ಗುಜರಾತ್ | ಅಸ್ಪೃಶ್ಯತೆ ವಿರೋಧಿಸಿ ದಲಿತರಿಂದ 'ಒಂದು ರೂಪಾಯಿ ಸಂಗ್ರಹ' ಅಭಿಯಾನ

  • ದಲಿತ ವಿದ್ಯಾರ್ಥಿ ಇಂದ್ರ ಮೇಘವಾಲ್ ಕುಟುಂಬಕ್ಕೆ ಆರ್ಥಿಕ ಸಹಾಯ 
  • ಗುಜರಾತ್‌ನಿಂದ ಸುರಾನಾ ಗ್ರಾಮಕ್ಕೆ ಬೃಹತ್ 'ಮಡಕೆ ಮೆರವಣಿಗೆ'

ರಾಜಸ್ಥಾನದ ಸುರಾನಾ ಗ್ರಾಮದಲ್ಲಿ ದಲಿತ ವಿದ್ಯಾರ್ಥಿ ಇಂದ್ರ ಮೇಘವಾಲ್ ಸಾವಿನ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 400ಕ್ಕೂ ಹೆಚ್ಚು ದಲಿತ ಮಹಿಳೆಯರು ಗುಜರಾತ್‌ನಿಂದ ಸುರಾನಾ ವರೆಗೆ ಬೃಹತ್ ಮಡಕೆಯೊಂದಿಗೆ ಅಭಿಯಾನ ಆರಂಭಿಸಿದ್ದಾರೆ. 

ರಾಜಸ್ಥಾನದ ರಾಣಿವಾಡ ಆಡಳಿತವು ಈ ಅಭಿಯಾನವನ್ನು ಗುಜರಾತ್ ಗಡಿಯಲ್ಲಿ ಮೂರು ಗಂಟೆಗಳ ಕಾಲ ತಡೆಹಿಡಿದಿತ್ತು. ನಂತರ ಉನ್ನತ ಅಧಿಕಾರಿಗಳ ಸೂಚನೆ ಮೇರೆಗೆ ಬೆಂಗಾವಲು ಪಡೆಯ ಮೂಲಕ ರಾಜ್ಯಕ್ಕೆ ಪ್ರವೇಶ ನೀಡಲಾಯಿತು. ದಲಿತ ಮಹಿಳೆಯರ ಈ ಗುಂಪು ಸಂಜೆ ಸುರಾನಾ ತಲುಪಿತು. ಅವರು ಅಭಿಯಾನದಲ್ಲಿ ಸಂಗ್ರಹಿಸಲಾದ ಮೂರು ಲಕ್ಷ ರೂಪಾಯಿಯನ್ನು ದಲಿತ ಕುಟುಂಬಕ್ಕೆ ಸಹಾಯವಾಗಿ ನೀಡಲಾಯಿತು. 

ಗುಜರಾತ್‌ನಲ್ಲಿ ದಲಿತ ಜಾಗೃತಿ ಕುರಿತು ‘ದಲಿತ ನಾರಿ ಸೇವಾ ಕೇಂದ್ರ’ ಸೇರಿದಂತೆ ಹಲವು ಸಂಘಟನೆಗಳ ಬ್ಯಾನರ್ ಅಡಿಯಲ್ಲಿ  ಅಸ್ಪೃಶ್ಯತೆ ವಿರೋಧಿಸಿ ಎಂಟು ರಾಜ್ಯಗಳ 1,233 ಹಳ್ಳಿಗಳಲ್ಲಿ ಪ್ರತಿ ದಲಿತನ ಮನೆಯಲ್ಲಿ ತಲಾ ಒಂದು ರೂಪಾಯಿ ಪಡೆದು ಒಟ್ಟು ಮೂರೂವರೆ ಲಕ್ಷ ರೂಪಾಯಿ ಸಂಗ್ರಹಿಸಲಾಗಿತ್ತು. ಸಂಗ್ರಹವಾದ ಹಣವನ್ನು ಬೃಹತ್ ಮಡಕೆಯಲ್ಲಿಟ್ಟು ವಾಹನದಲ್ಲಿ ಅದನ್ನು ಗುಜರಾತ್‌ನ ಅಹಮದಾಬಾದ್‌ನಿಂದ ಬೆಳಿಗ್ಗೆ 4 ಗಂಟೆಗೆ ರ‌್ಯಾಲಿ ರೂಪದಲ್ಲಿ ತರಲಾಯಿತು.

ಅಭಿಯಾನ ರಾಜಸ್ಥಾನ ರಾಜ್ಯ ಪ್ರವೇಶಿಸಬೇಕಾದರೆ ಮಡಕೆಯನ್ನು ಬಟ್ಟೆಯಿಂದ ಮುಚ್ಚಬೇಕು ಎಂದು ಅಲ್ಲಿನ ಆಡಳಿತ ಹೇಳಿತು. ಇದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಮೂರು ಗಂಟೆಗಳ ಚರ್ಚೆಯ ಬಳಿಕ ಉನ್ನತಾಧಿಕಾರಿಗಳ ಸೂಚನೆ ಮೇರೆಗೆ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡಲಾಯಿತು.

ಸುರಾನ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಈ ಸುದ್ದಿ ಓದಿದ್ದೀರಾ ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

ಈ ವೇಳೆ ದಲಿತ ಮಹಿಳಾ ಹೋರಾಟಗಾರ್ತಿ ನೀತು ರೋಹಿನ್ ಮಾತನಾಡಿ, “ಸ್ವಾತಂತ್ರ್ಯ ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಯಥಾಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವದಲ್ಲಿ, ಮಡಕೆಯೊಂದಿಗೆ ರ‌್ಯಾಲಿಯನ್ನು ತೆಗೆದುಕೊಳ್ಳುವುದನ್ನು ನಿಷೇಧಿಸುವುದು ಸಂವಿಧಾನಾತ್ಮಕವಲ್ಲ. ಎಂಟು ರಾಜ್ಯಗಳ ಜನರು ಈ ರ‌್ಯಾಲಿಯಲ್ಲಿ ಭಾಗಿಯಾಗಿದ್ದಾರೆ” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್