ಹಾಸನ | ನ್ಯಾಯಬೆಲೆ ಅಂಗಡಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 300 ಕ್ವಿಂಟಾಲ್ ರಾಗಿ ವಶ

  • ಪಡಿತರ ಧಾನ್ಯ ಸಾಗಾಟ ಚೀಲದಲ್ಲೇ 300 ಕ್ವಿಂಟಾಲ್ ರಾಗಿ ಸಾಗಣೆ
  • ಬಡವರಿಗೆ ಸಲ್ಲಬೇಕಾಗಿದ್ದ ರಾಗಿ ಅಕ್ರಮವಾಗಿ ಉಳ್ಳವರ ಪಾಲಾಗುತ್ತಿದೆ

ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುವ ಪಡಿತರ ರಾಗಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಹಾಸನದ ಡೈರಿ ವೃತ್ತದ ಬಳಿ ಎಎಪಿ ಕಾರ್ಯಕರ್ತರು ತಡೆದು ಪರಿಶೀಲನೆ ನಡೆಸಿದ್ದಾರೆ. ಆಹಾರ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. 

ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಹಾಸನಕ್ಕೆ 300 ಚೀಲ ಪಡಿತರ ರಾಗಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ನ್ಯಾಯ ಬೆಲೆ ಅಂಗಡಿ ನಡೆಸುವವರೇ ಅಕ್ರವಾಗಿ ರಾಗಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಎಎಪಿ ಕಾರ್ಯಕರ್ತರು ಆರೋಪಿಸಿದ್ದಾರೆ. 

ಬಂಗಾರಪೇಟೆಯ ನ್ಯಾಯಬೆಲೆ ಅಂಗಡಿಯ ಹರೀಶ್‌ ಎಂಬಾತ ಅಕ್ರಮವಾಗಿ ರಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಎಎಪಿ ಕಾರ್ಯಕರ್ತರು ಪಡೆದುಕೊಂಡಿದ್ದಾರೆ. ರಹಸ್ಯ ಕಾರ್ಯಾಚರಣೆಗೆ ಇಳಿದ ಎಎಪಿ ಕಾರ್ಯಕರ್ತರು, ಹರೀಶ್‌ ಅವರಿಗೆ ಕರೆ ಮಾಡಿ, ತಮಗೆ 100 ಟನ್‌ ರಾಗಿ ಬೇಕೆಂದು ಕೇಳಿದ್ದಾರೆ. ರಾಗಿಯನ್ನು ಪಡಿತರ ಚೀಲದಲ್ಲೇ ತಂದುಕೊಡುವುದಾಗಿ ಹರೀಶ್‌ ಹೇಳಿದ್ದರು. ಅದರಂತೆ 300ಕ್ಕೂ ಹೆಚ್ಚು ಚೀಲ ರಾಗಿಯನ್ನು ಲಾರಿಯಲ್ಲಿ ತುಂಬಿ ಹಾಸನಕ್ಕೆ ಕಳಿಸಿದ್ದರು. ಈ ವೇಳೆ, ಲಾರಿಯನ್ನು ತಡೆದ ಎಎಪಿಗರು ಲಾರಿ ಮತ್ತು ರಾಗಿಯನ್ನು ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. 

ಲಾರಿಯನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದು, ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. "ಲಾರಿಯನ್ನು ಹಾಸನಕ್ಕೆ ತೆಗೆದುಕೊಂಡು ಹೋಗು ಎಂದು ಮಾಲೀಕರು ಹೇಳಿದರು. ಅದರಂತೆ ನಾನು ಲಾರಿಯನ್ನು ತಂದಿದ್ದೇನೆ. ಅಕ್ರಮದ ಬಗ್ಗೆ ನನಗೇನು ಗೊತ್ತಿಲ್ಲ" ಎಂದು ಎಎಪಿ ಕಾರ್ಯಕರ್ತರ ಎದುರು ಹೇಳಿಕೆ ನೀಡಿದ್ದ ಲಾರಿ ಚಾಲಕ ಬಳಿಕ ಪರಾರಿಯಾಗಿದ್ದಾನೆ. 

Image

"ಬಡವರಿಗೆ ಸೇರಬೇಕಿದ್ದ ಪಡಿತರ ರಾಗಿ ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮಾರಾಟವಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಪಡಿತರ ಧಾನ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಪದೇಪದೆ ಬೆಳೆಕಿಗೆ ಬರುತ್ತಲೇ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು” ಎಂದು ಹಾಸನ ಎಎಪಿ ಜಿಲ್ಲಾಧ್ಯಕ್ಷ ಕೆ.ಪಿ ಶಿವಕುಮಾರ್ ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 3.96 ಲಕ್ಷ ರೂ. ನಿವ್ವಳ ಲಾಭ

"ಬಂಗಾರಪೇಟೆ ಮೂಲದ ವರ್ತಕ ಹರೀಶ್ ಎಂಬಾತನಿಗೆ ದೂರವಾಣಿ ಕರೆ ಮಾಡಿ ನಮಗೆ 100 ಟನ್ ರಾಗಿ ಬೇಕೆಂದು ಕೇಳಿದ್ದೆವು. ಆತ ಕೊಡುವುದಾಗಿ ಹೇಳಿದ್ದ. ಒಂದು ಕ್ವಿಂಟಾಲ್ ರಾಗಿಗೆ 1,850 ರೂ.ನಂತೆ ವಿತರಿಸುವುದಾಗಿ ಹೇಳಿದ್ದ. ಎಫ್‌ಸಿಐ ಗೋಡಾನ್ ಮುದ್ರೆ ಇರುವ ಚೀಲದಲ್ಲೇ ರಾಗಿ ಕಳಿಸುವುದಾಗಿ ಹೇಳಿದ್ದ. ಇಂದು ಬೆಳಗ್ಗೆ ಒಂದು ಲೋಡ್ ರಾಗಿ ಬಂದಿದೆ” ಎಂದು ಶಿವಕುಮಾರ್ ವಿವರಿಸಿದರು.

"ಬಡವರಿಗೆ ಸಲ್ಲಬೇಕಾದಂತಹ ರಾಗಿ, ಉಳ್ಳವರ ಕೈ ಸೇರಿ ಅಕ್ರಮ ನಡೆಯುತ್ತಿದೆ. ಇದಕ್ಕೆಲ್ಲ ಭ್ರಷ್ಟ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದು, ಇದೀಗ ಸಾಕ್ಷಿ ಸಮೇತ ರಾಗಿಯನ್ನು ಪತ್ತೆ ಹಚ್ಚಲಾಗಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ. 

ರಹಸ್ಯ ಕಾರ್ಯಾಚರಣೆಯಲ್ಲಿ ಎಎಪಿ ಮುಖಂಡ ಶ್ರೀನಿವಾಸ್, ಚಂದ್ರಶೇಖರ್ ಇತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180