ಹರ್ ಘರ್ ತಿರಂಗಾ | ಮಾತಿನಲ್ಲಿ ಸ್ವದೇಶಿ, ಅನುಷ್ಠಾನದಲ್ಲಿ ವಿದೇಶಿ ತಂತ್ರ: ಯು ಟಿ ಖಾದರ್ 

Dakshina kannada
  • ‘ಮನೆ ಇಲ್ಲದವರು ಯಾವ ಮನೆಯಲ್ಲಿ ತಿರಂಗ ಹಾರಿಸಬೇಕು?’
  • ‘ಸ್ವರಾಜ್ ಮತ್ತು ಸ್ವದೇಶಿ ಹೋರಾಟದ ಸ್ವಾಭಿಮಾನದ ಪ್ರತೀಕ ಖಾದಿ’

'ಖಾದಿಯ ಬದಲು ಪಾಲಿಸ್ಟರ್ ಧ್ವಜ‌ ಬಳಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ ಕೇವಲ ಮಾತಿನಲ್ಲಿ ಸ್ವದೇಶಿ, ಅನುಷ್ಠಾನದಲ್ಲಿ  ವಿದೇಶಿ ತಂತ್ರ ಅನುಸರಿಸುತ್ತಿದೆ' ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು ಟಿ ಖಾದರ್ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಾವುಟ  ಸ್ವಾತಂತ್ರ್ಯದ ತಾಯಿಬೇರು ಹಾಗೂ ಗೌರವದ ಪ್ರತೀಕ. ಖಾದಿ ಕೇವಲ ಬಟ್ಟೆಯಲ್ಲ,  ಸ್ವರಾಜ್ ಮತ್ತು ಸ್ವದೇಶಿ ಹೋರಾಟದ ಸ್ವಾಭಿಮಾನದ ಪ್ರತೀಕ” ಎಂದರು.

“ಖಾದಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಸಂಕೇತ. ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೊಡುವ ಕೆಲಸ ಆಗುತ್ತಿತ್ತು. ಪಾಲಿಸ್ಟರ್ ‍ಧ್ವಜ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಆಂದೋಲನಕ್ಕೆ ಅವಮಾನ ಮಾಡಿದೆ” ಎಂದು ಟೀಕಿಸಿದರು. 

“ವಿದೇಶಿದಲ್ಲಿ ತಯಾರಾಗುವ ಧ್ವಜವನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಚೀನಾಕ್ಕೆ ಲಾಭವಾಗಲಿದೆ. ಭಾರತದ ಗ್ರಾಮೋದ್ಯಮ ಇದರಿಂದ ನಷ್ಟ ಹೊಂದಲಿದೆ. ಸರ್ಕಾರ ಈ ಬಗ್ಗೆ ಪುನರ್ ಪರಿಶೀಲಿಸುವ ಅಗತ್ಯವಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮೈಸೂರು| ಖಾದಿ ಕಡೆಗಣನೆ; ಪ್ರಧಾನಿಗೆ ಹತ್ತು ಪ್ರಶ್ನೆ ಮುಂದಿಟ್ಟ ಧ್ವಜ ಸತ್ಯಾಗ್ರಹ ಸಮಿತಿ

“ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವ ವಿಚಾರದಲ್ಲಿ ಹಲವಾರು ಗೊಂದಲವಿದೆ. ಸರ್ಕಾರ ಸರಿಯಾದ ಮಾಹಿತಿ ನೀಡಬೇಕು. ಪ್ರತಿ ಮನೆಗೆ ಹಾಕುವಷ್ಟು ರಾಷ್ಟ್ರಧ್ವಜ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಲ್ಲದೇ, ಮಾರುಕಟ್ಟೆಯಲ್ಲಿ ಸಿಗುವ ಧ್ವಜದಲ್ಲಿ ಹಲವಾರು ಲೋಪಗಳಿವೆ “ ಎಂದರು.

“ಮಳೆಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಇನ್ನೂ ಪರಿಹಾರ ನೀಡಿಲ್ಲ. ಕಳೆದ ವರ್ಷ ಹಾನಿಯಾದ ಮನೆಗಳಿಗೆ ಅರ್ಧ ಹಣ ನೀಡಿದ್ದೀರಿ. ಮನೆ ಇಲ್ಲದವರು ಯಾವ ಮನೆಯಲ್ಲಿ ತಿರಂಗ ಹಾರಿಸಬೇಕು? ಮೊದಲು ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡುತ್ತೇವೆ ಎಂದು ಘೋಷಣೆ ಮಾಡಲಿ” ಎಂದು ಸವಾಲು ಹಾಕಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್