ಅನ್ನ ಕಸಿದ ಅತಿವೃಷ್ಟಿ-1 | ಸಾವಿರಾರು ಎಕರೆಯಲ್ಲಿನ ಬೆಳೆ ನೀರು ಪಾಲು; ರೈತರ ಕೈ ಹಿಡಿಯುತ್ತಾ ಬೊಮ್ಮಾಯಿ ಸರ್ಕಾರ?

ರಾಜ್ಯದೆಲ್ಲೆಡೆ ತನ್ನ ಆರ್ಭಟ ಮುಂದುವರಿಸಿರುವ ಮಳೆಯಿಂದ ಕೃಷಿ, ತೋಟಗಾರಿಕಾ ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಹಲವು ಜನ ಜಾನುವಾರುಗಳು ಕೂಡ ಅಸು ನೀಗಿದ್ದು, ಸಂತ್ರಸ್ತ ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಹಾಸನ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿರುವ ಮಳೆ ಹಾನಿ ಕುರಿತು ಅಲ್ಲಿನ ಕೃಷಿ ಇಲಾಖೆ ನೀಡಿರುವ ಮಾಹಿತಿ ಆಧರಿಸಿದ ವರದಿ ಇಲ್ಲಿದೆ.
Krishi

ಇಡೀ ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಕಷ್ಟಪಟ್ಟು ಬೆಳೆದ ಫಸಲು ಕೈತಪ್ಪಿದ ಹಿನ್ನೆಲೆಯಲ್ಲಿ ಅನ್ನದಾತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾನೆ. 

ಮಳೆಯಿಂದ ಬೆಳೆಹಾನಿ ಜೊತೆಗೆ, ಜನ ಜಾನುವಾರುಗಳ ಜೀವ ಹಾನಿಯೂ ಸಂಭವಿಸಿದೆ. ಸಾಲ ಮಾಡಿ ಬೆಳೆ ಮಾಡಿದ ರೈತ ಬೆಳೆ ನಷ್ಟವಾಗಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ನಷ್ಟ ಪರಿಹಾರ ಕೊಡಬೇಕು ಎನ್ನುವುದು ರೈತರ ಆಗ್ರಹವಾಗಿದೆ. 

ಹಾಸನ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಅಂದಾಜು ₹109 ಕೋಟಿ ನಷ್ಟ! 

ಹಾಸನ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಆಗಸ್ಟ್‌ ತನಕ ಸತತ ಐದು ತಿಂಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಅಂದಾಜು ₹109 ಕೋಟಿಗೂ ಅಧಿಕ ಪ್ರಮಾಣದ ಹಾನಿ ಸಂಭವಿಸಿದ್ದು, ಇಂದಿಗೂ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತಷ್ಟು ಬೆಳೆಹಾನಿ ಮಾಡುವ ಆತಂಕ ಸೃಷ್ಟಿಸಿದೆ.

ಜಿಲ್ಲೆಯಲ್ಲಿ ಆಗಿರುವ ಬೆಳೆಹಾನಿ ಬಗ್ಗೆ ಕೃಷಿ ಜಂಟಿ ನಿರ್ದೇಶಕ ರವಿ ಅವರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ. "ಮೇ ತಿಂಗಳಿನಲ್ಲಿ 533 ಹೆಕ್ಟೇರ್‌, ಜುಲೈ ಮತ್ತು ಆಗಸ್ಟ್‌ 16ರ ತನಕ 3,388 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಆಗಸ್ಟ್‌ 26 ರಿಂದ ಸೆ.1 ರವರೆಗೂ ಆದ ಮಳೆಯಿಂದ 1,339 ಬೆಳೆ ಹಾನಿಗೊಳಗಾಗಿದೆ. ಆದರೆ, ಒಟ್ಟಾರೆಯಾಗಿ ಈ ವರ್ಷ ಮಳೆಯ ಆರ್ಭಟಕ್ಕೆ ಸಿಲುಕಿ 5260.51 ಹೆಕ್ಟೇರ್‌ ಬೆಳೆ ನಷ್ಟ (ಮೇ-ಸೆ.1) ಸಂಭವಿಸಿದೆ" ಎಂದರು. 

"ಮೇ. ತಿಂಗಳಿನಿಂದ ಆ.16ವರೆಗೆ 212 ಎಕರೆ ಭತ್ತ, ರಾಗಿ 67 ಎಕರೆ, 26 ಎಕರೆ ಹೆಸರು ಕಾಳು, 0.8 ಎಕರೆ ಉದ್ದು, 2,833 ಎಕರೆ ಮುಸುಕಿನ ಜೋಳ, 13 ಎಕರೆ ಎಳ್ಳು, 86 ಎಕರೆ ಸೂರ್ಯಕಾಂತಿ ಬೆಳೆ, ಭತ್ತ 22 ಎಕರೆ, ಅಲಸಂದೆ 243 ಎಕರೆ, ಹತ್ತಿ 22 ಎಕರೆ, ಕಬ್ಬು 3 ಎಕರೆ, ತಂಬಾಕು 378 ಎಕರೆ ಹಾಗೂ 46 ಎಕರೆ ನೆಲಗಡಲೆ ಸೇರಿದಂತೆ ಒಟ್ಟು 3,921 ಹೆಕ್ಟೆರ್‌ ಬೆಳೆ ಹಾನಿಯಾಗಿದೆ" ಎಂದು ಅವರು ತಿಳಿಸಿದರು.

"ಆ.26 ರಿಂದ ಸೆ.1 ರ ತನಕ ಭತ್ತ 100 ಎಕರೆ, ರಾಗಿ 22 ಎಕರೆ, ಮುಸುಕಿನ ಜೋಳ 849 ಎಕರೆ, ಕಬ್ಬು 6 ಎಕರೆ, ಹತ್ತಿ 55 ಎಕರೆ, ಸೂರ್ಯಕಾಂತಿ 276 ಎಕರೆ ಹಾಗೂ ಅಲಸಂದೆ 31 ಎಕರೆ ಸೇರಿದಂತೆ ಒಟ್ಟು 1,339 ಹೆಕ್ಟೇರ್‌ ಬೆಳೆ ಹಾನಿಯಾಗಿದೆ" ಎಂದು ಹಾಸನ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕರು ವಿವರಿಸಿದರು.

ಹಾಸನ ಜಿಲ್ಲೆಯಾದ್ಯಂತ ಇದುವರೆಗೂ 10 ಮಂದಿ ಸಾವಿಗೀಡಾಗಿದ್ದು, ಮೂವರಿಗೆ ಗಾಯಗಳಾಗಿವೆ. 40 ಜಾನುವಾರುಗಳು ಮೃತಪಟ್ಟಿವೆ. 91 ದನಕರು ಕಟ್ಟುವ ಕೊಟ್ಟಿಗೆಗಳು ಸೇರಿದಂತೆ ಮಳೆಹಾನಿಗೆ 2,140 ಮನೆಗಳು ಭಾಗಶಃ ಹಾನಿಯಾಗಿದ್ದು, 123 ಮನೆಗಳು ಸಂಪೂರ್ಣ ನೆಲಸಮವಾಗಿವೆ. ಹಾಸನ, ಚನ್ನರಾಯಪಟ್ಟಣ, ಅರಕಲಗೂಡು, ಸಕಲೇಶಪುರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳು ಮಳೆಯಿಂದ ತತ್ತರಿಸಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕೃಷಿ ಬೆಳೆ ಹಾನಿ 

Image

ಈ ಬಗ್ಗೆ ಚಿತ್ರದುರ್ಗ ಜಿಲ್ಲೆ ಕೃಷಿ ಇಲಾಖೆ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದು, "ಮುಂಗಾರು, ಹಿಂಗಾರು ಹಾಗೂ ಬೇಸಿಗೆಯ ಕೃಷಿ ಬೆಳೆಯ ಒಟ್ಟು ವಿಸ್ತೀರ್ಣ 3,87,810 ಹೆಕ್ಟೇರ್‌ ಆಗಿದೆ. ಮೇಯಿಂದ ಆಗಸ್ಟ್‌ 30ರ ತನಕ ಸುರಿದ ಮಳೆಯಿಂದ 37,531.38 ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು, 3,227 ಹೆಕ್ಟೇರ್‌ ಹೆಸರು ಕಾಳು, 855.16 ಹೆಕ್ಟೇರ್‌ನಲ್ಲಿ ನೆಲಗಡಲೆ, 430.80 ಹೆಕ್ಟೇರ್‌ ಪ್ರದೇಶದ ಸೂರ್ಯಕಾಂತಿ ಬೆಳೆ ಹಾಗೂ 1,294.93 ಹೆಕ್ಟೇರ್‌ ಪ್ರದೇಶದ ಹತ್ತಿ ಬೆಳೆ ಮಳೆಯಿಂದ ನಾಶವಾಗಿದೆ. ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲೂಕುಗಳಿಂದ ಒಟ್ಟಾರೆಯಾಗಿ 43,339.27 ಹೆಕ್ಟೇರ್‌ ಕೃಷಿ ಭೂಮಿ ಮಳೆಹಾನಿಗೆ ಒಳಗಾಗಿದೆ" ಎಂದಿದ್ದಾರೆ. 

ಈ ಸುದ್ದಿ ಓದಿದ್ದೀರಾ? ರೈತರ ಆತ್ಮಹತ್ಯೆಯಲ್ಲಿ ಇಳಿಮುಖ; ಕೃಷಿ ಕಾರ್ಮಿಕರ ಆತ್ಮಹತ್ಯೆಯಲ್ಲಿ ಹೆಚ್ಚಳ: ಎನ್‌ಸಿಆರ್‌ಬಿ ಲೆಕ್ಕಾಚಾರದಲ್ಲಿದೆಯಾ ಕೇಂದ್ರದ 'ಕರಾಮತ್ತು'?

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಬೆಳೆಹಾನಿ 

ಈ ಎರಡು ಜಿಲ್ಲೆಗಳಲ್ಲಿ ಜೂನ್ 1 ರಿಂದ ಆಗಸ್ಟ್ 28 ರವರೆಗೆ ಸುರಿದ ಮಳೆಯಿಂದ 1,004 ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆಗಳು ನಾಶವಾಗಿವೆ.

ಕೋಲಾರದಲ್ಲಿ ವಾಡಿಕೆಯಾಗಿ 87 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಈ ಬಾರಿ 229 ಮಿ.ಮೀ ಮಳೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ವಾಡಿಕೆ 100 ಮಿ.ಮೀ ಮಳೆಯಾಗುತ್ತಿತ್ತು, ಈ ಬಾರಿ ಇದುವರೆಗೆ 192 ಮಿ.ಮೀ ಮಳೆಯಾಗಿದೆ. ಕೋಲಾರ ಜಿಲ್ಲೆ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಈ ದಿನ.ಕಾಮ್‌ ನೀಡಿದ ಮಾಹಿತಿ ಪ್ರಕಾರ, ಆಗಸ್ಟ್‌ ತಿಂಗಳಲ್ಲಿ ಮಳೆಯಿಂದಾಗಿ ರಾಗಿ ಬೆಳೆ ಹಾನಿಗೊಳಗಾಗಿದ್ದರಿಂದ ಪರಿಹಾರ ಒದಗಿಸಲಾಗಿದೆ.

ಜಿಲ್ಲಾಧಿಕಾರಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಆ.16ರಿಂದ ಸೆ.1 ವರೆಗೆ ಮತ್ತು ಆಗಸ್ಟ್‌ 28 ರಿಂದ ಸೆ.5 ವರೆಗೆ ಜಿಲ್ಲೆಯಲ್ಲಿ ಬೆಳೆಹಾನಿ ಆಗಿರುವ ವರದಿ ಹೀಗಿದೆ.

"ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್‌, ಮುಳುಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿವೆ. 176.0 ಹೆಕ್ಟೇರ್‌ ಟೊಮ್ಯಾಟೋ, 3.8 ಹೆಕ್ಟೇರ್‌ನಲ್ಲಿನ ಮೆಣಸಿನಕಾಯಿ, 6.0 ಹೆಕ್ಟೇರ್‌ನಲ್ಲಿ ಬೀಟ್ರೋಟ್‌, 7 ಹೆಕ್ಟೇರ್‌ ಪ್ರದೇಶದಲ್ಲಿ ದಪ್ಪ ಮೆಣಸಿನಕಾಯಿ, 17 ಹೆಕ್ಟೇರ್‌ನಲ್ಲಿ ಹೂ ಕೋಸು, 18 ಹೆಕ್ಟೇರ್‌ ಪ್ರದೇಶದಲ್ಲಿ ಎಲೆ ಕೋಸು, 44.58 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಹೂವು ಸೇರಿದಂತೆ 71.3 ಹೆಕ್ಟೇರ್‌ ಪ್ರದೇಶದ ಇತರೆ ತರಕಾರಿ ಬೆಳೆಗಳು ಸೇರಿ ಒಟ್ಟಾರೆಯಾಗಿ 343.68 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳ ಪ್ರದೇಶ ಹಾನಿಯಾಗಿದೆ. ಇದುವರೆಗೂ, 218.77 ಹೆಕ್ಟೇರ್‌ ಪ್ರದೇಶ ಪರಿಹಾರ ನೋಂದಣಿ ಪೋರ್ಟಲ್‌ನಲ್ಲಿ ಅಪ್‌ಡೆಟ್‌ ಆಗಿದ್ದು, ಉಳಿದದ್ದು, ಪ್ರಗತಿಯಲ್ಲಿದೆ" ಎಂದು ಜಿಲ್ಲಾಧಿಕಾರಿ ವೆಂಕಟರಾಜ ಈ ದಿನ.ಕಾಮ್‌ಗೆ ತಿಳಿಸಿದರು.

ಅದೇರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಮಾಹಿತಿ ಪ್ರಕಾರ 250 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ₹ 5.76 ಕೋಟಿಯಷ್ಟು ಬೆಳೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 22 ಜಾನುವಾರುಗಳು ಮೃತಪಟ್ಟಿದ್ದು ಇವುಗಳಲ್ಲಿ 6 ದೊಡ್ಡ ರಾಸುಗಳಾದರೆ 16 ಕರುಗಳಿವೆ. ಜಿಲ್ಲೆಯಲ್ಲಿನ ಮಳೆಹಾನಿಗೆ ಪರಿಹಾರ ಕಲ್ಪಿಸಲು ಸರ್ಕಾರ ₹ 3.8 ಕೋಟಿಯನ್ನು ಬಿಡುಗಡೆ ಮಾಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್