ಹಾಸನ | ಸ್ಮಶಾನ ಭೂಮಿ ಕಬಳಿಸಲು ಯತ್ನ ಆರೋಪ ; ಅಧಿಕಾರಿಗಳಿಂದ ಪರಿಶೀಲನೆ

Hasana
  • ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯಿಂದ ಭೂಮಿ ಕಬಳಿಕೆ ಆರೋಪ
  • ದೂರಿನ ಸತ್ಯಾಸತ್ಯಾತೆ ಅರಿಯಲು ಗ್ರಾಮಕ್ಕೆ ಧಾವಿಸಿದ ಅಧಿಕಾರಿ

ಸ್ಮಶಾನ ಭೂಮಿ ಕಬಳಿಸಲು ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಲೂರು ತಾಲೂಕಿನ ದಾಸನಗುಡ್ಡ ಗ್ರಾಮದ ಗ್ರಾಮಸ್ಥರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ದೂರಿನ ಸತ್ಯಾಸತ್ಯತೆಯನ್ನು ಅರಿಯಲು ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಳೆದ ವಾರ ಸ್ಮಶಾನ ಭೂಮಿ ಜಾಗವನ್ನು ಉಳಿಸಿಕೊಡುವಂತೆ ಬೇಲೂರು  ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು

“ಇಲ್ಲಿನ ಜನ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದ್ದು, ಕಡುಬಡವರಾಗಿದ್ದಾರೆ. ಕಾಫಿ ತೋಟಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅನಾದಿ ಕಾಲದಿಂದಲೂ ಇದೇ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಿಕೊಂಡು ಬಂದಿದ್ದಾರೆ” ಎಂದು ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಗಂಗಾಧರ್ ಬಹುಜನ್ ಅಧಿಕಾರಿಗೆ ಮನವರಿಕೆ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಗದಗ | ಗ್ರಾಮ ದೇವತೆ ಜಾತ್ರೆಯಲ್ಲಿ ದಲಿತರ ಮೇಲೆ ದೌರ್ಜನ್ಯ: ಶಾಂತಿ ಸಭೆ ನಡೆಸಿದ ಡಿವೈಎಸ್‌ಪಿ

“ಈಗ ಇದೇ ಗ್ರಾಮದ ರಾಜಕೀಯ ಬಲವುಳ್ಳ, ಪ್ರಬಲ ಜಾತಿಗೆ ಸೇರಿದ ಕಾಫಿ ಪ್ಲಾಂಟರ್‌ ಒಬ್ಬರು ಈ ಸ್ಮಶಾನವನ್ನು ಕಬಳಿಸಲು ಬೇಲಿ ಹಾಕಲು ಮುಂದಾಗಿದ್ದಾರೆ. ಊರಿನ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಬೇಲಿ ಹಾಕುವುದನ್ನು ತಡೆದಿದ್ದಾರೆ. ಪೂರ್ವಿಕರನ್ನು ಸಮಾಧಿ ಮಾಡಿರುವ ಸ್ಮಶಾನ ಜಾಗವನ್ನು ಉಳಿಕೊಡಬೇಕು" ಎಂದು ಅಧಿಕಾರಿಗಳಿಗೆ ಗಂಗಾಧರ್ ಬಹುಜನ್ ಮನವಿ ಮಾಡಿದ್ದಾರೆ.

ಗ್ರಾಮಸ್ಥರ ಮನವಿಗೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ “ಪರಿಶೀಲನೆ ಮಾಡಿದಾಗ ಬಹಳ ವರ್ಷಗಳಿಂದ ಶವ ಸಂಸ್ಕಾರ ಮಾಡಿರುವ ಕುರುಹು ಇದೆ.  ಎಪ್ಪತ್ತು-ಎಂಬತ್ತು ಸಮಾಧಿಗಳು ಸ್ಮಶಾನ ಜಾಗವೆಂಬುವುದಕ್ಕೆ ಸಾಕ್ಷಿಯಾಗಿವೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ನೀಡಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಲಾಗುವುದು” ಎಂದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ಕೆಸಗೋಡು ಪ್ರಕಾಶ್, ಗ್ರಾಮಸ್ಥರಾದ ಲೋಕೇಶ್, ಹರೀಶ್,ರಾಮು, ಗಂಗೇಶ್, ಶೇಖರ, ಲಿಖಿತ್, ಹೊನ್ನಯ್ಯ, ಲಕ್ಷಣ್, ಜ್ಯೋತಿ, ಸಿದ್ದಮ್ಮ, ಅರುಣಾಕ್ಷಿ, ಪಾರ್ವತಿ ಮುಂತಾದವರು ಇದ್ದರು

ನಿಮಗೆ ಏನು ಅನ್ನಿಸ್ತು?
0 ವೋಟ್