆ ಆದಷ್ಟು ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಮಾರ್ಗವನ್ನೇ ಬಳಸಿ ಪಾದಯಾತ್ರೆ ಆರಂಭದ ಸ್ಥಳಕ್ಕೆ ಆಗಮಿಸಬೇಕು. ಪಾದಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ಬಳಿಕ ಅದೇ ರೀತಿ ತಮ್ಮ ಮನೆಗಳಿಗೆ ಹಿಂತಿರುಗಬೇಕು. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಆಗದಂತೆ ತಡೆಯಬಹುದು. ಇದಕ್ಕೆ ಎಲ್ಲರೂ ಸಹಕರಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್