ಹಾಸನ | ಅಂಬೇಡ್ಕರ್ ಬ್ಯಾನರ್ ಧ್ವಂಸ: ದೂರು ನೀಡಿದವರ ವಿರುದ್ದವೇ ಅತ್ಯಾಚಾರ ಪ್ರಕರಣ 

  • ಅಂಬೇಡ್ಕರ್ ಬ್ಯಾನರ್ ಧ್ವಂಸಗೊಳಿಸಿದ್ದ ಕಿಡಿಗೇಡಿ
  • 'ಅತ್ಯಾಚಾರಕ್ಕೆ ಯತ್ನ' ದೂರು ನೀಡಿದ ಆರೋಪಿ ಪತ್ನಿ

ಬಾಬಾ ಸಾಹೇಬ್‌ ಅಂಬೇಡ್ಕರ್ ರವರ ಭಾವಚಿತ್ರವಿದ್ದ ಬ್ಯಾನರ್ ಧ್ವಂಸಗೊಳಿಸಿದ್ದನ್ನು ಖಂಡಿಸಿ ದೂರು ನೀಡಿದ್ದವರ ವಿರುದ್ಧವೇ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ದುರುದ್ಧೇಶದಿಂದ ಹಾಕಲಾಗಿರುವ 'ಕೇಸ್‌'ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗೋನಳ್ಳಿ ಮತ್ತು ಜಂಬೂರು ಗ್ರಾಮದ 'ಅಂಬೇಡ್ಕರ್ ಜನ್ಮ ದಿನಚರಣಾ ಸಮಿತಿ'ಯು ಚಂಗಡಹಳ್ಳಿ ಸರ್ಕಲ್‌ನಲ್ಲಿ ಅಂಬೇಡ್ಕರ್‌ ಅವರ ಬ್ಯಾನರ್‌ ಹಾಕಿತ್ತು. ಅದನ್ನು ಕಿಡಿಗೇಡಿಗಳು ಸೋಮವಾರ (ಮೇ 23) ಧ್ವಂಸಗೊಳಿಸಿದ್ದಾರೆ. 

ಬ್ಯಾನರ್‌ಅನ್ನು ಪ್ರಬಲ ಜಾತಿಗೆ ಸೇರಿದ ಹರೀಶ್‌ ಎಂಬಾತ ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ಗಂಗಾಧರ ಮತ್ತು ಗ್ರಾಮಸ್ಥರು ಯಸಳೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ಕಿಡಿಗೇಡಿಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. 

ದೂರಿನಲ್ಲಿ, "ತಮ್ಮ ಎದುರೇ ಹರೀಶ್‌ ಎಂಬಾತ ಬ್ಯಾನರ್‌ ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಅಂಬೇಡ್ಕರ್‌ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ" ಎಂದು ಗಂಗಾಧರ್ ಆರೋಪಿಸಿದ್ದಾರೆ. 

ಪೊಲೀಸರು ದೂರು ದಾಖಲಿಸಿಕೊಂಡ ನಂತರ, ಸಕಲೇಶಪುರ ಸರ್ಕಲ್ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಹರೀಶ್‌ನನ್ನು ಬಂಧಿಸಿದ್ದಾರೆ. 

ಬಳಿಕ, ದೂರುದಾರರ ವಿರುದ್ಧವೇ ದೂರು ನೀಡಿರುವ ಹರೀಶ್‌ ಅವರ ಪತ್ನಿ, 'ತನ್ನ ಮೇಲೆ ಗಂಗಾಧರ್‌, ಕಿರಂತ್, ಪ್ರೇಮ್ ಮತ್ತು ಅಂಬರೀಶ್‌ ಎಂಬವರು ಅತ್ಯಾಚಾರ ಯತ್ನಿಸಿ, ಹಲ್ಲೆ ನಡೆಸಿದ್ದಾರೆ' ಎಂದು ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆ ನಾಲ್ವರ ವಿರುದ್ಧ  ಯಸಳೂರು ಪೊಲೀಸರು 'ಅತ್ಯಾಚಾರಕ್ಕೆ ಯತ್ನ' (354ಬಿ) ಸೇರಿದಂತೆ ಐಪಿಸಿ ಸೆಕ್ಷನ್‌ 448, 323, 304, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಅಂಬೇಡ್ಕರ್ ಇಲ್ಲದಿದ್ದರೆ ಮೋದಿ ಪ್ರಧಾನಿಯಾಗುತ್ತಿರಲಿಲ್ಲ: ಸಚಿವ ಪ್ರಭು ಚವ್ಹಾಣ್

 ನಾಲ್ವರ ವಿರುದ್ಧ ದುರುದ್ದೇಶದಿಂದ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. 

ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಎಚ್‌.ಕೆ ಸಂದೇಶ್, ಈರಪ್ಪ, ಮಲ್ಲಪ್ಪ, ರಾಜಶೇಖರ್, ಪ್ರಕಾಶ್‌, ವೀರೇಶ್‌ ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
6 ವೋಟ್
Image
av 930X180