ಹಾಸನ| ಚಪ್ಪಲಿ ಕದ್ದಿದ್ದಾನೆಂದು ಆರೋಪಿಸಿ ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ

Hassan
  • ಚಪ್ಪಲಿ ಕಳ್ಳತನ ಮಾಡಿರುವ ಆರೋಪ ಮಾಡಿ 9ನೇ ತರಗತಿಯ ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಚಪ್ಪಲಿ ತೊಳೆಸಿದ ಸವರ್ಣೀಯರು.
  • ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಕೊಂಡಜ್ಜಿ ಗ್ರಾಮದಲ್ಲಿ ನಡೆದಿರುವ ಅಮಾನವೀಯ ಘಟನೆ

ಚಪ್ಪಲಿ ಕದ್ದಿದ್ದಾನೆಂದು ಆರೋಪಿಸಿ ದಲಿತ ಹುಡುಗನ ಹಲ್ಲೆ ಮಾಡಿ, ಚಪ್ಪಲಿ ತೊಳೆಸಿರುವ ಅಮಾನವೀಯ ಘಟನೆ ಹಾಸನ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ನಡೆದಿದೆ. ಸಾಲಗಾಮೆ ಹೋಬಳಿಯ ಸೀಗೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದರ್ಶನ್ ಮಂಗಳವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ.

ಸೀಗೆ ಗ್ರಾಮದ ಬಾರೆ ಮೇಲಿನ ವಾಸಿಗಳಾದ ಲಿಂಗಾಯತ ಸಮುದಾಯಕ್ಕೆ ಸೇರಿದವರು ಈ ಹಲ್ಲೆಯನ್ನು ನಡೆಸಿದ್ದು, ರೇವಣಸಿದ್ದಪ್ಪ, ಬಸವರಾಜು, ಮತ್ತು ಸಾಗರ್ ಎಂಬುವವರು ದರ್ಶನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ದರ್ಶನ್ ಪೋಷಕರು ಸ್ಥಳಕ್ಕೆ ಬಂದು ವಿಚಾರಿಸುವಾಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ.

ಸುಳ್ಳು ಆರೋಪ ಹೊರಿಸಿ ಹಲ್ಲೆ

ಶಾಲೆ ಮುಗಿಸಿ ಸ್ನೇಹಿತ ಮನೋಜ್ ಜೊತೆ ದರ್ಶನ್ ಮನೆಗೆ ಹೋಗುವ ದಾರಿಯಲ್ಲಿ ಚಪ್ಪಲಿಗಳು ಬಿದ್ದಿವೆ. ರಸ್ತೆಯಲ್ಲಿ ಬಿದ್ದಿದ್ದ ಚಪ್ಪಲಿಯನ್ನು ದರ್ಶನ್ ತನ್ನ ಕಾಲಿನಿಂದ ಪಕ್ಕಕ್ಕೆ  ತಳ್ಳಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಸವರ್ಣಿಯರು ಆತನೇ ಚಪ್ಪಲಿಯನ್ನು ಕದ್ದಿದ್ದಾನೆಂದು ಭಾವಿಸಿದ್ದಲ್ಲದೆ, ನಮ್ಮ ಚಪ್ಪಲಿಯನ್ನು ಕದ್ದಿದ್ದೀಯಾ ಎಂದು ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ. 

ಈ ವೇಳೆ ಜೊತೆಯಲ್ಲಿದ್ದ ಸ್ನೇಹಿತ ಮನೋಜ್ ಓಡಿ ಹೋಗಿ ದರ್ಶನ್ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೋಷಕರು ಘಟನೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ರೇವಣಸಿದ್ದಪ್ಪ, ಬಸವರಾಜು, ಮತ್ತು ಸಾಗರ್ ಎಂಬುವವರು ದರ್ಶನ್ ತಂದೆ- ತಾಯಿಯನ್ನು ಅವಾಚ್ಯವಾಗಿ ನಿಂಧಿಸಿ ಥಳಿಸಿದ್ದಾರೆ. ಅಲ್ಲದೆ ಜಾತಿ ನಿಂದನೆಯ ಬೈಗುಳ ಕೂಡ ಮಾಡಿದ್ದಾರೆ. ಈ ವೇಳೆ ದರ್ಶನ್ ತಾಯಿ ಬಟ್ಟೆಗಳು ಹರಿದಿವೆ, ಕಿವಿ ಓಲೆ ಮತ್ತು ಮಾಂಗಲ್ಯ ಸರ ತುಂಡಾಗಿದೆ. 

ಕೊಂಡಜ್ಜಿ ಗ್ರಾಮದಲ್ಲಿ ನಡೆದ ಈ ಘಟನೆ ವಿಚಾರ ತಿಳಿದ ಜಿಲ್ಲಾ ದಲಿತ ಸಂಘಟನೆಯ ಮುಖಂಡರಾದ ಹೆತ್ತೂರ್ ನಾಗರಾಜು ಮತ್ತು ಕೆವಿಎಸ್ ಸಂಘಟನೆ ಮುಖಂಡರಾದ ಕುಮಾರಸ್ವಾಮಿಯವರು ಸಂತ್ರಸ್ತ ಕುಟುಂಬಕ್ಕೆ ಧೈರ್ಯ ಹೇಳಿ, ಕೃತ್ಯ ಸಂಬಂಧ ಪೋಲಿಸ್ ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಿಸಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.

ಕೆವಿಎಸ್ ಸಂಘಟನೆ ಮುಖಂಡರಾದ ಕುಮಾರಸ್ವಾಮಿಯವರು ಈದಿನ.ಕಾಂನೊಂದಿಗೆ ಮಾತನಾಡಿ, "ಕೊಂಡಜ್ಜಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ರವಿ ಕುಮಾರ್, ಪತ್ನಿ ಭವ್ಯ ಹಾಗೂ ಅವರ ಮಗ ದರ್ಶನ್ ಮೇಲೆ ನಡೆದಿರುವ ಹಲ್ಲೆ, ಜಾತಿ ನಿಂದನೆ ಮತ್ತು ಹುಡುಗ ದರ್ಶನ್‌ನಿಂದ ಚಪ್ಪಲಿ ತೊಳೆಸಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಕೊಂಡಜ್ಜಿ ಗ್ರಾಮದ ವಾಸಿಗಳಾದ ರೇವಣಸಿದ್ದಪ್ಪ, ಬಸವರಾಜು, ಮತ್ತು ಸಾಗರ್ ಇವರಿಗೆ ಸೂಕ್ತ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದ್ದಾರೆ.

ಪ್ರಕರಣದ ಸಂಬಂಧ ದಲಿತ ಸಂಘಟನೆಯ ಪ್ರಮುಖರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಡಿವೈಎಸ್ಪಿ ಕೊಂಡಜ್ಜಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್