
- ಮೇಲ್ವರ್ಗದ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡುವುದು ಕಾಂಗ್ರೆಸ್ ಸಂಪ್ರದಾಯ
- ಕಾಂಗ್ರೆಸ್ ಮೇಲ್ವರ್ಗದ ವಿರೋಧಿಯಾಗಿದ್ದು, ಸಿದ್ದರಾಮಯ್ಯ ಉತ್ತರಿಸಲಿ : ಸವಾಲು
“ಇತಿಹಾಸವನ್ನು ಅಧ್ಯಯನ ಮಾಡಿದ್ದೇನೆ. ಏನೇ ಮಾತಾಡಿದರೂ ವಿಚಾರ ಮಾಡಿ ಮಾತಾಡುತ್ತೇನೆ. ಆದರೆ, ಸಿದ್ದರಾಮಯ್ಯನಷ್ಟು ಬುದ್ಧಿವಂತನಲ್ಲ, ಅದನ್ನು ನಾನು ಒಪ್ಪಿಕೊಳ್ಳುವೆ” ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿ, “ನಾನು ದಡ್ಡ, ಮೂರ್ಖನೇ ಇರಬಹುದು. ಭ್ರಷ್ಟಾಚಾರಕ್ಕೂ ಜಾತಿಗೂ ಸಂಬಂಧ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಯಾರು ಮೇಲ್ವರ್ಗದ ಸಿಎಂ ಇರುತ್ತಾರೋ ಅವರನ್ನು ನೇರವಾಗಿ ಟಾರ್ಗೆಟ್ ಮಾಡುವುದು ಕಾಂಗ್ರೆಸ್ ಸಂಪ್ರದಾಯ ಎಂದು ಹೇಳಿದ್ದೇನೆ” ಎಂದು ಕುಟುಕಿದರು.
“ಕಾಂಗ್ರೆಸ್ ಮೇಲ್ವರ್ಗದ ವಿರೋಧಿ. ಇದಕ್ಕೆ ಅವರು ಉತ್ತರ ಕೊಡಲಿ. ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ ಡಿ.ಕೆ. ಶಿವಕುಮಾರ್ ಹೇಳಲಿ. ಒಂದೂವರೆ ವರ್ಷದಲ್ಲಿ ಬೊಮ್ಮಾಯಿ ಏನು ಭ್ರಷ್ಟಾಚಾರ ಮಾಡಿದ್ದಾರೆ? ಸಮರ್ಥವಾಗಿ ಆಡಳಿತ ಕೊಡುತ್ತಿದ್ದಾರೆ, ಹಾಗಾಗಿ ಇವರ ನಾಯಕತ್ವದಲ್ಲಿ ಹೋದರೆ ಉಳಿಗಾಲ ಇಲ್ಲ ಎಂದು ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಆದರೆ ಜನರು ಮೂರ್ಖರಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭ್ರಷ್ಟಾಚಾರಕ್ಕೆ ಸಮಾಜ ಎನ್ನುವುದು ಇದೆಯೇ?: ಮಹಮದ್ ನಲಪಾಡ್
“ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಅವಕಾಶ ಕೊಡದೇ ಅವರನ್ನು ಬಿಜೆಪಿ ತುಳಿಯುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, “ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಏನೇನು ಸ್ಥಾನಮಾನ ಕೊಡಬೇಕೋ ಬಿಜೆಪಿ ಕೊಟ್ಟಿದೆ. ಈಗಾಗಲೇ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎರಡನೇ ಹಂತದ ನಾಯಕರನ್ನು ಬೆಳೆಸಬೇಕು ಅಂತಾ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಜಾತಿ ನೋಡಿ ಮಣೆ ಹಾಕಲ್ಲ. ಜಾತಿಯನ್ನು ಟಾರ್ಗೆಟ್ ಕೂಡಾ ಮಾಡಲ್ಲ” ಎಂದರು.