ಹಾಸನ | ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

  • ಅರಕಲಗೂಡು ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಮೇಲೆ ಹಲ್ಲೆ 
  • ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್ ಬಂಧನಕ್ಕೆ ಆಗ್ರಹ

“ದಲಿತ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಜತೆಗೆ ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ಆಕ್ರಮಣಗಳು ದಿನೇದಿನೆ ಹೆಚ್ಚಾಗುತ್ತಿದ್ದು, ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಅಧ್ಯಕ್ಷ ಶಿವಶಂಕರ್ ಆರೋಪಿಸಿದರು.

ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು ಮತ್ತು ಇತ್ತೀಚೆಗೆ ಅರಕಲಗೂಡು ತಾಲೂಕಿನಲ್ಲಿ ಗಿರಿಜಾನಂದ ಮುಂಬಳೆ ಅವರ ಮೇಲೆ ಹಲ್ಲೆ ನಡೆಸಿದ ಶಿವಕುಮಾರ್ ಅವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ನಾನಾ ದಲಿತಪರ ಸಂಘಟನೆಗಳ ವತಿಯಿಂದ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಇತ್ತೀಚೆಗೆ ಅರಕಲಗೂಡು ತಾಲೂಕಿನ ಶಿಕ್ಷಕರ ಕಾರ್ಯಾಗಾರದಲ್ಲಿ ತಪ್ಪು ಗಣಿತ ಲೆಕ್ಕಗಳನ್ನು ಮಾಡುತ್ತಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕನ ತಪ್ಪನ್ನು ಸರಿಪಡಿಸಿದ ಕಾರಣದಿಂದ ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಅವರನ್ನು ಮನ ಬಂದಂತೆ ಥಳಿಸಿದ್ದಲ್ಲದೆ , ಜಾತಿ ನಿಂದನೆ ಮಾಡಿ ಅಮಾನವೀಯವಾಗಿ ಬಡೆಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಸಿ, ಎಸ್ಟಿ ಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ” ಎಂದು ಆರೋಪಿಸಿದರು. 

“ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಹಲ್ಲೆ ನಡೆಸಿರುವುದು ಖಂಡನೀಯ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

“ಅಧಿಕಾರಿ ಗಿರಿಜಾನಂದ ಮುಂಬಳೆ ಅವರ ಮೇಲಿನ ಹಲ್ಲೆಯಿಂದ ಜಿಲ್ಲೆಯಲ್ಲಿ ದಲಿತರು ಭಯಭೀತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಪೊಲೀಸರು ಮುಂಬಾಳೆ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಕ್ಷೌರಿಕನ ಅಂಗಡಿಗೆ ಬೀಗ ಜಡಿಯಲು ಮುಂದಾದ ಗ್ರಾಮ ಪಂಚಾಯ್ತಿ!

ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಪ್ರತಿಭಟನಾಕಾರರು ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಎನ್ ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಕೆಲ ಕಾಲ ಧರಣಿ ನಡೆಸಿ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಶ್ರೀಧರ ಕಲಿವೀರ್, ಕೃಷ್ಣ ದಾಸ್, ಎಚ್ ಕೆ ಸಂದೇಶ್, ಕೆ ಈರಪ್ಪ, ಗಂಗಾಧರ್ ಬಹುಜನ್, ಆರ್ ಪಿ ಐ ಸತೀಶ್, ಎಂ ಜಿ ಪೃಥ್ವಿ, ಶಿವಮ್ಮ, ನಾಗರಾಜ್ ಹೆತ್ತೂರು,  ಅಂಬುಗ ಮಲ್ಲೇಶ್, ಕೆ ಟಿ ಶಿವಪ್ರಸಾದ್, ಕೆ ಟಿ ಸುವರ್ಣ, ಜಿ ಓ ಮಹಾಂತಪ್ಪ, ಎಸ್‌ಸಿ- ಎಸ್‌ಟಿ ನಿವೃತ್ತ ನೌಕರರು ಭಾಗವಹಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180