ಹಾಸನ | ಅಂಬೇಡ್ಕರ್ ಫೋಟೋಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ದಸಂಸ ಮುಖಂಡನ ಅರೆಬೆತ್ತಲೆ ಧರಣಿ

  • ಜೀತವಿಮುಕ್ತ ದಲಿತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ವಿಫಲ: ಆರೋಪ
  • ಎರಡು ವರ್ಷದ ಹಿಂದೆ ನೀಡಿದ್ದ ಅಂಬೇಡ್ಕರ್ ಫೋಟೊ ಹಿಂತಿರುಗಿಸಲು ಒತ್ತಾಯ

“ಜೀತ ವಿಮುಕ್ತರ ಸಮಸ್ಯೆ ಬಗೆಹರಿಸದ ಹಿನ್ನೆಲೆ ತಾನು ನೀಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಜಿಲ್ಲಾಧಿಕಾರಿ ವಾಪಸ್ ನೀಡಬೇಕು” ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣದಾಸ್ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಏಕಾಂಗಿಯಾಗಿ ಅರೆಬೆತ್ತಲೆ ಧರಣಿ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣದಾಸ್, “ದಲಿತರ ಬಗ್ಗೆ ಜಿಲ್ಲಾಧಿಕಾರಿ ಉದಾಸೀನ ಧೋರಣೆ ಹೊಂದಿದ್ದಾರೆ. ಹಾಸನ ತಾಲೂಕಿನ ಜೀತ ವಿಮುಕ್ತರ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ. ಕಳೆದ ನಾಲ್ಕು ವರ್ಷದಿಂದ ಜೀತ ವಿಮುಕ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಜೀತ ವಿಮುಕ್ತರೊಂದಿಗೆ ನೂರಾರು ಬಾರಿ ಮನವಿ ನೀಡುತ್ತಾ ಬಂದಿದ್ದೇವೆ. ಆದರೂ ಯಾವುದೇ ರೀತಿಯಲ್ಲೂ ಜೀತ ವಿಮುಕ್ತರಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಾ ಬರಲಾಗಿದೆ” ಎಂದು ದೂರಿದರು.

“ಕಂದಾಯ ಅಧಿಕಾರಿಗಳೊಂದಿಗೆ ಶಾಮೀಲಾದ ಕೆಲವು ದುಷ್ಟ ಶಕ್ತಿಗಳು ಜೀತ ವಿಮುಕ್ತರಿಗೆ ಮಂಜೂರಾಗಿದ್ದ ಜಮೀನನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ತಮ್ಮ ವಶಕ್ಕೆ ತೆಗೆದುಕೊಂಡರು. ಈ ನಡುವೆ ಜಿಲ್ಲಾಧಿಕಾರಿಗೆ ನ್ಯಾಯಾಲಯ 1994-95ರಲ್ಲಿ ಜೀತ ವಿಮುಕ್ತರಿಗೆ ಪರ್ಯಾಯ ಜಮೀನು ಒದಗಿಸುವಂತೆ ಆದೇಶ ನೀಡಿತು. ಈ ಬಗ್ಗೆ ಜೀತವಿಮುಕ್ತರು ಆಗಿನಿಂದಲೂ ಸತತವಾಗಿ ಮನವಿ ಸಲ್ಲಿಸುತ್ತಾ ಬರುತ್ತಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 25 ವರ್ಷಗಳಿಂದ ಜೀತ ವಿಮುಕ್ತರ ಪರವಾಗಿ ಸತತವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದರೂ ಯಾವ ಪ್ರಯೋಜನವಾಗಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕೇವಲ ಪತ್ರ ವ್ಯವಹಾರ ಮಾಡುತ್ತಾ ವಿಳಂಬ ಧೋರಣೆ ಅನುಸರಿಸುತ್ತಾ ಬರುತ್ತಿದ್ದೀರಿ. ಈವರೆಗೆ 30ರಿಂದ 40 ಸಭೆಗಳು ನಡೆದು ಜೀತ ವಿಮುಕ್ತರ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಗಣಿಗಾರಿಕೆಗೆ ಅನುಮತಿ ನೀಡದಂತೆ ಆಗ್ರಹಿಸಿ ಪ್ರತಿಭಟನೆ

“2022ರ ಜೂನ್ 29 ರಂದು ನಡೆದ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಮತ್ತು ಉಸ್ತುವಾರಿ ಸಮಿತಿಯಲ್ಲಿ ವಿಷಯ ಮಂಡಿಸಿದಾಗ ಸಕಲೇಶಪುರ ಉಪವಿಭಾಗಾಧಿಕಾರಿಗಳು ಜೀತ ವಿಮುಕ್ತರ ಪಟ್ಟಿಯನ್ನು ನೀಡಿದಲ್ಲಿ ಜಮೀನು ನೀಡುವುದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭರವಸೆ ನೀಡಿದ್ದರು. ಈ ನಡುವೆ ಜೀತ ವಿಮುಕ್ತರಿಗಾಗಿ ಗುರುತಿಸಲಾಗಿದ್ದ ಕಂದಾಯ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಗಿಡ ನೆಡುವುದರ ಮೂಲಕ ಜೀತ ವಿಮುಕ್ತರ 4 ದಶಕಗಳ ಭೂಮಿಯ ಕನಸನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು.

“ಅರಣ್ಯ ಇಲಾಖೆಯ ದೌರ್ಜನ್ಯದ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿದರೂ ಇದುವರೆಗೂ ಯಾವುದೋ ಒತ್ತಡಕ್ಕೆ ಮಣಿದು ಜೀತ ವಿಮುಕ್ತರ ಬಗ್ಗೆ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಕಂದಾಯ ಅಧಿಕಾರಿಗಳ ಸಭೆ ಕರೆಯಬೇಕು” ಎಂದು ಆಗ್ರಹಿಸಿದರು.

“ಇದು ಸಾಧ್ಯವಾಗದಿದ್ದರೆ ಎರಡು ವರ್ಷಗಳ ಹಿಂದೆ ಜೀತ ವಿಮುಕ್ತರ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ನೀಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರವನ್ನು ಹಿಂತಿರುಗಿಸಬೇಕು’ ಎಂದು ಒತ್ತಾಯಿಸಿದರು. ಇದಾದ ಕೆಲ ಹೊತ್ತಿನಲ್ಲೇ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಕೃಷ್ಣದಾಸ್ ಅವರಿಗೆ ಅಂಬೇಡ್ಕರ್ ಫೋಟೋ ವಾಪಸ್ ಕೊಟ್ಟರು.

Image

“ಸ್ವಲ್ಪ ಸಮಯದಲ್ಲೆ ಜಿಲ್ಲಾಧಿಕಾರಿ ತಮ್ಮ ಕಚೇರಿ ಸಿಬ್ಬಂದಿಯ ಕೈಲಿ ಅಂಬೇಡ್ಕರ್ ಭಾವಚಿತ್ರ ನನಗೆ ವಾಪಸ್ ಕೊಡುವ ಜೀತ ವಿಮುಕ್ತರಿಗೆ ನ್ಯಾಯ ಸಲ್ಲಿಸಲು ಆಗುವುದಿಲ್ಲ ಎನ್ನುವನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ದಲಿತ ವಿರೋಧ ನೀತಿ ಅನುಸರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ದಲಿತ ಸಂಘಟಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಮಾಸ್ ಮೀಡಿಯಾ ಹಾಸನ, ಚಿಕ್ಕಮಗಳೂರು ಜಿಲ್ಲಾ ಸಂಯೋಜಕರಾದ ಎಸ್ ಜಿ ಗಿರಿಜಾ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್