ಹಾಸನ | ಪೈಪ್‌ಲೈನ್‌ ಕೊರೆದು ಪೆಟ್ರೋಲ್‌ ಕಳ್ಳತನಕ್ಕೆ ಯತ್ನ

  • ಪೈಪ್‌ಲೈನ್‌ಗೆ ಕತ್ತರಿ ಹಾಕಿ ಪೆಟ್ರೋಲ್‌-ಡೀಸೆಲ್‌ಗೆ ಕನ್ನ
  • ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದಲ್ಲಿ ಘಟನೆ

ಪೆಟ್ರೋಲ್‌-ಡೀಸೇಲ್‌ ಪೈಪ್‌ಲೈನ್‌ ಕೊರೆದು ಪೆಟ್ರೋಲಿಯಂ ಉತ್ಪನ್ನಗಳನ್ನು ಕದಿಯಲು ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಭಾನುವಾರ ಬೆಳಕಿಗೆ ಬಂದಿದೆ.

ತಾಲೂಕಿನ ಹಾನುಬಾಳು ಹೋಬಳಿ ಹುರುಡಿ ಗ್ರಾಮದ ಮಾಜಿ ಸೈನಿಕ ಮತ್ತು ಹಾನುಬಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಶವ ಮೂರ್ತಿ ಅವರ ಜಮೀನಿನಲ್ಲಿ ಈ ಘಟನೆ ನಡೆದಿದೆ.

ಜಮೀನಿನಲ್ಲಿ ಹಾದು ಹೋಗಿರುವ ಮಂಗಳೂರಿನ ಎಂಆರ್‌ಪಿಎಲ್ ಕಂಪನಿಯ ಪೆಟ್ರೋಲ್-ಡೀಸೆಲ್ ಪೈಪ್‌ಲೈನ್‌ ಕೊರೆದು ವಾಲ್ ಅಳವಡಿಸಿ ಇಂಧನ ಕದಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಹುರುಡಿ ಗ್ರಾಮದ ಸಮೀಪ ಗದ್ದೆಗಳಿರುವ ಜಾಗದಲ್ಲಿ  ಹಾದು ಹೋಗಿರುವ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಪೈಪ್‌ಲೈನ್‌ಅನ್ನು ಯಂತ್ರದಿಂದ ಬಗೆದು ಪೆಟ್ರೋಲ್-ಡಿಸೇಲ್ ಕಳ್ಳತನ ಮಾಡಲು ವಾಲ್ ಅನ್ನು ಸಿಕ್ಕಿಸಿ ಪೈಪ್ ಅಳವಡಿಸಿ ಡ್ರಿಲ್ ಮಾಡಲು ಯತ್ನಿಸಲಾಗಿದೆ. ಈ ವೇಳೆ ಎಂಎಚ್‌ಬಿ ಕಂಪನಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ನೆರಿಯ ಸ್ಟೇಷನ್‌ನ ಸಿಗ್ನಲ್‌ನಲ್ಲಿ ಕಳ್ಳತನ ಮಾಡುತ್ತಿರುವ ಬಗ್ಗೆ ಸೆನ್ಸಾರ್ ಮೂಲಕ ಅಲ್ಲಿನ ಅಧಿಕಾರಿಗಳಿಗೆ ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಜೇವರ್ಗಿ | ಹದಗೆಟ್ಟ ರಸ್ತೆಗಳು : ಹೈರಾಣಾದ ಸ್ಥಳೀಯರ ಬದುಕು

ಕೂಡಲೇ ಕಂಪನಿಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಪೋಲಿಸರು ಬಂದದ್ದನ್ನು ಅರಿತ ದುಷ್ಕರ್ಮಿಗಳು ಹಿಟಾಚಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಗ್ರಾಮಾಂತರ ಠಾಣೆಯ ಪೋಲಿಸರು ಹಿಟಾಚಿ ವಶ ಪಡೆದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.  ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತಪಡಿಸುತ್ತಿರುವ ಸ್ಥಳೀಯರು, ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.

ಹುರುಡಿ ಸುತ್ತಮುತ್ತ, ಪೆಟ್ರೋಲ್ ಪೈಪ್‌ಲೈನ್ ತುಂಡರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡುವುದು ಸಾಮಾನ್ಯವಾಗಿತ್ತು. ಎರಡು ವರ್ಷಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್