ಹಾಸನ | ಬುಡಕಟ್ಟು ಸಮುದಾಯದ ಗಿಡಮೂಲಿಕೆ ಉತ್ಪನ್ನ ವ್ಯಾಪಾರಕ್ಕೆ ಪೊಲೀಸರ ಅಡ್ಡಿ

  • ಅಪಘಾತದ ಕಾರಣ ನೀಡಿ ಜಾಹೀರಾತು ಫಲಕಗಳ ಧ್ವಂಸ
  • ವ್ಯಾಪಾರ ನಡೆಸಲು ಪರವಾನಗಿ ಪಡೆಯುವಂತೆ ಎಚ್ಚರಿಕೆ 

ಗಿಡ ಮೂಲಿಕೆ, ಆಯುರ್ವೇದ ಎಣ್ಣೆ, ನೋವಿನ ಎಣ್ಣೆ, ದೃಷ್ಠಿ ಬೊಂಬೆ ಸೇರಿದಂತೆ ಹಲವು ಬಗೆಯ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಹಕ್ಕಿಪಿಕ್ಕಿ ಮತ್ತು ಶಿಳ್ಳೆಖ್ಯಾತ ಬುಡಕಟ್ಟು ಸಮುದಾಯದ ಜನರಿಗೆ ಈಗ ಸಂಕಷ್ಟ ಎದುರಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆ ಸಮೀಪದ ಹೆದ್ದಾರಿ ಪಕ್ಕದ ಅಂಗಡಿಹಳ್ಳಿ ಗ್ರಾಮದ ಶಿಳ್ಳೆಖ್ಯಾತ ಮತ್ತು ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 350 ಮನೆಗಳಿವೆ. ಇವರು ಪಾರಂಪರಿಕವಾಗಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ.

ಬೇಲೂರು-ಹಾಸನ ನಡುವಿನ ಮುಖ್ಯ ಹೆದ್ದಾರಿ ಗ್ರಾಮದ ಮಧ್ಯದಲ್ಲಿಯೇ ಹಾದು ಹೋಗಿರುವುದರಿಂದ ಈ ರಸ್ತೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಗ್ರಾಹಕರನ್ನು ಸೆಳೆಯುವ ದೃಷ್ಠಿಯಿಂದ ರಸ್ತೆ ಪಕ್ಕದಲ್ಲಿ ಅಂಗಡಿಹಳ್ಳಿಯ ಕೆಲವು ವ್ಯಾಪಾರಿಗಳು ತಮ್ಮ ಉತ್ಪನ್ನಗಳ ಕುರಿತ ಜಾಹೀರಾತು ಫಲಕ ಹಾಕಿದ್ದರು.

ಅಂಗಡಿಹಳ್ಳಿ ಗ್ರಾಮದ ಬಳಿ ರಸ್ತೆಗೆ ಜಾಹೀರಾತು ಫಲಕ ಹಾಕಿದ್ದರಿಂದ, ಈ ರಸ್ತೆಯಲ್ಲಿ ಅಪಘಾತ ಆಗುವ ಸಾಧ್ಯತೆ ಹೆಚ್ಚಾಗಲಿದೆ ಎಂಬ ಕಾರಣ ನೀಡಿ ಹಗರೆ ಠಾಣೆ ಪೊಲೀಸರು ಗ್ರಾಮಕ್ಕೆ ಬಂದು ಜಾಹಿರಾತು ಫಲಕಗಳನ್ನು ಕಿತ್ತು ಹಾಕಿದ್ದಾರೆ. ಅಷ್ಟು ಮಾತ್ರವಲ್ಲದೇ ಯಾವುದೇ ವ್ಯಾಪಾರ ಮಾಡುವುದಾದರೆ, ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಇಲ್ಲವೇ ವ್ಯಾಪಾರ ಮಾಡಬಾರದು ಎಂದು ಎಚ್ಚರಿಕೆ ನೀಡಿ ಹೋಗಿದ್ದಾರೆ.

ಈ ಘಟನೆ ಕುರಿತು ಅಂಗಡಿಹಳ್ಳಿ ಗ್ರಾಮದ ತೈಲ ವ್ಯಾಪಾರಿ ಸತ್ಯರಾಜ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ನಾವು ಪಾರಂಪರಿಕವಾಗಿ ಗಿಡಮೂಲಿಕೆ, ಗಾಳಿ ಬೀಜ, ಪ್ಲಾಸ್ಟಿಕ್‌ನ ಅಲಂಕಾರಿಕ ವಸ್ತುಗಳು, ದೃಷ್ಠಿ ಬೊಂಬೆ, ನೋವಿನ ಎಣ್ಣೆ, ತಲೆ ಕೂದಲ ಎಣ್ಣೆ  ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಇದನ್ನು ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲ. ಪೊಲೀಸರು ಮೂರು ದಿನದ ಹಿಂದೆ ಏಕಾಏಕಿ ಬಂದು ಜಾಹೀರಾತು ಫಲಕಗಳನ್ನು ಕಿತ್ತುಹಾಕಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ” ಎಂದು ಮಾಹಿತಿ ನೀಡಿದರು.

“ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಿಲ್ಲ. ಗ್ರಾಮದಲ್ಲಿ ಯಾವುದೇ ವ್ಯಾಪಾರ ಮಾಡುವುದಾದರೂ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಂದ ಪರವಾನಗಿ ಪಡೆಯಬೇಕು ಎಂದು ಎಚ್ಚರಿಕೆ ನೀಡಿ ಹೋಗಿದ್ದಾರೆ. ಹಾಗಾಗಿ ವ್ಯಾಪಾರ ಮಾಡಲು ಗ್ರಾಮಸ್ಥರು ಹಿಂದೆಮುಂದೆ ನೋಡುವ ಸ್ಥಿತಿ ಬಂದಿದೆ. ಮತ್ತೆ ಪೊಲೀಸರು ಗ್ರಾಮಕ್ಕೆ ಬಂದು ತೊಂದರೆ ನೀಡಿದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ಕುರಿತು ಗ್ರಾಮದ ಮುಖಂಡರು ಚರ್ಚಿಸಿದ್ದೇವೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಒಡಿಶಾ | ವಸತಿ ಸೌಲಭ್ಯದಿಂದ ವಂಚಿತರಾಗಿರುವ 150 ಕುಟುಂಬಗಳು

“ಹಕ್ಕಿಪಿಕ್ಕಿ, ಶಿಳ್ಳೆಖ್ಯಾತ ಸಮುದಾಯದ ನಾವು ಗ್ರಾಮದಲ್ಲಿ ವ್ಯಾಪಾರ ಮಾಡುವುದರ ಜತೆಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ವ್ಯಾಪಾರ ಮಾಡುತ್ತೇವೆ. ಬಹುತೇಕರು ಅನಕ್ಷರಸ್ಥರೇ ಇದ್ದೇವೆ. ಈಗ ಇದ್ದಕ್ಕಿದ್ದಂತೆ ನಮ್ಮ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆಯಿರಿ ಎಂದರೆ ಏನು ಮಾಡುವುದು ತಿಳಿಯುತ್ತಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ, ಯಾರಿಗೂ ತೊಂದರೆ ಆಗದಂತೆ ವ್ಯಾಪಾರ ಮಾಡಿಕೊಂಡು ಹೋಗುತ್ತೇವೆ” ಎಂದು ಮನವಿ ಮಾಡಿದರು.

ಪೊಲೀಸರಿಗೆ ಸೂಚನೆ ನೀಡಿರುವೆ: ತಹಶೀಲ್ದಾರ್

“ಅಂಗಡಿಹಳ್ಳಿ ಗ್ರಾಮದಲ್ಲಿ ಪೊಲೀಸರು ಜಾಹೀರಾತು ಫಲಕ ತೆರವು ಮಾಡಿರುವುದು ಗಮನಕ್ಕೆ ಬಂದಿದೆ. ಅವರ ಪಾಡಿಗೆ ವ್ಯಾಪಾರ ಮಾಡಿಕೊಂಡು ಹೋಗಲು ಬಿಡಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ. ಜತೆಗೆ ಅಂಗಡಿಹಳ್ಳಿ ಗ್ರಾಮದ ಬಳಿ ವಾಹನಗಳ ಸಂಚಾರ ವೇಗದ ಮಿತಿ ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದೆ” ಎಂದು ಬೇಲೂರು ತಹಶೀಲ್ದಾರ್ ಮೋಹನ್ ಕುಮಾರ್ ಈ ದಿನ.ಕಾಮ್ ಗೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್