ಹಾಸನ | ಅಕ್ರಮವಾಗಿ ಗೋಧಿ ಸಾಗಿಸುತ್ತಿದ್ದ ಲಾರಿ ಪೊಲೀಸ್ ವಶಕ್ಕೆ

  • ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ವಿತರಿಸಬೇಕಿದ್ದ 250 ಚೀಲ ಗೋಧಿ
  • ಬೇಲೂರು ಪಟ್ಟಣದ ಜೆ ಪಿ ನಗರ ಪೆಟ್ರೊಲ್ ಬಂಕ್ ಬಳಿ ಲಾರಿ ಬಿಟ್ಟು ಕಾಲುಕಿತ್ತ ಚಾಲಕ

ಕರ್ನಾಟಕ ಆಹಾರ ನಿಗಮದ ಗೋದಾಮಿನಿಂದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ವಿತರಿಸಬೇಕಿದ್ದ 250 ಚೀಲ ಗೋಧಿಯನ್ನು ಅಕ್ರಮವಾಗಿ ಬೇರೆಡೆಗೆ ಸಾಗಿಸುತ್ತಿದ್ದ ಲಾರಿಯನ್ನು ಜಯ ಕರ್ನಾಟಕ ಸಂಘಟನೆ ಮುಖಂಡರು ಅಡ್ಡಗಟ್ಟಿ ಪೊಲೀಸ್ ವಶಕ್ಕೆ ನೀಡಿದ್ದಾರೆ.

ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ಮಂಗಳವಾರ ರಾತ್ರಿ 11 ಗಂಟೆಯಲ್ಲಿ ಈ ಘಟನೆ ನಡೆದಿದೆ. ಕೆಎ 12-2247 ವಾಹನದಲ್ಲಿ ಅಕ್ಕಿ ಮತ್ತು ಗೋಧಿ ಸರಬರಾಜು ಮಾಡಲು ಸೆಪ್ಟೆಂಬರ್ 2ರಂದು ಇಲಾಖೆಯಿಂದ ಪರವಾನಗಿಯ ಬಿಲ್ ತೆಗೆದಿದ್ದಾರೆ. ಆದರೆ, ಮಂಗಳವಾರ ರಾತ್ರಿ ಕೆ ಎ 46-8919 ನಂಬರಿನ ಲಾರಿಯಲ್ಲಿ ಅಕ್ರಮವಾಗಿ ಗೋಧಿಯನ್ನು ಬೇರೆಡೆಗೆ ಸಾಗಿಸಲು ಯತ್ನಿಸಿದ್ದಾರೆ.

ಅಕ್ರಮವಾಗಿ ಗೋಧಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಲಾರಿಯನ್ನು ಚಾಲಕ ಪ್ರಜ್ವಲ್, ಜೆ ಪಿ ನಗರ ಪೆಟ್ರೋಲ್ ಬಂಕ್ ಆವರಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. 

ಬಳಿಕ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳಕ್ಕೆ ಬೇಲೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರವಿಕಿರಣ್ ಮತ್ತು ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಕಂದಾಯ ನಿರೀಕ್ಷಕ (ಆರ್.ಐ) ಹನುಮಂತು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ| ಹುಲಿ ಜೊತೆ ನಿರಾಯುಧವಾಗಿ ಕಾದಾಡಿ ತನ್ನ ಮಗುವನ್ನು ರಕ್ಷಿಸಿಕೊಂಡ ತಾಯಿ!

ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ ಕೆ ಆರ್ ಸೋಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ, “ಗೋಧಿಯನ್ನು ಅಕ್ರಮವಾಗಿ ಸಾಗಿಸುತ್ತಿದ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ದಂಧೆಯಲ್ಲಿ ಭಾಗಿಯಾಗಿರುವ ಬೇಲೂರಿನ ಕೆ ಎಫ್ ಸಿ ಗೋದಾಮಿನ ವ್ಯವಸ್ಥಾಪಕ ಲಿಂಗರಾಜು ಮತ್ತು ಲಾರಿಗೆ ಗೋಧಿ ತುಂಬಿಸಿದ ಗೋದಾಮಿನ ಕಂಪ್ಯೂಟರ್ ಆಪರೇಟರ್ ಪ್ರಕಾಶ್ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, “ತಾಲೂಕಿನಲ್ಲಿ ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಬಡವರ ಅನ್ನಕ್ಕೂ ಕನ್ನ ಹಾಕುವ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಹೆಚ್ಚಿದ್ದು, ಇದಕೆಲ್ಲ ಸ್ಥಳೀಯ ಶಾಸಕರ ಕುಮ್ಮಕ್ಕು ಕಾರಣ” ಎಂದು ಆರೋಪಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180