ಹಾಸನ | ಮನೆಗೆ ರಸ್ತೆ ಇಲ್ಲ, ಸ್ಮಶಾನಕ್ಕೆ ದಾರಿ ಇಲ್ಲ: ದಾಸರಹಳ್ಳಿಯ ದಲಿತರ ತ್ರಿಶಂಕು ಸ್ವರ್ಗ!

  • ದಲಿತರು ಶವ ಸಾಗಿಸಲು ಸಹ ಸಮರ್ಪಕ ರಸ್ತೆ ಇಲ್ಲ
  • ಇದ್ದ ರಸ್ತೆಗೂ ಕಾಂಪೌಂಡ್ ಹಾಕಿ ವಾಹನ ಸಂಚಾರಕ್ಕೆ ಅಡ್ಡಿ

“ಆರೋಗ್ಯ ತುರ್ತು ಸಂದರ್ಭದಲ್ಲಿ  ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು, ಶವ ಸಂಸ್ಕಾರಕ್ಕಾಗಿ ಮೃತದೇಹ ಸಾಗಿಸಲು ಸಮರ್ಪಕ ರಸ್ತೆಯಿಲ್ಲ. ಇರುವ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ” ಎಂದು ದಾಸರಹಳ್ಳಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದ ಸರ್ವೆ ನಂ. 169 ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾಲ್ಕು ಕುಟುಂಬಗಳು ಸುಮಾರು 150 ವರ್ಷಗಳಿಂದಲೂ ವಾಸವಿವೆ. ಆದರೆ, ಇಲ್ಲಿನ ಜನರು ಓಡಾಡಲು ಸಮರ್ಪಕ ರಸ್ತೆ ಇಲ್ಲ. ಇದ್ದ ರಸ್ತೆಯನ್ನು ಪ್ರಬಲ ಒಕ್ಕಲಿಗ ಸಮುದಾಯದ ಜನರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಈ ಕುರಿತು ದಾಸರಹಳ್ಳಿಯ ನಿವಾಸಿ ಶ್ರುತಿ ಕೀರ್ತಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮ್ಮ ಮನೆಗಳಿಗೆ ಸಮರ್ಪಕ ರಸ್ತೆಯಿಲ್ಲದೆ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದೇವೆ. ದಲಿತರ ಕಾಲೋನಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಅಡ್ಡಲಾಗಿ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಪ್ರಸ್ತುತ ಇರುವ ದಾರಿಯನ್ನು ಎಲ್ಲಾ ಕಡೆಯಿಂದಲೂ ಒತ್ತುವರಿ ಮಾಡಿದ್ದಾರೆ” ಎಂದು ಆರೋಪಿಸಿದರು.

“ಹೊಲ, ತೋಟ ಹಾಗೂ ದಿನನಿತ್ಯ ಸಂಚಾರ ಸೇರಿದಂತೆ ತುರ್ತು ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೂ ಸಾಧ್ಯವಾಗುವುದಿಲ್ಲ. ಯಾರಾದರೂ ಮರಣ ಹೊಂದಿದ ಸಂದರ್ಭದಲ್ಲಿ ಶವ ಸಾಗಿಸಲು ಸಹ ಆಗುವುದಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡರು.

“ದಾಸರಹಳ್ಳಿ ಗ್ರಾಮದ ಕಾಲೋನಿಗೆ ಸೇರಿರುವ ಹಳೆಯ ಬಾವಿ, ಶುಭ ಕಾರ್ಯಗಳನ್ನು ಮಾಡುವುದಕ್ಕೆ ಇದ್ದ ಜಾಗವನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ದಲಿತರು ಶುಭ ಕಾರ್ಯ ಮಾಡುವುದಕ್ಕೆ ಜಾಗವೇ ಇಲ್ಲದಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ ದಲಿತರು ವಾಸವಿರುವ ಕಾಲೋನಿಗೆ ರಸ್ತೆ ವ್ಯವಸ್ಥೆ ಮಾಡುಬೇಕು. ಜತೆಗೆ ಶುಭ ಕಾರ್ಯ ಮಾಡುವುದಕ್ಕೆ ಜಾಗವನ್ನು  ಬಿಡಿಸಿಕೊಡಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಕಾಡಿನ ಮಕ್ಕಳು ವಿದ್ಯೆ ಕಲಿಯಲು ಹೊರಟಿವೆ, ಪೆನ್ನು ಪುಸ್ತಕ ಕೊಡಿಸುವಿರಾ..?

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು: ಪಿಡಿಒ 

ಕಬ್ಬಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಿರಣ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ದಾಸರಹಳ್ಳಿ ಗ್ರಾಮದಲ್ಲಿ ಅರ್ಧ ಭಾಗದಷ್ಟು  ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರು ಹೇಳಿರುವ ರಸ್ತೆ ಸಮಸ್ಯೆ ಕುರಿತು ನನಗೆ ಮಾಹಿತಿ ಬಂದಿರಲಿಲ್ಲ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180