ಹಾಸನ | ದಲಿತರ ಸ್ಮಶಾನ ಭೂಮಿ ಕಬಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

  • ಮಲಸಾವರ (ದಾಸನ ಗುಡ್ಡ) ಗ್ರಾಮಸ್ಥರಿಂದ ಸ್ಮಶಾನ ಜಾಗದಲ್ಲಿ ಪ್ರತಿಭಟನೆ
  • ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭರವಸೆ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಾಲೀಕರೊಬ್ಬರು ಕಳೆದ 80 ವರ್ಷಗಳಿಂದ ದಲಿತರು ಶವ ಸಂಸ್ಕಾರ ಮಾಡುತ್ತಿರುವ ಸ್ಮಶಾನ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ, ಮಲಸಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನ ಗುಡ್ಡ ಗ್ರಾಮಸ್ಥರು ಮಂಗಳವಾರ ಸ್ಮಶಾನ ಭೂಮಿಯಲ್ಲಿ ಪ್ರತಿಭಟನೆ ನಡೆಸಿದರು.

“ದಾಸನ ಗುಡ್ಡ ಗ್ರಾಮದ ಸರ್ವೆ ನಂಬರ್ 138 ರಲ್ಲಿ ಇರುವ ಮೂರು ಎಕರೆ ಸರ್ಕಾರಿ ಭೂಮಿಯನ್ನು 80 ವರ್ಷಗಳಿಂದ  ದಲಿತರು ಸ್ಮಶಾನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಲಸಾವರ ಗ್ರಾಮದ ಗುರುಬಸಪ್ಪ ಮತ್ತು ನಿತಿನ್ ಎಂಬುವರು ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಒತ್ತುವರಿ ಮಾಡಿ ತಂತಿ ಬೆಲಿ ನಿರ್ಮಿಸಿ ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದರು.

ಮಲಸಾವರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಮತ್ತು ಪ್ರೇಮ ಸುದ್ದಿಗಾರರೊಂದಿಗೆ ಮಾತನಾಡಿ, “ದಾಸನ ಗುಡ್ಡ ಗ್ರಾಮದಲ್ಲಿ ನೂರುಕ್ಕೂ ಹೆಚ್ಚು ಮನೆಗಳಿವೆ, 350 ರಿಂದ 400 ಜನ ಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಭೂಮಿಯನ್ನು ಅಧಿಕೃತವಾಗಿ ಮಂಜೂರು ಮಾಡಿಕೊಡುವಂತೆ, ಕಳೆದ ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿ, ನಾಡ ಕಚೇರಿ ಮತ್ತು ಉಪ ತಹಶೀಲ್ದಾರ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಇಲ್ಲಿವರೆಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ” ಎಂದು ದೂರಿದರು.

“ಬೇಲೂರು ತಹಶೀಲ್ದಾರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಸ್ಮಶಾನ ಜಾಗವನ್ನು ಸರ್ವೆ ಮಾಡಿಸಿ, ಒತ್ತುವರಿ ತೆರವು ಮಾಡಿಸಬೇಕು. ಇಲ್ಲವಾದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಾಸನ ಗುಡ್ಡ ಗ್ರಾಮಸ್ಥರಾದ ಶೇಖರ್, ಚಂದ್ರಯ್ಯ , ಭದ್ರೇಶ್, ಕಲಾವತಿ, ಇಂದ್ರಮ್ಮ, ಧರ್ಮೇಶ್, ಪುಟ್ಟಸ್ವಾಮಿ, ನಿಖಿತ್ ಕುಮಾರ್, ಹರೀಶ್ ಇತರರು ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೆಲೆ ಇಲ್ಲದ ಸುಡುಗಾಡು ಸಿದ್ಧರ ಗುಡಿಸಲುಗಳನ್ನೂ ಕಿತ್ತುಕೊಂಡರು

ಸಾರ್ವಜನಿಕ ಉದ್ದೇಶಕ್ಕೆ ಭೂಮಿ ನೀಡಿ: ದಲಿತ ಮುಖಂಡ

“ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ಭೂಕಬಳಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸ್ಮಶಾನ ಭೂಮಿಯನ್ನು ಕಬಳಿಸಲು ಹೊರಟಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಗ್ರಾಮದ ಅಭಿವೃದ್ಧಿ ಮತ್ತು ಸಾರ್ವಜನಿಕ ಉದ್ದೇಶದ ಕಾಮಗಾರಿಗಳಿಗಾಗಿ ಅಧಿಕಾರಿಗಳು ಕೂಡಲೇ 3 ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡಬೇಕು” ಎಂದು ದಲಿತ ಮುಖಂಡ ಲೋಕೇಶ್ ಒತ್ತಾಯಿಸಿದರು.

ಶೀಘ್ರವೇ ಗ್ರಾಮಕ್ಕೆ ಭೇಟಿ: ಅಧಿಕಾರಿ ಭರವಸೆ

“ದಾಸನ ಗುಡ್ಡದ ಗ್ರಾಮಸ್ಥರು ಶವ ಸಂಸ್ಕಾರ ಮಾಡುತ್ತಿರುವ ಸರ್ಕಾರಿ ಜಮೀನು ಸ್ಮಶಾನ ಭೂಮಿಯಾಗಿ ಮತ್ತು ಉಳಿಕೆ ಜಾಗವನ್ನು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿಸಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದಲ್ಲಿನ ಮೂಲ ಸೌಕರ್ಯ ಹಾಗೂ ವಾಸ್ತವ ತಿಳಿಯಲು ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಾಗುವುದು” ಎಂದು ಬೇಲೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ ಎಂ ಮೋಹನ್ ಕುಮಾರ್ ಭರವಸೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180