ಮಕ್ಕಳಿಗೆ ಅರ್ಧ ಟಿಕೆಟ್ | ಕಂಬದ ಆಟಕ್ಕೆ ಮುಂದಾದ ಕೆಎಸ್‌ಆರ್‌ಟಿಸಿ!

  • ಸಾರಿಗೆ ಬಸ್‌ನ ಕಂಬಿಗಳ ಪಕ್ಕ ನಿಲ್ಲಿಸಿ ಎತ್ತರ ಅಳತೆ!
  • ಪ್ರಯಾಣಿಕರು ಮತ್ತು ನಿರ್ವಾಹಕ ನಡುವೆ ವಾಗ್ವಾದ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರವಲ್ಲದೇ, ಈಗ ಮೂರು ವರ್ಷದ ಪುಟಾಣಿಗಳಿಗೂ ಅರ್ಧ ಟಿಕೆಟ್ ನೀಡುತ್ತಿದೆ. ಈ ವಿಚಾರವಾಗಿ ನಿತ್ಯ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ವಿವಾದ ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಈ ಹಿಂದೆ ನಿಗಮವು 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅರ್ಧ ಟಿಕೆಟ್ ನೀಡುತ್ತಿತ್ತು. ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ವ್ಯವಸ್ಥೆಯಿತ್ತು. ಆದರೆ, ಈಗ ಮಕ್ಕಳ ವಯಸ್ಸನ್ನು ಆಧರಿಸಿ ಟಿಕೆಟ್ ಪಡೆಯದೆ, ಅವರ ಎತ್ತರ ನೋಡಿ ಟಿಕೆಟ್ ನೀಡುತ್ತಿದ್ದಾರೆ. ಮಗು ಮೂರು ಅಡಿ ಎತ್ತರವಿದ್ದು, ವಯಸ್ಸು ಇನ್ನೂ ಎರಡು ವರ್ಷವಾಗಿದ್ದರೆ, ಮಗುವಿನ ಎತ್ತರ ಆಧರಿಸಿ ಟಿಕೆಟ್ ನೀಡಲಾಗುತ್ತದೆ ಎಂಬುದು ಹಲವು ಪೋಷಕರ ಪ್ರಯಾಣಿಕರ ದೂರು.

Eedina App

ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಇನ್ಮುಂದೆ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಅರ್ಧ ಟಿಕೆಟ್ ನೀಡುವ ಹೊಸ ನಿಯಮ ಜಾರಿಯಾಗಲಿದೆ ಎಂದೂ ತಿಳಿದು ಬಂದಿದೆ.

ಬಸ್‌ನಲ್ಲಿ ಮಕ್ಕಳ ಎತ್ತರ ಅಳತೆ ಹೇಗೆ?

AV Eye Hospital ad

ಮಕ್ಕಳ ಎತ್ತರ ನೋಡಲು ಬಸ್‌ನ ಮಧ್ಯದಲ್ಲಿರುವ ಸರಳುಗಳ ಮೇಲೆ ಎರಡು ಕಡೆ (3 ಅಡಿ, 4 ಅಡಿ) ಬಣ್ಣದಲ್ಲಿ ಗುರುತು ಮಾಡಲಾಗಿದೆ. ಯಾರು ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಮಕ್ಕಳನ್ನು ಸರಳಿ ಪಕ್ಕದಲ್ಲಿ ನಿಲ್ಲಿಸಿ, ಎತ್ತರ ನೋಡಿ ಟಿಕೆಟ್ ನೀಡಲಾಗುತ್ತಿದೆ.

ಬಡ ಪ್ರಯಾಣಿಕರಿಗೆ ಹೊರೆ

"ಈಗಿನ ಕಾಲದಲ್ಲಿ ಮಕ್ಕಳ ವಯಸ್ಸು ಚಿಕ್ಕದಿದ್ದರೂ ಕೂಡಾ ಅವರ ಬೆಳವಣಿಗೆ ಹೆಚ್ಚಾಗಿರುತ್ತದೆ. ಈ ವೇಳೆ ಪೋಷಕ ಪ್ರಯಾಣಿಕರು ಮಕ್ಕಳ ವಯಸ್ಸನ್ನು ಹೇಳಿದರೂ ನಿರ್ವಾಹಕರು ನಂಬುವುದಿಲ್ಲ. ಕಂಬಿ ಬಳಿ ನಿಲ್ಲಿಸಿ ಎತ್ತರ ಅಳೆಯುತ್ತಾರೆ. ಇದು ಪೋಷಕ ಪ್ರಯಾಣಿಕರಿಗೆ ಇರಿಸು ಮುರಿಸು ಉಂಟು ಮಾಡುತ್ತದೆ. ಇದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ" ಪೋಷಕರಾದ ಶಿವಯೋಗಿ ಎಂಬವರು ಈ ದಿನ.ಕಾಮ್‌ ಜೊತೆಗೆ ಮಾತನಾಡುತ್ತಾ ತಿಳಿಸಿದರು.

ಹತ್ತಿರದ ಊರುಗಳಿಗೆ ಪ್ರಯಾಣ ಬೆಳೆಸುವುದಾದರೆ ಪುಟಾಣಿ ಮಕ್ಕಳಿಗೆ ಟಿಕೆಟ್ ತೆಗೆದುಕೊಂಡರೂ ಹೊರೆಯಾಗುವುದಿಲ್ಲ. ಆದರೆ, ಬೆಂಗಳೂರಿನಿಂದ ಮೈಸೂರು, ಹುಬ್ಬಳ್ಳಿ, ಧಾರವಾಡ, ಚಿಕ್ಕಮಗಳೂರು, ಮಡಿಕೇರಿ, ಹಾಸನ ಹೀಗೆ ದೂರದ ಊರುಗಳಿಗೆ ತೆರಳುವುದಾದರೆ ವಯಸ್ಕ ಪ್ರಯಾಣಿಕರಿಗೆ 150-300 ರೂ.ವರೆಗೆ ಟಿಕೆಟ್ ದರವಿರುತ್ತದೆ. ಅದರಲ್ಲೂ ಸ್ಲೀಪರ್ ಬಸ್‌ಗಳಲ್ಲಿ ಟಿಕೆಟ್ ದರ ದುಪ್ಪಟ್ಟಾಗಿರುತ್ತದೆ. ಇಂತಹ ವೇಳೆ ಮಕ್ಕಳಿಗೆ ಅರ್ಧ ಟಿಕೆಟ್ ತೆಗೆದುಕೊಳ್ಳುವುದು ಹೊರೆಯಾಗುತ್ತದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಇದು ಹೆಚ್ಚಿನ ಹೊರೆಯಾಗುತ್ತದೆ.

2004ರಿಂದ ಜಾರಿಯಲ್ಲಿದ್ದ ಹಳೇ ನಿಯಮವೇನು?

ಈ ಹಿಂದೆಯೇ ಬಸ್ಸು ಪ್ರಯಾಣದ ಟಿಕೆಟ್ ಕೊಳ್ಳುವಾಗ ಮಕ್ಕಳ ಎತ್ತರ ನೋಡಿ ಟಿಕೆಟ್ ಪಡೆಯುತ್ತಿದ್ದರು. 2004ರಲ್ಲಿಯೂ ಹೊರಡಿಸಲಾಗಿದ್ದ ಸುತ್ತೋಲೆಯಂತೆ, 2004ರ ಅಕ್ಟೋಬರ್ 30ರಿಂದ ಮಕ್ಕಳು ಕನಿಷ್ಠ 140 ಸೆಂ.ಮೀ ಎತ್ತರ ಇದ್ದರೆ ಪೂರ್ತಿ ಟಿಕೆಟ್ ಹಾಗೂ 117 ಸೆಂ.ಮೀ ಎತ್ತರವಿರುವ ಮಕ್ಕಳಿಗೆ ಅರ್ಧ ಟಿಕೆಟ್ ನೀಡಲಾಗುತ್ತಿತ್ತು.

117 ಸೆಂ.ಮೀ ಎತ್ತರ ಇರುವ ಮಕ್ಕಳು 6 ವರ್ಷಗಳನ್ನು ಪೂರ್ಣಗೊಳಿಸಿದ್ದರೆ, ಅವರಿಗೆ ಅರ್ಧ ಟಿಕೆಟ್ ನೀಡಲಾಗುತ್ತಿತ್ತು. ಮಕ್ಕಳ ವಯಸ್ಸಿನ ಕುರಿತು ಏನಾದರೂ ಸಂಶಯಗಳಿದ್ದರೆ, ಬಸ್ಸಿನಲ್ಲಿರುವ ಗೇಜ್‌ಗಳ ಮೂಲಕ ಮಕ್ಕಳ ಎತ್ತರವನ್ನು ನಿರ್ವಾಹಕರು ಅಳೆದು ಟಿಕೆಟ್ ನೀಡುತ್ತಿದ್ದರು.

ವಯಸ್ಸಿನ ದಾಖಲೆ ಇದ್ದರೆ ಎತ್ತರ ಅವಶ್ಯವಲ್ಲ

ಮಕ್ಕಳ ವಯಸ್ಸಿನ ದಾಖಲೆಯನ್ನು ಹೊಂದಿದ್ದರೆ, ಎತ್ತರವನ್ನು ಪರೀಕ್ಷಿಸುವ ಅವಶ್ಯಕತೆ ಇಲ್ಲ. ವಯಸ್ಸಿನ ದೃಢೀಕರಣದ ನಂತರ ಬೇರಾವುದೇ ಮಾನದಂಡಗಳನ್ನು ಬಳಸುವ ಅಗತ್ಯವಿಲ್ಲ ಎಂದು ಕೆಎಸ್ಆರ್‌ಟಿಸಿ ಸುತ್ತೋಲೆಯಲ್ಲಿ ತಿಳಿಸಿದೆ.

ಪ್ರಯಾಣಿಕರು ಏನೆನ್ನುತ್ತಾರೆ?

ಈ ಕುರಿತು ಈ ದಿನ.ಕಾಮ್ ಜತೆಗೆ ಯಮುನಾ ಎಂಬವರು ಮಾತನಾಡಿ, ”ನಾವು ತುಮಕೂರಿನಿಂದ ಬೆಂಗಳೂರಿಗೆ ಬರುವ ವೇಳೆ ಬಸ್‌ನ ನಿರ್ವಾಹಕರು ನಮ್ಮ ಮಗಳಿಗೆ ಪೂರ್ತಿ ಟಿಕೆಟ್ ತೆಗೆದುಕೊಳ್ಳಲು ಹೇಳಿದರು. ನಾವು ಇಲ್ಲ ಅವಳಿಗೆ ಈಗ 10 ವರ್ಷ ಅರ್ಧ ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದೆವು. ಆದರೂ ಕೇಳದ ಅವರು ಪೂರ್ತಿ ಟಿಕೆಟ್ ನೀಡಲು ಮುಂದಾದಾಗ, ಬಸ್‌ನಲ್ಲಿ ನಮಗೂ ಅವರಿಗೂ(ನಿರ್ವಾಹಕ) ವಾಗ್ವಾದ ನಡೆಯಿತು. ಇದು ಇರಿಸುಮುರಿಗೆ ಕಾರಣವಾಯಿತು. ಆದಷ್ಟು ಬೇಗ ನಿಗಮ ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕು" ಎಂದರು.

ಮಕ್ಕಳ ಬೆಳವಣಿಗೆ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಡಾ. ದಿವ್ಯ, “ಎತ್ತರವನ್ನೇ ಮಾನದಂಡವಾಗಿ ಇಟ್ಟುಕೊಳ್ಳುವುದು ತಪ್ಪು. ಆಹಾರ ಬದಲಾವಣೆಯಿಂದ ಮಕ್ಕಳ ಬೆಳವಣಿಗೆಯಲ್ಲಿ ಬದಲಾವಣೆಯಾಗುತ್ತದೆ. ಕೆಲವು ಮಕ್ಕಳು ಹೆಚ್ಚು ಎತ್ತರ ಬೆಳೆಯುತ್ತಾರೆ. ಇನ್ನೂ ಕೆಲವರು ಎತ್ತರದಿಂದ ವಂಚಿರಾಗುತ್ತಾರೆ. ಹಾಗಾಗಿ, ಪರ್ಯಾಯ ಮಾರ್ಗವನ್ನು ಬಳಸಿದರೆ ಉತ್ತಮ” ಎಂದು ಹೇಳಿದರು.

“ಬಸ್‌ನಲ್ಲಿ ಸಂಚರಿಸುವ ವೇಳೆ ನಮ್ಮ ಆರು ವರ್ಷದ ಮಗುವಿಗೆ ಪೂರ್ಣ ಟಿಕೆಟ್ ತೆಗೆದುಕೊಳ್ಳಲು ಕೇಳಲಾಗಿತ್ತು. ಈ ವೇಳೆ ನಮಗೂ ನಿರ್ವಾಹಕರಿಗೂ ಕೆಲ ಸಮಯ ವಾಗ್ವಾದವೂ ನಡೆಯಿತು” ಎಂದು ವಿವರಿಸಿದರು.

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಕೆಎಸ್ಆರ್‌ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ, ”ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಅರ್ಧ ಟಿಕೆಟ್ ನೀಡಲಾಗುವುದು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ತಿ ಟಿಕೆಟ್ ತೆಗೆದುಕೊಳ್ಳಲಾಗುತ್ತದೆ. ಆದರೆ, ವಯಸ್ಸನ್ನು ಆಧರಿಸದೇ ಟಿಕೆಟ್ ಪಡೆಯುವ ನಿರ್ವಾಹಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು |ಮತದಾರರ ಪಟ್ಟಿಯ ಸಂಪೂರ್ಣ ಪರಿಶೀಲನೆಗೆ ವಿಶೇಷ ಅಧಿಕಾರಿಗಳ ನಿಯೋಜನೆ

ಕರ್ನಾಟಕ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಈ ದಿನ.ಕಾಮ್ ಜತೆಗೆ ಮಾತನಾಡಿ, ”ಈ ವಿಚಾರವಾಗಿ ಪ್ರಯಾಣಿಕರು ಮತ್ತೆ ನಿರ್ವಾಹಕರ ಮಧ್ಯೆ ಆಗಾಗ ವಾಗ್ವಾದ ನಡೆಯುತ್ತಿರುತ್ತದೆ. ಹಾಗಾಗಿ, ಪ್ರಯಾಣಿಕರು ಮಕ್ಕಳ ವಯಸ್ಸಿನ ದಾಖಲಾತಿಗಳನ್ನು ತೋರಿಸಿದರೆ, ಈ ಸಮಸ್ಯೆ ಇರುವುದಿಲ್ಲ” ಎಂದರು.

“ಕೆಲವು ವೇಳೆ ಪೋಷಕ ಪ್ರಯಾಣಿಕರು ಮಕ್ಕಳ ವಯಸ್ಸನ್ನು ನಿರ್ವಾಹಕರ ಮುಂದೆ ಸುಳ್ಳು ಹೇಳಿ ಅರ್ಧ ಟಿಕೆಟ್ ಪಡೆದಿರುತ್ತಾರೆ. ಆದರೆ, ಕೆಎಸ್‌ಆರ್‌ಟಿಸಿಯ ಮೇಲಧಿಕಾರಿಗಳು ಬಸ್ ಹತ್ತಿ ಪರಿಶೀಲನೆ ನಡೆಸುವ ಸಮಯದಲ್ಲಿ ನಿಜ ವಯಸ್ಸನ್ನು ತಿಳಿಸುತ್ತಾರೆ. ಈ ವೇಳೆ ನಿರ್ವಾಹಕರಿಗೆ ದಂಡ ವಿಧಿಸುತ್ತಾರೆ” ಎಂದು ತಿಳಿಸಿದರು.

ಮೆಟ್ರೊ ರೈಲಲ್ಲೂ ಎತ್ತರಕ್ಕೆ ಟಿಕೆಟ್

ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಮೂರು ಅಡಿ ಎತ್ತರವಿದ್ದರೂ ಪೂರ್ಣ ಟಿಕೆಟ್ ಪಡೆಯಬೇಕು. ಎತ್ತರವನ್ನು ಅಳತೆ ಮಾಡಲು ಟಿಕೆಟ್ ಕೌಂಟರ್‌ಗಳಲ್ಲೇ ವ್ಯವಸ್ಥೆ ಮಾಡಲಾಗಿದೆ.

ನಿಮಗೆ ಏನು ಅನ್ನಿಸ್ತು?
14 ವೋಟ್
eedina app