ಎಚ್ ಎನ್ ವ್ಯಾಲಿ ಯೋಜನೆ : ಕೇಂದ್ರ ತಂಡದ ಕಾಟಾಚಾರದ ಭೇಟಿ ; 'ಅಂತರ್ಜಲಕ್ಕೆ ವಿಷ ಹಾಕಬೇಡಿ' ಎಂದ ನೀರಾವರಿ ಹೋರಾಟಗಾರರು

  • ಕೇಂದ್ರ ಸರ್ಕಾರದ 'ಸಂಸತ್ತಿನ ಜಲ ಶಕ್ತಿ ಸಲಹಾ ಸಮಿತಿ'ಯ ಸದಸ್ಯರ ಕಾಟಾಚಾರದ ಭೇಟಿ  
  • ತ್ಯಾಜ್ಯ ನೀರಿನ ಮೂರು ಹಂತದ ಶುದ್ಧೀಕರಣಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಒತ್ತಾಯ 

ಮೂರನೇ ಹಂತದ ನೀರು ಶುದ್ದೀಕರಣದ ಬಳಿಕ ಮಾತ್ರವೇ ಚಿಕ್ಕಬಳ್ಳಾಪುರದ ಕೆರೆಗಳಿಗೆ ನೀರು ಪೂರೈಕೆ ಮಾಡುವಂತಾಗಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಕೇಂದ್ರವನ್ನು ಒತ್ತಾಯಿಸಿದ್ದಾರೆ. 

ಜುಲೈ 1ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಸದಸ್ಯರ ಕೆರೆ ಅಧ್ಯಯನ ಸಮೀಕ್ಷೆಯ ವೇಳೆ ಸಮಿತಿಯನ್ನು ಭೇಟಿಯಾದ ಶಾಶ್ವತ ನಿರಾವರಿ ಸಮಿತಿಯ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಈ ಕುರಿತ ಮನವಿ ಪತ್ರ ಸಲ್ಲಿಸಿದರು. 

ಈ ವೇಳೆ ಈ ದಿನ.ಕಾಮ್ ಜೊತೆ ಮಾತನಾಡಿದ ಆರ್ ಆಂಜನೇಯ ರೆಡ್ಡಿ, "ಸರ್ಕಾರ ಈ ಭಾಗದ ಕೆರೆಗಳನ್ನು ತುಂಬಿಸಿ ಅಂತರ್ಜಲ ಮರುಪೂರಣ ಮಾಡಲು ಹೊರಟಿರುವುದು ಒಳ್ಳೆಯ ವಿಚಾರ. ಆದರೆ, ಈ ಕಾರ್ಯದ ಅನುಷ್ಠಾನ ಮಾತ್ರ ಅವೈಜ್ಞಾನಿಕವಾಗಿದೆ" ಎಂದು ಆತಂಕ ವ್ಯಕ್ತಪಡಿಸಿದರು. "ಹೆಬ್ಬಾಳ ನಾಗವಾರ ವ್ಯಾಲಿ ಯೋಜನೆ ಮೂಲಕ ನಮ್ಮ ಜಿಲ್ಲೆಗೆ ಬೆಂಗಳೂರಿನ ತ್ಯಾಜ್ಯ ಸಂಸ್ಕರಿತ ನೀರನ್ನು ತಂದು ಕೆರೆ ತುಂಬಿಸಲಾಗುತ್ತಿದೆ. ಇದರಿಂದ ಬರದ ನಾಡಿಗೆ ನೀರು ಬಂದಂತಾದರೂ ಅದು ವಿಷಯುಕ್ತವಾಗಿರುತ್ತದೆ. ಹೀಗಾಗಿ ಈಗ ತ್ಯಾಜ್ಯ ಸಂಸ್ಕರಿತ ನೀರನ್ನು ಕೆರೆಗಳಿಗೆ ಮರುಪೂರಣ ಮಾಡುತ್ತಿರುವುದನ್ನು ಮೂರನೇ ಹಂತದ ಪರಿಷ್ಕರಣೆ ಬಳಿಕವಷ್ಟೇ ಮಾಡಬೇಕು" ಎಂದು ಸರ್ಕಾರವನ್ನು ಆಗ್ರಹಿಸಿದರು.

"ಈ ವಿಚಾರದಲ್ಲಿ ನಮ್ಮ ಸಮಿತಿ ಅವಿರತ ಹೋರಾಟ ಮಾಡುತ್ತಲೇ ಬಂದಿದೆ. ಆದರೆ ಆಡಳಿತಾರೂಢ ಸರ್ಕಾರ ಈ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿ" ಎಂದು ಆರ್ ಆಂಜನೇಯರೆಡ್ಡಿ ಹೇಳಿದರು.

ಹೆಬ್ಬಾಳ ನಾಗವಾರ (ಎಚ್ ಎನ್ ವ್ಯಾಲಿ) ಯೋಜನೆ

ವಾಸ್ತವದಲ್ಲಿ ಚಿಕ್ಕಬಳ್ಳಾಪುರಕ್ಕೆ ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಸದಸ್ಯರನ್ನು ಬರುವಂತೆ ಮಾಡಿದ್ದು ಎಚ್‌ ಎನ್‌ ವ್ಯಾಲಿ ಯೋಜನೆ. ದೇಶದಲ್ಲೇ ಮೊದಲ ಬಾರಿಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಅಂತರ್ಜಲವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶ. ರಾಜ್ಯ ನೀರಾವರಿ ಇಲಾಖೆ ಮಾಹಿತಿ ಪ್ರಕಾರ, ಈ ಯೋಜನೆ ಮೂಲಕ ಬರದ ನಾಡಾಗಿ ಪರಿವರ್ತನೆಗೊಂಡಿದ್ದ ಚಿಕ್ಕಬಳ್ಳಾಪುರ ಭಾಗದಲ್ಲಿ ಅಂತರ್ಜಲ ಮರುಪೂರಣ ಕಾರ್ಯವನ್ನು ನಡೆಸಲಾಗುತ್ತಿದೆ.

ಎಚ್ ಎನ್ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನಲ್ಲಿ ಬಳಕೆಗೆ ಒಳಪಟ್ಟ ನೀರನ್ನು ಪರಿಷ್ಕರಿಸಿ, ಸಂಸ್ಕರಿಸಿ 142.85 ಎಂ ಎಲ್‌ ಡಿ ಪ್ರಮಾಣದ ನೀರನ್ನು ಕಾಲುವೆ ಮೂಲಕ ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಲಾಗುತ್ತಿದೆ. ಒಟ್ಟಾರೆ 30.72 ಕಿಲೋ ಮೀಟರ್‌ ದೂರದ ಈ ಮಾರ್ಗದಲ್ಲಿ ಕಳೆದೊಂದು ವರ್ಷದಿಂದ ಸತತವಾಗಿ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯಿಂದಾಗಿ ಬರಡಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಜಲಮೂಲಗಳು ಮರು ಭರ್ತಿಯಾಗುತ್ತಿವೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಚಿಕ್ಕಬಳ್ಳಾಪುರದ ಕೆಲವು ಕಡೆ ಒಂದೂವರೆ ಸಾವಿರ ಅಡಿಗಳಿಗೂ ಕೆಳಗಿಳಿದಿದ್ದ ಅಂತರ್ಜಲ ಮಟ್ಟ ಈಗ 500 ರಿಂದ 800 ಮೀಟರ್‌ಗಳವರೆಗೆ ಬಂದು ತಲುಪಿದೆ ಎನ್ನಲಾಗುತ್ತಿದೆ.  ಅಟಲ್‌ ಭೂ ಜಲ ಯೋಜನೆ ಮತ್ತು ಸ್ಥಳೀಯರ ಸಹಯೋಗದಿಂದ ಇದು ಸಾಕಾರವಾಗಿದೆ ಎಂದು ನೀರಾವರಿ ಇಲಾಖೆ ಹೇಳುತ್ತಿದೆ.

ಬಂದ ಪುಟ್ಟ ಹೋದ ಪುಟ್ಟ ಎಂಬಂತಾದ ಭೇಟಿ!

ಅಸಲಿಗೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಅವರ ಮಾರ್ಗದಶನದಲ್ಲಿ ಈ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಂಸತ್ ಸದಸ್ಯರ ಜಲಶಕ್ತಿ ಸಲಹಾ ಸಮಿತಿ ಚಿಕ್ಕಬಳ್ಳಾಪುರಕ್ಕೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಚಿವರು ಈ ಅಧ್ಯಯನ ಪ್ರವಾಸಕ್ಕೆ ಬರಲಾಗದ ಹಿನ್ನೆಲೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಸಂಸತ್ ಸದಸ್ಯರು ಮತ್ತು ಅಧಿಕಾರಿಗಳನ್ನೊಳಗೊಂಡ ಸಮಿತಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿತ್ತು. ಆದರೆ, ಅವರು ಬರುವ ಮುಂಚೆ ಅವರು ಎಲ್ಲಿಗೆ ಭೇಟಿ ಕೊಡುತ್ತಾರೆ, ಯಾರನ್ನು ಭೇಟಿಯಾಗುತ್ತಾರೆ ಎಂಬಿತ್ಯಾದಿ ಕಾರ್ಯಕ್ರಮಗಳ ಪಟ್ಟಿಯೇ ಸಿದ್ಧವಾಗಿರಲಿಲ್ಲ.            

ವಿಪರ್ಯಾಸವೆಂದರೆ, ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಚಿಕ್ಕಬಳ್ಳಾಪುರ ಭೇಟಿ ಕಾಟಾಚಾರದ್ದಾಗಿತ್ತು. ಮೈಸೂರು ಪ್ರವಾಸ ಮಾಡಿಕೊಂಡು ಶುಕ್ರವಾರ ಸಂಜೆಯೇ ದೆಹಲಿಗೆ ತೆರಳಬೇಕಿದ್ದ ಸಮಿತಿ ಸದಸ್ಯರು, ಧಾವಂತದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದೇ ಸಂಜೆ ಮೂರಕ್ಕೆ. ವಾರದಿಂದ ಈ ಅಧ್ಯಯನ ಪ್ರವಾಸಕ್ಕೆ ತಾಲೀಮು ನಡೆಸಿ ಶುಕ್ರವಾರ ಮಧ್ಯಾಹ್ನದಿಂದ ಕಾಯುತ್ತಿದ್ದ ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸಮಿತಿ ಸದಸ್ಯರ ಲಗುಬಗೆಯ ಅಧ್ಯಯನಕ್ಕೆ ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿ ಜೊತೆಯಾದರು.

ಆಗೊಮ್ಮೆ ಈಗೊಮ್ಮೆ ಎಂದು ಕಾಡಿದ ಮಳೆರಾಯನ ಕೀಟಲೆ ನಡುವೆಯೂ ಸಲಹಾ ಸಮಿತಿ ಸದಸ್ಯರಿಗೆ ತಾವು ಸಿದ್ದಪಡಿಸಿದ್ದ ವಿಚಾರಗಳನ್ನು ಒದಗಿಸಿಕೊಟ್ಟರು. ಆದರೆ, ದೆಹಲಿಗೆ ವಾಪಸ್ಸಾಗುವ ಧಾವಂತದಲ್ಲಿದ್ದ ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಸದಸ್ಯರು ಎಲ್ಲದಕ್ಕೂ ತಲೆಯಾಡಿಸಿ ಆತುರಾತುರವಾಗಿ ತಮ್ಮ ಭೇಟಿ ಕಾರ್ಯವನ್ನು ಮುಗಿಸಿದರು.     

ಮೊದಲಿಗೆ ಚಿಕ್ಕಮುದ್ದೇನಹಳ್ಳಿಯಲ್ಲಿ ಕೆರೆ ಪೂರಣವಾಗುತ್ತಿದ್ದ ತೂಬಿನ ಬಳಿ ಬಂದ ಸದಸ್ಯರು, ನೀರು ಪರಿಷ್ಕರಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಕುಂದವಾರ ಕೆರೆ ಬಳಿ ತೆರಳಿ ಅಲ್ಲಿ ಅಧಿಕಾರಿಗಳು ನೀಡಿದ ಪ್ರಾತ್ಯಕ್ಷತೆಯ ವಿಡಿಯೋ ಸಂವಾದ ನಡೆಸಿದ ಬಳಿಕ, ಸ್ಥಳದಲ್ಲೇ ಇದ್ದ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಕಾರ್ಯ ಯೋಜನೆ ಮನವರಿಕೆ ಮಾಡಿಕೊಂಡರು. ನಂತರ ಯೋಜನೆ ಬಗ್ಗೆ ಕೆಲ ಮೆಚ್ಚುಗೆ ಮಾತುಗಳನ್ನಾಡಿ ಅಮಾನಿ ಕೆರೆಯತ್ತ ತೆರಳಿದರು. ಅಂದಹಾಗೆ ಸಮಿತಿಯ ಎರಡನೇ ಸ್ಥಳ ಪರಿಶೀಲನಾ ಭೇಟಿ ನಡೆದದ್ದು ಕೇವಲ 15 ನಿಮಿಷ ಮಾತ್ರ. 

ನಂತರ ಅಲ್ಲಿಂದ ತಂಡ ತೆರಳಿದ್ದು ಪಟ್ರೇನಹಳ್ಳಿ ಬಳಿಯ ಅಮಾನಿ ಕೆರೆಯತ್ತ. ಈ ವೇಳೆ ಮಳೆ ಸುರಿದ ಕಾರಣ ಕೊಂಚ ವೇಗವಾಗಿಯೇ ಕೆರೆ ಪ್ರದಕ್ಷಿಣಿ ನಡೆಸಿದ ತಂಡ ಬಳಿಕ ಪಟ್ರೇನಹಳ್ಳಿ ಗ್ರಾಮಸ್ಥರೊಂದಿಗೆ ಸಂವಾದ ಕಾರ್ಯವನ್ನೂ ನಡೆಸಿತು.

ಮಳೆ ಬರುತ್ತಿದ್ದ ಕಾರಣ ಕೆಲವೇ ನಿಮಿಷಗಳಿಗೆ ಸೀಮಿತವಾದ ಈ ಸಮಾರಂಭದಲ್ಲಿ ಅಟಲ್‌ ಭೂ ಜಲ ಯೋಜನೆಯಲ್ಲಿ ಭಾಗಿಯಾಗಿದ್ದ ಜಲಸೈನಿಕರು ಜಲ ಸಲಹಾ ಸಮಿತಿ ಸದಸ್ಯರಿಗೆ ತಮ್ಮ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಸಮಿತಿ ಸದಸ್ಯರು, "ನಿಮ್ಮ ಯೋಜನಾ ಕಾರ್ಯದ ಬಗ್ಗೆ ಹೆಮ್ಮೆಯೆನಿಸಿದ್ದು, ನಮ್ಮೂರಿನಲ್ಲೂ ಇದರ ಅಳವಡಿಕೆ ಮಾಡಿಕೊಳ್ಳುತ್ತೇವೆ" ಎಂಬ ಭರವಸೆ ಮಾತನ್ನಾಡಿ ದೆಹಲಿಗೆ ಹೊರಟು ನಿಂತರು. ಒಟ್ಟಾರೆ ಆರು ಗಂಟೆಗಳ ಕಾಲ ನಡೆಯಬೇಕಿದ್ದ ಅಧ್ಯಯನ ಪ್ರವಾಸ ಕೇವಲ ಎರಡೂವರೆ ಗಂಟೆಯಲ್ಲೇ ಮುಕ್ತಾಯ ಕಂಡಿತು. ಅವರು ಬಂದುಹೋಗಿದ್ದು ಪೂರ್ವಸಿದ್ದತೆಯೇ ಇಲ್ಲದ ಕಾಟಾಚಾರದ ಭೇಟಿ ಎನ್ನುವಂತಿತ್ತು.  

ಕೇಂದ್ರದ ತಂಡಕ್ಕೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮನವಿ

ಇವೆಲ್ಲದರ ನಡುವೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಸದಸ್ಯರಿಗೆ ಕಾರ್ಯಕ್ರಮ ಮುಕ್ತಾಯದ ವೇಳೆ ತಮ್ಮ ಮನವಿಯನ್ನು ಸಲ್ಲಿಸಿದರು. ರಾಜ್ಯ ಸರ್ಕಾರ ತಂದಿರುವ ಜಲ ಮರುಪೂರಣ ಯೋಜನೆ ಉತ್ತಮವಾಗಿದೆ. ಆದರೆ, ಅದರ ಅನುಷ್ಠಾನ ಅವೈಜ್ಞಾನಿಕವಾಗಿ ಆಗುತ್ತಿದೆ ಎಂದು ಸಮಿತಿ ಸದಸ್ಯರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ವಿವರಿಸಿ ಹೇಳಿದರು.  

ಯೋಜನೆ ಭಾಗವಾಗಿ ಈಗ ಎರಡು ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಇದರಿಂದಾಗಿ ಕೆರೆಗೆ ಕೊಳಚೆಯಲ್ಲಿರುವ ವಿಷದ ಅಂಶವೂ ಸೇರುತ್ತಿದೆ. ಅಂತರ್ಜಲ ಮರುಪೂರಣದ ವೇಳೆ ಕೆರೆಯೊಳಗೆ ಕೊರೆದಿರುವ ಕೊಳವೆ ಬಾವಿ ಮೂಲಕ ಭೂಮಿಯೊಳಗೆ ಈ ವಿಷವೂ ಸೇರಿಕೊಳ್ಳುತ್ತದೆ. ಇದು ಅಂತರ್ಜಲದ ಜೊತೆ ಭೂಮಿಯನ್ನೂ ಹಾಳು ಮಾಡುತ್ತದೆ. ಪರೋಕ್ಷವಾಗಿ ಭೂಮಿಯೊಡಲಿಗೆ ವಿಷ ತುಂಬಿದಂತಾಗುತ್ತಿದೆ. ಇದಕ್ಕಾಗಿ ಇಲ್ಲಿ ಮೂರು ಹಂತದ ಪರಿಷ್ಕರಣೆ ನಡೆಸಿಯೇ ನೀರು ಪೂರೈಕೆ ಮಾಡಿಸಿ ಎಂದು ಆರ್ ಆಂಜನೇಯ ರೆಡ್ಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಲಶಕ್ತಿ ಸಲಹಾ ಸಮಿತಿ ಸದಸ್ಯರು ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.   

ಒಟ್ಟಿನಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ಅನುಪಸ್ಥಿತಿಯಲ್ಲಿ ಬಂದು ಹೋದ ಸಂಸತ್ತಿನ ಜಲಶಕ್ತಿ ಸಲಹಾ ಸಮಿತಿಯ ಸದಸ್ಯರು, ಈ ಯೋಜನೆ ವಿಚಾರದಲ್ಲಿ ಅದೆಷ್ಟು ಪ್ರಾಯೋಗಿಕ ಸತ್ಯ ಕಂಡುಕೊಂಡರೆನ್ನುವುದು ಮಾತ್ರ ಈಗ ಒಂದು ಒಗಟಾಗಿದೆ.  

ನಿಮಗೆ ಏನು ಅನ್ನಿಸ್ತು?
2 ವೋಟ್