ಹಾಸನ| ಕರು ಸಾಗಿಸುತ್ತಿದ್ದ ದಲಿತರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ಆಕ್ರೋಶ

  • ಪ್ರತಿಭಟನೆ ಮಾಡಿದ ದಲಿತ ಮುಖಂಡರ ಮೇಲೆ ಎಫ್ಐಆರ್ ದಾಖಲು
  • ಸೋಮವಾರ ಪ್ರತಿಭಟನೆಗೆ ಕರೆ ನೀಡಿದ ದಲಿತ ಮುಖಂಡರು

ಸಾಕಾಣಿಕೆ ಮಾಡಲು ಕರುವನ್ನು ತರುತ್ತಿದ್ದ ದಲಿತ ವ್ಯಕ್ತಿಯನ್ನು ತಡೆದು ಬಜರಂಗ ದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಎದುರು ದಲಿತ ಮುಖಂಡರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಹಾಗೂ ಕಾಲೇಶ್‌ ಹಲ್ಲೆಗೊಳಗಾದವರು. 

ಘಟನೆ ಕುರಿತು ದಲಿತ ಮುಖಂಡ ಬೈಕೆರೆ ದೇವರಾಜ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಆಗಸ್ಟ್ 20ರಂದು ಸಂಜೆ 4 ಗಂಟೆ ಸಮಯದಲ್ಲಿ ಮಂಜುನಾಥ್, ಜಾನೆಕೆರೆ ಗ್ರಾಮದಿಂದ ಕರುವನ್ನು ಸಾಕಲು ವಾಹನದಲ್ಲಿ ತರುತ್ತಿದ್ದರು. ಈ ವೇಳೆ ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಬಜರಂಗದಳದ ಕಾರ್ಯಕರ್ತ ದೀಪು ಹಾಗೂ ಇತರರು ಬಾಡಿಗೆ ವಾಹನವನ್ನು ಅಡ್ಡಗಟ್ಟಿ “ಕಸಾಯಿ ಖಾನೆಗೆ ಸಾಗಿಸುತ್ತಿದ್ದೀರಾ ಎಂದು ಗಲಾಟೆ ಮಾಡಿ, ಜಾತಿ ನಿಂದನೆ ಮಾಡಿ ಮಂಜುನಾಥ್ ಹಾಗೂ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಆರೋಪಿಸಿದರು.

“ಈ ಘಟನೆಯ ಬಳಿಕ ಸಕಲೇಶಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯ ಬಳಿ ಮಂಜುನಾಥ್ ಅವರು ಅಣ್ಣನ ಮಗ ಕಾಲೇಶ್ ಮೇಲೆಯೂ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಕರುವನ್ನು ತರಲು ಗ್ರಾಮ ಪಂಚಾತಿಯಿಂದ ಅನುಮತಿ ಪತ್ರ ಪಡೆದು ಕಾನೂನಾತ್ಮಕವಾಗಿಯೇ ಕರುವನ್ನು ತರಲಾಗುತ್ತಿತ್ತು” ಎಂದು ವಿವರಿಸಿದರು.

ಮುಖಂಡ ವೇಣುಕುಮಾರ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಾನೂನಾತ್ಮಕವಾಗಿ ಕರುವನ್ನು ಸಾಗಿಸುತ್ತಿದ್ದರೂ ಬಜರಂಗದಳ ಕಾರ್ಯಕರ್ತರು ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದರೆ ಸರಿಯಾಗಿ ಸ್ಪಂದಿಸದೆ ಕಾಲಹರಣ ಮಾಡುತ್ತಾ ಸತಾಯಿಸುತ್ತಾರೆ. ಹಾಗಾದರೆ ಬಜರಂಗದಳ ಕಾರ್ಯಕರ್ತರಿಗೆ ನೈತಿಕ ಪೊಲೀಸ್‌ಗಿರಿ ಮಾಡಲು ಅನುಮತಿ ನೀಡಿದವರು ಯಾರು? ಪೊಲೀಸರು ಯಾಕೆ ಅವರಿಗೆ ಅಷ್ಟೊಂದು ಸಹಕಾರ ನೀಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಹೆನ್ನಲಿ ಶಾಂತರಾಜು, ಸಿಡಗಳಲೆ ಸಂದೀಪ, ಕಲ್ಗಣೆ ಗಿರೀಶ್, ಪ್ರಶಾಂತ್, ಪೇಪರ್ ಮಂಜು, ಮಳಲಿ ಪುಟ್ಟರಾಜು, ಶಾಂತರಾಜು, ರುದ್ರೇಶ್ ವಳಲಹಳ್ಳಿ, ಬೈಕೆರೆ ವೆಂಕಟೇಶ್ ಹಾಗೂ ಇತರರು ಭಾಗವಹಿಸಿದ್ದರು. 

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ| ದಲಿತ ಯುವಕನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮ ಪ್ರಧಾನ್‌

ಪ್ರತಿಭಟನೆ ಮಾಡಿದವರ ವಿರುದ್ಧವೂ ಎಫ್‌ಐಆರ್‌

ಬಜರಂಗದಳದ ಕಾರ್ಯಕರ್ತರಾದ ಗುರು, ರಘು, ಕಿರಣ, ಕೌಶಿಕ್, ಕಬ್ಬಿನಗದ್ದೆ ನವೀನ, ಲೋಕೇಶ್, ಶಿವು ಮತ್ತು ರಘು ಎಂಬುವರ ವಿರುದ್ಧ ಐಪಿಸಿ ಕಲಂ 1860, 341, 323, 504, 506 ಮತ್ತು ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಾಗಿದೆ.

ಬಜರಂಗದಳ ಕಾರ್ಯಕರ್ತರ ವಿರುದ್ಧ ಸಕಲೇಶಪುರ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ದಲಿತ ಮುಖಂಡರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಬಜರಂಗದಳದ ಕಾರ್ಯಕರ್ತ ಶೀವು ಭಾನುವಾರ ನೀಡಿದ ದೂರಿನ ಅನ್ವಯ ದಲಿತ ಮುಖಂಡರಾದ ಪುರಸಭೆ ಸದಸ್ಯ ಅಣ್ಣಪ್ಪ, ಬೈಕೆರೆ ದೇವರಾಜ್, ವಕೀಲ ವೇಣು ಕುಮಾರ್ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಸೋಮವಾರ ಪ್ರತಿಭಟನೆಗೆ ಕರೆ

ಸಕಲೇಶಪುರದಲ್ಲಿ ಶಾಂತಿ ಕದಡುತ್ತಿರುವ ಬಜರಂಗದಳ ಸಂಘಟನೆಯನ್ನು ನಿಷೇಧಿಸುವಂತೆ ಮತ್ತು ದಲಿತರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಾಗೂ ಬಜರಂಗದಳದವರಿಗೆ ಕುಮ್ಮಕ್ಕು ನೀಡುತ್ತಿರುವ ಸಕಲೇಶಪುರದ ಪೊಲೀಸ್ ಇಲಾಖೆಯ ವಿರುದ್ಧ ಸೋಮವಾರ ಬೆಳಗ್ಗೆ 10 ಗಂಟೆಗೆ ಸಕಲೇಶಪುರದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಮಾಸ್ ಮೀಡಿಯಾ ಹಾಸನ, ಚಿಕ್ಕಮಗಳೂರು ಜಿಲ್ಲಾ ಸಂಯೋಜಕರಾದ ಗಿರಿಜಾ ಎಸ್ ಜಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್