ಹಾಸನ | ಶಾಸಕ ಎ.ಟಿ ರಾಮಸ್ವಾಮಿ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ

  • ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ಅಕ್ರಮ
  • ಸರ್ವೆ ನಂ.8/1ಬಿ ಹಾದು ಹೋಗುವ ಕಾಲುದಾರಿ, ಬಂಡಿ ಪ್ರದೇಶ ಒತ್ತುವರಿ

ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ಅವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರೇವಣ್ಣ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, “ಬೇಲಿಯೇ ಎದ್ದು ಹೊಲ ಮೇಯುವಂತೆ, ಶಾಸಕರೇ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ. ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ನೇತೃತ್ವ ವಹಿಸಿದ್ದ ಶಾಸಕರು ಇಂದು ಅವರೇ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ತಮ್ಮ ತೋಟದ ಮನೆಗೆ ರಸ್ತೆ ಮಾಡಿಸಿ ಅಕ್ರಮ ಎಸಗಿದ್ದಾರೆ" ಎಂದು ಆರೋಪಿಸಿದರು. 

“ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಬಿಸಲಹಳ್ಳಿ ಸರ್ವೆ ನಂ. 7/1, 7/2, 8/1ಎ ಹಾಗೂ 8/1ಎ.2 ಮತ್ತು ಸರ್ವೆ ನಂ. 8/1ಬಿಯಲ್ಲಿ ಹಾದು ಹೋಗಿರುವ ಕಾಲುದಾರಿ, ಬಂಡಿ ಪ್ರದೇಶವನ್ನು ರಾಮಸ್ವಾಮಿ ಒತ್ತುವರಿ ಮಾಡಿದ್ದಾರೆ. ಅವರು ಒತ್ತುವರಿ ಮಾಡಿಲ್ಲದಿದ್ದರೆ, ದಾಖಲೆಗಳನ್ನು ಬಹಿರಂಗ ಪಡಿಸಬೇಕು” ಎಂದು ಒತ್ತಾಯಿಸಿದರು. 

"ಭೂ ಅಕ್ರಮ ಕುರಿತು ಸದನದಲ್ಲಿ ಗಂಟೆಗಟ್ಟಲೆ ಭಾಷಣ ಮಾಡುವ ರಾಮಸ್ವಾಮಿ ಅವರೇ ಸುಮಾರು 20 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅರಕಲಗೂಡಿನ ಇಸ್ಮಾಯಿಲ್ ವಾಸಿಮ್ ಎಂಬುವರು 2018ರಲ್ಲಿ ಎ.ಟಿ ರಾಮಸ್ವಾಮಿ, ತಹಸೀಲ್ದಾರ್, ತಾಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ರಾಜೇಂದ್ರ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ" ಎಂದರು.

ಈ ಸುದ್ದಿ ಓದಿದ್ದೀರಾ? ಮತಾಂತರ ನಿಷೇಧ | ವಿಧೇಯಕ ಪ್ರಶ್ನಿಸಿ ಕಾನೂನು ಹೋರಾಟ ನಡೆಸುವ ಬಗ್ಗೆ ಪರಿಶೀಲಿಸುತ್ತೇವೆ: ಪ್ರಿಯಾಂಕ್ ಖರ್ಗೆ

“ರಾಮಸ್ವಾಮಿ ಅವರು ಸರ್ಕಾರಿ ಜಮೀನು ಒತ್ತುವರಿ ಮಾಡಿ, ತಮ್ಮ ಜಮೀನಿಗೆ ತಾಲೂಕು ಪಂಚಾಯತಿ ಅನುದಾನದಲ್ಲಿ 13ನೇ ಹಣಕಾಸು ಯೋಜನೆಯಲ್ಲಿ ಅನುಮೋದನೆ ಗೊಂಡಿರುವ 8 ಲಕ್ಷಕ್ಕೂ ಅಧಿಕ ಹಣದಿಂದ ತಮ್ಮ ಜಮೀನಿಗೆ ರಸ್ತೆ ಕಾಮಗಾರಿ ಮಾಡಿಸಿಕೊಂಡಿದ್ದು, ಸಾರ್ವಜನಿಕರ ಹಣ ದುರ್ಬಳಕೆ ಮಾಡಿದ್ದಾರೆ” ಎಂದು ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್