ಜಿಎಸ್‌ಟಿ ಪ್ರಹಾರ | ’ಒಂದು ದೇಶ ಒಂದು ತೆರಿಗೆ’ ಎಂಬ ಕಣ್ಕಟ್ಟು; ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು

ಹಣಕಾಸು ಇಲಾಖೆಯ ಅಂಕಿಅಂಶಗಳ ಪ್ರಕಾರ ಕೇಂದ್ರ ಸರ್ಕಾರ 2020-21ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ತೆರಿಗೆ ಪಾಲಿನಲ್ಲಿ ಈವರೆಗೆ 90 ಸಾವಿರ ಕೋಟಿ ಇನ್ನೂ ಬಾಕಿ ಇದೆ. ಅಲ್ಲದೆ, ವಿವಿಧ ಅನುದಾನದ ಪೈಕಿ 1,03,088 ಕೋಟಿ ರೂ. ರಾಜ್ಯಕ್ಕೆ ಬಂದಿಲ್ಲ. ಒಟ್ಟಾರೆ 1.9 ಲಕ್ಷ ಕೋಟಿ ಹಣ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವುದು ಬಾಕಿ ಉಳಿದಿದೆ.
Nirmala Sitaraman

‘ಜಿಎಸ್‌ಟಿ’ ಜಾರಿಯಾಗಿ ಐದು ವರ್ಷಗಳಾಗಿವೆ. ಆದರೆ, ಈ ಐದು ವರ್ಷದಲ್ಲಿ ತೆರಿಗೆ ಮತ್ತು ಅನುದಾನ ಸೇರಿದಂತೆ ಕರ್ನಾಟಕದ ಖಜಾನೆಗೆ ಕನಿಷ್ಟ ₹1.9 ಲಕ್ಷ ಕೋಟಿ ತೆರಿಗೆ ಹಣ ಖೋತಾ ಆಗಿದೆ.  

‘ಸಬ್ ಕಾ ಸಾಥ್‌, ಸಬ್ ಕಾ ವಿಕಾಸ್’, 'ಒಂದು ದೇಶ, ಒಂದು ತೆರಿಗೆ' ಎಂಬ ಕೇಂದ್ರ ಸರ್ಕಾರದ ಘೋಷಣೆಯೊಂದಿಗೆ ಜಾರಿಯಾದ ಮಹತ್ವಾಕಾಂಕ್ಷೆಯ ಯೋಜನೆಯೇ ‘ಜಿಎಸ್‌ಟಿ. ಏಕರೂಪಿ ತೆರಿಗೆ ನೀತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಬಿಜೆಪಿ ನಾಯಕರ ಬಲವಾದ ನಂಬಿಕೆಯಾಗಿತ್ತು. ಆದರೆ, ‘ಜಿಎಸ್‌ಟಿ’ ಜಾರಿಯಾದ ಕಳೆದ ಆರು ವರ್ಷಗಳಲ್ಲಿ ಕರ್ನಾಟಕದ ಆರ್ಥಿಕ ಸಾರ್ವಭೌಮತೆಗೆ ಪೆಟ್ಟು ಬಿದ್ದಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ರಾಜ್ಯ ಇಂದು ಸಾಲಕ್ಕಾಗಿ ಕೈಚಾಚುವ ಸ್ಥಿತಿ ಎದುರಾಗಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. 

Eedina App

ಆರ್ಥಿಕ ತಜ್ಞರು ಮತ್ತು ವಿರೋಧ ಪಕ್ಷದ ನಾಯಕರು ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಇಂತಹದ್ದೇ ಆರೋಪಗಳನ್ನು ಮುಂದಿಡುತ್ತಾ ಬಂದಿದ್ದಾರೆ. ಈ ಎಲ್ಲ ಆರೋಪಗಳ ನಡುವೆಯೇ ರಾಜ್ಯಸಭೆ ಚುನಾವಣೆ ಎದುರಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಅವಧಿಗೆ ಕರ್ನಾಟಕದಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಜಿಎಸ್ ಟಿ ಜಾರಿಯ ವಿಷಯದಲ್ಲಿ ಪ್ರಮುಖ ಪಾತ್ರವಹಿಸಿರುವ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ ಬಯಸಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಾಕಿ ಇರುವ ಜಿಎಸ್‌ ಟಿ ಪಾಲು ಸೇರಿದಂತೆ ಹಲವು ವಿಷಯಗಳು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿವೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಗ್ರಹವಾಗುವ ಜಿಎಸ್‌ಟಿ ಪ್ರಮಾಣ ಎಷ್ಟು, ಈ ಪೈಕಿ ರಾಜ್ಯಕ್ಕೆ ಎಷ್ಟು ಹಣ ವಾಪಾಸ್ ಬರಬೇಕು, ಎಷ್ಟು ಹಣ ಬಂದಿದೆ. ಕೇಂದ್ರದಿಂದ ರಾಜ್ಯಕ್ಕಾಗಿರುವ ಮೋಸವೇನು? ಈ ಬಗ್ಗೆ ಆರ್ಥಿಕ ತಜ್ಞರು ಏನಂತಾರೆ? ಎಂಬುದರ ಕುರಿತು 'ಈ ದಿನ. ಕಾಮ್' ಈ ವರದಿಯಲ್ಲಿ ಗಮನ ಹರಿಸಿದೆ.

AV Eye Hospital ad
kisan add
ಜಾಹೀರಾತು

 

 

 

 

ರಾಜ್ಯದಿಂದ ಸಂಗ್ರಹವಾಗುವ ಜಿಎಸ್‌ಟಿ ಪ್ರಮಾಣ ಎಷ್ಟು?

ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲೇ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗುವ ರಾಜ್ಯ ಮಹಾರಾಷ್ಟ್ರ. ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಮಹಾರಾಷ್ಟ್ರದಿಂದ ಪ್ರತಿ ತಿಂಗಳು ಸರಾಸರಿ ₹16,000 ಕೋಟಿ ಹಣ ಜಿಎಸ್‌ಟಿ ರೂಪದಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸೇರುತ್ತದೆ. ಮಹಾರಾಷ್ಟ್ರದ ಬಳಿಕ ಜಿಎಸ್‌ ಟಿ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವುದೇ ಕರ್ನಾಟಕ.

GST
ರಾಜ್ಯವಾರು ಜಿಎಸ್‌ಟಿ ಸಂಗ್ರಹ ಪಟ್ಟಿ.

ಕರ್ನಾಟಕದಲ್ಲಿ ಪ್ರತಿ ತಿಂಗಳು ಸರಾಸರಿ ₹8,335 ಕೋಟಿ ಜಿಎಸ್‌ಟಿ ಸಂಗ್ರಹವಾಗುತ್ತದೆ. ಈ ಪ್ರಮಾಣ ಪ್ರತಿವರ್ಷ ಶೇ.12ರಷ್ಟು ಏರಿಕೆಯಾಗುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ₹9,176 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಶೇ.21ರಷ್ಟು ಏರಿಕೆಯಾಗಿದೆ. ಹಾಗಾಗಿ ಕೇಂದ್ರದ ಪಾಲಿಗೆ ಕರ್ನಾಟಕ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ ಎಂಬುದು ಈ ಎಲ್ಲ ಅಂಕಿಅಂಶಗಳಿಂದ ದೃಢವಾಗುತ್ತದೆ.

ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ಪಿಆರ್‍‌ಎಸ್‌ ಸಂಸ್ಥೆ ನಡೆಸಿರುವ ರಾಜ್ಯ ಹಣಕಾಸಿನ ಅವಲೋಕನ ವರದಿಯ ಪ್ರಕಾರ, ಜಿಎಸ್‌ಟಿ ಜಾರಿಯಾಗುವ ಮುನ್ನ 2010-11ರಿಂದ 2013-14ರ ಅವಧಿಯಲ್ಲಿ ಕೇಂದ್ರದಿಂದ ರಾಜ್ಯದ ತೆರಿಗೆ ಪಾಲಿನ ನಿರೀಕ್ಷೆ ಇದ್ದದ್ದು ₹45,713 ಕೋಟಿ. ಆದರೆ, ಆ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ₹47,036 ಕೋಟಿ. ಈ ಅವಧಿಯಲ್ಲಿ ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಲಾಭವಾಗಿತ್ತು.

ಆದರೆ, ಜಿಎಸ್‌ಟಿ ಜಾರಿಯ ನಂತರ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಾಗೂ ಅನುದಾನದಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ.

2015-16ರಿಂದ 2019-20ರ ಅವಧಿಯಲ್ಲಿ; ಅಂದರೆ ಜಿಎಸ್‌ಟಿ ಜಾರಿಯ ಬಳಿಕ ರಾಜ್ಯದ ನಿರೀಕ್ಷೆ ಇದ್ದದ್ದು ₹2.37 ಲಕ್ಷ ಕೋಟಿ ಜಿಎಸ್‌ಟಿ ಪಾಲು. ಆದರೆ, ವಾಸ್ತವವಾಗಿ ಬಂದದ್ದು ಕೇವಲ ₹1.47 ಲಕ್ಷ ಕೋಟಿ! ಅಂದರೆ ರಾಜ್ಯದ ನಿರೀಕ್ಷೆಗಿಂತ ₹90 ಸಾವಿರ ಕೋಟಿ ಕಡಿಮೆ ಹಣ ಕೇಂದ್ರದಿಂದ ಸಂದಾಯವಾಗಿದೆ. 2020-22ರ ಅವಧಿಯಲ್ಲೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಒಟ್ಟು ₹14,000 ಕೋಟಿ ಬಾಕಿ ಉಳಿಸಿದೆ. ಬಾಕಿ ಹಣ ಸದ್ಯಕ್ಕಂತೂ ಸಂದಾಯವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

‘ಜಿಎಸ್‌ಟಿ' ತೆರಿಗೆ ನೀತಿಯಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಈ ದಿನ. ಕಾಮ್ ಜೊತೆ ಮಾತನಾಡುತ್ತಾ ಕಿಡಿಕಾರಿರುವ ಜಿಎಸ್‌ ಟಿ ಕೌನ್ಸಿಲ್‌ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಕೃಷ್ಣ ಭೈರೇಗೌಡ, "ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಡಬಲ್ ಡೆಕ್ಕರ್ ಸರ್ಕಾರ ಇದ್ರೆ ಸ್ವರ್ಗವನ್ನೇ ಇಳಿಸಿಬಿಡಬಹುದು ಎನ್ನುತ್ತಿದ್ದರು. ಆದರೆ, ಈಗ ನಮ್ಮ ಪಾಲಿನ ಹಣವನ್ನೇ ನಮಗೆ ನೀಡದೆ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕರ್ನಾಟಕದ ಖಜಾನೆ ಖಾಲಿಯಾಗಲಿದೆ. ಸಾಲ ಮತ್ತಷ್ಟು ಅಧಿಕವಾಗಿ ರಾಜ್ಯ ದಿವಾಳಿಯಾಗಲಿದೆ" ಎಂದು ಎಚ್ಚರಿಸಿದ್ದಾರೆ.

ಜಿಎಸ್‌ಟಿ ಪರಿಹಾರವೂ ಖೋತಾ

ಜಿಎಸ್‌ಟಿ ಜಾರಿಯಾದ ನಂತರ ರಾಜ್ಯಗಳ ತೆರಿಗೆ ಪಾಲಿನಲ್ಲಿ ನಷ್ಟವಾಗಿದೆ. ಹೀಗಾಗಿ ರಾಜ್ಯವಾರು ನಷ್ಟ ತುಂಬಿಕೊಡುವ ನಿಟ್ಟಿನಲ್ಲಿ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ₹5,335 ಕೋಟಿ ಪರಿಹಾರ ಘೋಷಣೆ ಮಾಡಿತ್ತು. ಆದರೆ, ಪರಿಹಾರ ಘೋಷಿಸಿ ಎರಡು ವರ್ಷ ಕಳೆದರೂ ಈವರೆಗೆ ರಾಜ್ಯದ ಖಾತೆಗೆ ಈ ಹಣ ಜಮಾ ಆಗಿಲ್ಲ. ಸಚಿವೆ ನಿರ್ಮಲಾ ಸೀತಾರಾಮನ್ ಪರಿಹಾರ ನೀಡಲು ಒಪ್ಪಿಗೆ ನೀಡದೇ ಇರುವ ಏಕೈಕ ಕಾರಣಕ್ಕೆ ರಾಜ್ಯದ ನ್ಯಾಯಯುತ ಪಾಲು ಈವರೆಗೆ ಸಿಕ್ಕಿಲ್ಲ. ಇಂತಹ ಕೆಲವು ಕರ್ನಾಟಕ ವಿರೋಧಿ ನಿಲುವುಗಳ ಕಾರಣದಿಂದಲೂ ರಾಜ್ಯದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ ಎಂಬ ಅಭಿಪ್ರಾಯವಿದೆ.

"ಒಂದು ದೇಶ ಒಂದು ತೆರಿಗೆ ಎಂಬುದೇ ಆತಂಕಕಾರಿ ನಿರ್ಧಾರ. ಏಕೆಂದರೆ ಎಲ್ಲಾ ರಾಜ್ಯಗಳಿಗೂ ತೆರಿಗೆ ವಿಧಿಸುವ ಅಧಿಕಾರವನ್ನು ಸಂವಿಧಾನ ನೀಡಿದೆ. ಹಾಗೆ ನೋಡಿದರೆ ಜಿಎಸ್‌ಟಿ ಎಂಬುದೇ ಸಂವಿಧಾನ ವಿರೋಧಿ ನಡೆ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು. ಆದರೆ, ಇದನ್ನು ಜಾರಿ ಮಾಡುವ ಮೂಲಕ ರಾಜ್ಯದ ಸ್ವಾಯತ್ತತೆಗೆ ಧಕ್ಕೆ ತರಲಾಗಿದೆ. ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಕ್ಕೆ ಈಗ ಕೈಚಾಚುವ ಪರಿಸ್ಥಿತಿ ಎದುರಾಗಿದೆ" ಎಂದು ಈ ದಿನ.ಕಾಮ್ ಜೊತೆ ಮಾತನಾಡುತ್ತಾ ಆರ್ಥಿಕ ತಜ್ಞ ಟಿ ಆರ್ ಚಂದ್ರಶೇಖರ್ ವಿವರಿಸಿದರು.  

ಜಿಎಸ್‌ಟಿ ಪಾಲಿನಲ್ಲಿ ಯಾವ ರಾಜ್ಯಕ್ಕೆ ಎಷ್ಟು?

ಕೇಂದ್ರ ಸರ್ಕಾರದ ಪಾಲಿಗೆ ಅಧಿಕ ಜಿಎಸ್‌ಟಿ ತೆರಿಗೆ ಹಣ ಸಂಗ್ರಹಿಸುವುದು ದಕ್ಷಿಣ ಭಾರತದ ರಾಜ್ಯಗಳೇ. ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಮತ್ತು ತಮಿಳುನಾಡು ಕ್ರಮವಾಗಿ ನಂತರ ಸ್ಥಾನಗಳನ್ನು ಪಡೆದಿವೆ. ಆದರೆ, ಕೇಂದ್ರದಿಂದ ದಕ್ಷಿಣ ರಾಜ್ಯಗಳಿಗೆ ಬರಬೇಕಾದ ತೆರಿಗೆಯ ಪಾಲಿನಲ್ಲಿ ದಕ್ಷಿಣ ಭಾರತದ ರಾಜ್ಯಗಳು, ಉತ್ತರ ಭಾರತದ ರಾಜ್ಯಗಳಿಗಿಂತ ತೀರಾ ಕಡಿಮೆ ಪಾಲು ಪಡೆಯುತ್ತಿವೆ ಎನ್ನುತ್ತವೆ ಅಂಕಿಅಂಶಗಳು.

gst
  ಯಾವ ರಾಜ್ಯಗಳಿಗೆ ಎಷ್ಟು ಹಣ ನೀಡಲಾಗುತ್ತಿದೆ ಎಂಬ ವಿವರ

ಉದಾಹರಣೆಗೆ: ಕರ್ನಾಟಕದಿಂದ ಕೇಂದ್ರ ಸರ್ಕಾರದ ಖಜಾನೆಗೆ 100 ರೂಪಾಯಿ ತೆರಿಗೆ ಹಣ ಸಂಗ್ರಹವಾದರೆ, ಈ ಹಣದಲ್ಲಿ ಕರ್ನಾಟಕದ ಖಜಾನೆಗೆ ಜಿಎಸ್ ಟಿ ಹಂಚಿಕೆಯ ಪಾಲು ಆಗಿ ಮರಳುವುದು ಕೇವಲ 36 ರೂಪಾಯಿ ಮಾತ್ರ. ಆದರೆ, ಬಿಹಾರ ರಾಜ್ಯದಿಂದ ಕೇವಲ 100 ರೂ ಸಂಗ್ರಹವಾದರೂ ಕೇಂದ್ರ ಅವರಿಗೆ 219 ರೂಪಾಯಿಯನ್ನು ನೀಡುತ್ತಿದೆ. ಅದೇ ರೀತಿ ತಾವು ಪಾವತಿಸುವ ಪ್ರತಿ 100 ರೂ ಅಸ್ಸಾಂ 189 ರೂ. ಮತ್ತು ಉತ್ತರಪ್ರದೇಶ 149 ರೂಪಾಯಿಗಳನ್ನು ಕೇಂದ್ರದಿಂದ ಪಡೆಯುತ್ತಿದೆ. 

ಈ ಸುದ್ದಿ ಓದಿದ್ದೀರಾ?: ರಾಜ್ಯಸಭೆಗೆ ಮರು ಆಯ್ಕೆ ಚರ್ಚೆ: ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಟ್ಟಿದ್ದೇನು?

ರಾಜ್ಯದ ತೆರಿಗೆ ಪಾಲು ಸಿಕ್ಕರೆ... 

ಹಣಕಾಸು ಇಲಾಖೆಯ ಅಂಕಿಅಂಶಗಳ ಪ್ರಕಾರ ಕೇಂದ್ರ ಸರ್ಕಾರ 2020-21ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ತೆರಿಗೆ ಪಾಲಿನಲ್ಲಿ ಈವರೆಗೆ 90,000 ಕೋಟಿ ಹಣವನ್ನು ನೀಡಿಲ್ಲ. ಅಲ್ಲದೆ, ವಿವಿಧ ಅನುದಾನದ ಪೈಕಿ 1,03,088 ಕೋಟಿ ರೂ. ರಾಜ್ಯಕ್ಕೆ ಬಂದಿಲ್ಲ. ಒಟ್ಟಾರೆ 1.9 ಲಕ್ಷ ಕೋಟಿ ಹಣ ಕೇಂದ್ರದಿಂದ ರಾಜ್ಯದ ಬರಬೇಕಿರುವುದು ಬಾಕಿ ಉಳಿದಿದೆ.

ಈ ಭಾರೀ ಮೊತ್ತದ ಹಣ ಸಕಾಲದಲ್ಲಿ ರಾಜ್ಯಕ್ಕೆ ಸಿಕ್ಕಿದ್ದರೆ ರಾಜ್ಯದಲ್ಲಿ ಯಾವೆಲ್ಲಾ ಜನಪರ ತುರ್ತು ಕೆಲಸಗಳನ್ನು ಮಾಡಬಹುದಿತ್ತು ಎಂಬ ಪ್ರಶ್ನೆಯನ್ನು ಆರ್ಥಿಕ ತಜ್ಞ ಟಿ.ಆರ್. ಚಂದ್ರಶೇಖರ್ ಅವರ ಮುಂದೆ 'ಈ ದಿನ.ಕಾಮ್' ಇಟ್ಟಾಗ, ಅವರು ಕೊರೊನಾ ಹಿನ್ನೆಲೆಯಲ್ಲಿ ಈ ಹಣವನ್ನು ಹೇಗೆ ಬಳಸಬಹುದಿತ್ತು ಎಂಬುದನ್ನು ವಿವರಿಸಿದರು.

"ಮಾರಣಾಂತಿಕ ಕೊರೊನಾ ಇಡೀ ದೇಶವನ್ನು ಆವರಿಸಿದ್ದ ಸಂದರ್ಭದಲ್ಲಿ ಇದರ ತೆಕ್ಕೆಗೆ ಸಿಕ್ಕು ಕರ್ನಾಟಕದ ಆರ್ಥಿಕತೆಯೂ ನಜ್ಜುಗುಜ್ಜಾಗಿತ್ತು. ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡುವುದು, ಆಕ್ಸಿಜನ್ ಘಟಕ ಸ್ಥಾಪಿಸುವುದು, ಸೂಕ್ತ ಔಷಧ ನೀಡುವುದು ಸಹ ಸರ್ಕಾರಕ್ಕೆ ಕಷ್ಟವಾಗಿತ್ತು. ಕನಿಷ್ಟ ಅಂತಹ ಸಂಕಷ್ಟದ ಹೊತ್ತಲ್ಲಿ ಕೇಂದ್ರದಿಂದ ಬರಬೇಕಿದ್ದ ಜಿಎಸ್‌ಟಿ ಮತ್ತು ಅನುದಾನದ ಹಣ ರಾಜ್ಯಕ್ಕೆ ಸರಿಯಾಗಿ ಸಿಕ್ಕಿದ್ದರೆ, ಅಷ್ಟು ಪ್ರಮಾಣದ ಹಣದಲ್ಲಿ ಕೋವಿಡ್ ಸಂದರ್ಭದಲ್ಲಿ ರಾಜ್ಯದ ಅಷ್ಟೂ ಜನಕ್ಕೆ ಉಚಿತ ಕೋವಿಡ್ ಚಿಕಿತ್ಸೆ ನೀಡಬಹುದಿತ್ತು. 1.9 ಲಕ್ಷ ಕೋಟಿಯಲ್ಲಿ 2 ಕೋಟಿಗಿಂತ ಅಧಿಕ ಆಕ್ಸಿಜನ್ ಘಟಕ, ಪ್ರತಿ ಜಿಲ್ಲೆಯಲ್ಲೂ ಹೈಟೆಕ್ ಕೋವಿಡ್ ಆಸ್ಪತ್ರೆ ನಿರ್ಮಿಸಬಹುದಿತ್ತು" ಎಂಬುದು ಚಂದ್ರಶೇಖರ್ ಅವರ ವಿವರಣೆ.

ಇನ್ನು ಈ ವರ್ಷ ಬಜೆಟ್ ಭಾಷಣದ ವೇಳೆ ಬಸವರಾಜ ಸಿಎಂ ಬೊಮ್ಮಾಯಿ, “ಮೇಕೆದಾಟು ಯೋಜನೆಗೆ 1,000 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3,000 ಕೋಟಿ ರೂ., ಕೃಷ್ಣಾ ಮೇಲ್ದಂಡೆ 3ನೇ ಹಂತಕ್ಕೆ 5,000 ಕೋಟಿ ರೂ., ಹಾಗೂ ಕಳಸಾ ಬಂಡೂರಿ ಯೋಜನೆಗೆ 1,000 ಕೋಟಿ ರೂ. ಸೇರಿದಂತೆ 2021-22ನೇ ಸಾಲಿನಲ್ಲಿ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲು ಕ್ರಮ  ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದರು.

Narendra Modi
ಪ್ರಧಾನಿ ನರೇಂದ್ರ ಮೋದಿ

ಆದರೆ, ರಾಜ್ಯದ ಖಜಾನೆಯಲ್ಲಿ ಹಣವಿಲ್ಲದ ಕಾರಣ ಈ ಎಲ್ಲಾ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಬಾಕಿ ಇರುವ ಕೆಲಸಗಳೇ ಪ್ರಗತಿ ಕಾಣದೆ ನಿಂತುಹೋಗಿವೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಜಿಎಸ್‌ಟಿ ಪಾಲಿನ ಹಣ ರಾಜ್ಯದ ಖಜಾನೆಗೆ ಸಂದಾಯವಾದರೆ ಅಷ್ಟು ಪ್ರಮಾಣದ ಹಣದಲ್ಲಿ ಮುಂದಿನ 10 ವರ್ಷಕ್ಕೆ ಬೇಕಾದ ನೀರಾವರಿ ಬಜೆಟ್ ಅನ್ನು ಈಗಲೇ ಸಿದ್ಧಪಡಿಸಬಹುದು. ಬಾಕಿ ಉಳಿದಿರುವ ಎಲ್ಲಾ ನೀರಾವರಿ ಯೋಜನೆಯನ್ನೂ ಮುಗಿಸಿ, ರೈತರಿಗೆ ಉಚಿತ ವಿದ್ಯುತ್ ಸಹ ನೀಡಬಹುದು.

ಆದರೆ, ಬರಬೇಕಾದ ಸುಮಾರು ಎರಡು ಲಕ್ಷ ಕೋಟಿ ವಿವಿಧ ತೆರಿಗೆ ಪಾಲು ಮತ್ತು ಅನುದಾನ ಬಾಕಿ ರಾಜ್ಯಕ್ಕೆ ಬಂದಿಲ್ಲ. ಹಾಗಾಗಿ, ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಪಾವತಿಸುವ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಕರ್ನಾಟಕ ಮಾತ್ರ ಸಾಲದ ಹೊರೆಯಲ್ಲಿದೆ! ರಾಜ್ಯದಿಂದ ಆಯ್ಕೆಯಾಗಿ ಹೋಗಿ ಕಳೆದ ಮೂರು ವರ್ಷಗಳಿಂದ ದೇಶದ ಹಣಕಾಸು ಖಾತೆಯ ಹೊರೆ ಹೊತ್ತಿರುವ ನಿರ್ಮಲಾ ಸೀತಾರಾಮನ್‌ ಮತ್ತೊಂದು ಸುತ್ತಿಗೆ ರಾಜ್ಯಸಭೆಗೆ ಹೋಗಲು ಸಿದ್ಧತೆ ನಡೆಸಿದ್ದಾರೆ!

ನಿಮಗೆ ಏನು ಅನ್ನಿಸ್ತು?
6 ವೋಟ್
eedina app