ರಾಜ್ಯಾದ್ಯಂತ ಬುಧವಾರವೂ ಸುರಿದ ಭಾರಿ ಮಳೆ ; ಇಬ್ಬರು ಸಾವು

Rain
  • ಸಿಡಿಲು ಬಡಿದು ಮಹಿಳೆ ಮತ್ತು ಎಮ್ಮೆ ಸಾವು
  • ನಾನಾ ಜಿಲ್ಲೆಗಳಲ್ಲಿ ಭಾಗಶಃ ಬೆಳೆ ನಾಶ

ರಾಜ್ಯಾದ್ಯಂತ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸಾವು, ಅತಿವೃಷ್ಠಿ ಸಂಭಿವಿಸಿದೆ. ಬುಧವಾರ ಸುರಿದ ಮಳೆಯಿಂದಾಗಿ ಬಿಜಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. 

ಬಿಜಾಪುರ ಜಿಲ್ಲೆಯ ಹುಣಿಸ್ಯಾಳ ಗ್ರಾಮದಲ್ಲಿ ಮಹಿಳೆಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಜೊತೆಗೆ ಒಂದು ಎಮ್ಮೆ ಸಹ ಸಾವನ್ನಪ್ಪಿದೆ.

ಗ್ರಾಮದ ಜೈನಾಬಿ ನಜೀರ್ ಅಹ್ಮ,ದ್ ಸಿಪಾಯಿ (55) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಮಳೆ ಬಂದ ಕಾರಣ, ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಸಿಡಿಲು ಬಡಿದಿದೆ.

ತುಮಕೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುರುವೇಕೆರೆ ತಾಲೂಕಿನ ಕೊಂಡಜ್ಜಿ-ಸೊಪ್ಪಿನಳ್ಳಿ ಗ್ರಾಮಗಳ ಮಧ್ಯದಲ್ಲಿರುವ ಸೇತುವೆ ತುಂಬಿ ಹರಿಯುತ್ತಿದ್ದು, ಅದರ ಮೇಲೆ ಸಾಗುತ್ತಿದ್ದ ಮಾರುತಿ ವ್ಯಾನ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಬುಧವಾರ ರಾತ್ರಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ತಿಪಟೂರು ತಾಲೂಕಿನ ಗಡಬನಹಳ್ಳಿ ಪುಟ್ಟಸಿದ್ಧಯ್ಯ (65) ಪಾರಾಗಿದ್ದಾರೆ. ಪಟೇಲ್ ಕುಮಾರಸ್ವಾಮಿ (68) ಎಂಬವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದೆ. 

ಕುಸಿದು ಬಿದ್ದ ಮನೆಗಳು 

ಭಾರಿ ಮಳೆಯಿಂದಾಗಿ ನಾನಾ ಜಿಲ್ಲೆಗಳಲ್ಲಿ ಮನೆಗಳು ಬಿದ್ದು ಅಪಾರ ಪ್ರಮಾಣ ನಷ್ಟ ಸಂಭವಿಸಿದೆ. ವಿಜಯಪುರ ಜಿಲ್ಲೆಯೊಂದರಲ್ಲಿಯೇ 15 ಮನೆಗಳಿಗೆ ಹಾನಿಯಾಗಿದೆ.

ಇಂಡಿ ತಾಲೂಕಿನ ಬಳ್ಳೊಳ್ಳಿಯಲ್ಲಿ ಮೂರು ಮನೆಗಳು, ವಿಜಯಪುರ ತಾಲೂಕಿನಲ್ಲಿ ಐದು, ತಾಳಿಕೋಟೆ ತಾಲೂಕಿನಲ್ಲಿ ಎರಡು, ಸಿಂದಗಿ, ತಿಕೋಟಾ ಮತ್ತು ನಿಡಗುಂದಿ ತಾಲೂಕಿನಲ್ಲಿ ತಲಾ ಒಂದು ಮನೆಗಳು ಭಾಗಶಃ ಬಿದ್ದು ಹಾನಿಯಾಗಿವೆ.

ವಿಜಯನಗರ ಜಿಲ್ಲೆಯಲ್ಲಿ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ. ಭೀಮ್ಲಾ ತಾಂಡಾದಲ್ಲಿ ಮನೆಗೋಡೆ ಕುಸಿದು ಆರು ವರ್ಷದ ಬಾಲಕನಿಗೆ ಗಾಯವಾಗಿದೆ.

ಸೋಮವಾರ ಮಧ್ಯರಾತ್ರಿಯಿಂದಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ವಸ್ತುಗಳು ನೀರಿನ ಪಾಲಾಗಿವೆ. ಹೊನ್ನಳ್ಳಿ ತಾಲೂಕಿನಲ್ಲಿ 118, ಚೆನ್ನಗಿರಿ ತಾಲೂಕಿನಲ್ಲಿ 130 ಹಾಗೂ ನ್ಯಾಮತಿ ತಾಲೂಕಿನಲ್ಲಿ 45 ಮನೆಗಳಿಗೆ ನೀರು ನುಗ್ಗಿ ದಿನಬಳಕೆ ವಸ್ತುಗಳು ನಿರಿನಲ್ಲಿ ತೋಯ್ದುಹೋಗಿವೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕನ ಸಂಪಾಜೆ ಬಳಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ಸುಮಾರು ಐದು ಮನೆಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಸಿತ್ತು. ಚೆಂಬು ಗ್ರಾಮದ ಬಾಲಂಬಿ ಸೇತುವೆ ಪಕ್ಕದ 2 ಮನೆಗಳಿಗೆ ನೀರು ನುಗ್ಗಿ, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ.

ಈ ಸುದ್ದಿ ಓದಿದ್ದೀರಾ?; ಆರ್ಥಿಕತೆ ಕುಸಿತದಿಂದ ಉದ್ಯೋಗದ ಕೊರತೆ | ರಘುರಾಮ್‌ ರಾಜನ್‌ ಕಳವಳ

ಹಾಸನ ಜಿಲ್ಲೆಯಲ್ಲಿ ಸಹ ಭಾರಿ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧವಾದ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿರುವ ಕೋಟೆ ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಕುಸಿದಿದೆ.‌ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಭೇಟಿ ನೀಡಿದ್ದು, ದುರಸ್ಥಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ. 

ಮಳೆಗೆ ಬೆಳೆ ನಾಶ 

ಸುರಿಯುತ್ತಿರುವ ಮಳೆಯಿಂದಾಗಿ ಅತಿವೃಷ್ಟಿ ಸಂಭವಿಸುತ್ತಿದ್ದು, ನಾನಾ ಜಿಲ್ಲೆಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿದ್ದು, ಅಪಾರ ಬೆಳೆ ನಷ್ಟವಾಗಿದೆ. 

ದಾವಣಗೆರೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಈಗಷ್ಟೇ ಬೆಳೆಯುತ್ತಿರುವ ಮೆಕ್ಕೆಜೋಳ ನೆಲಕಚ್ಚಿವೆ. ಭತ್ತದ ಸಸಿಮಡಿಗಳು ನೀರಿಗೆ ಕೊಚ್ಚಿಹೋಗಿವೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ್ದು, ಹತ್ತಿ, ರೇಷ್ಮೆ, ರಾಗಿ, ಶೇಂಗಾ ಬೆಳೆಗಳು ಜಲಾವೃತವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಕೋಲಾರದಿಂದ ಅರಹಳ್ಳಿಗೆ ತೆರಳುವ ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿದೆ. ಅರಹಳ್ಳಿ ಕೆರೆ ಭರ್ತಿಯಾಗಿ ಕೋಡಿಬಿದ್ದಿದೆ. ನೀರು ರಭಸದಿಂದ ಹರಿಯುತ್ತಿದ್ದು, ಸುತ್ತಲಿನ ಜಮೀನುಗಳು ಮುಳುಗಿವೆ. ಬಿತ್ತನೆ ಮಾಡಲಾಗಿದ್ದ ರಾಗಿ ನೀರಿನಲ್ಲಿ ತೊಳೆದು ಹೋಗಿದೆ. ಅವರೆ, ತೊಗರಿ ನಾಶವಾಗಿದೆ. ದಪ್ಪ ಮೆಣಸಿಕಾಯಿ, ಟೊಮೆಟೊ ಬೆಳೆಗೂ ಹಾನಿ ಉಂಟಾಗಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿ ಹಾಲಾಪುರ ಹಳ್ಳದ ಸೇತುವೆಗೆ ಹಾನಿಯಾಗಿದ್ದು, ಕವಿತಾಳ-ಮಸ್ಕಿ ಸಂಚಾರ ಸ್ಥಗಿತಗೊಂಡಿದೆ. ಹಳ್ಳದ ನೀರು ಸಮೀಪದ ಜಮೀನುಗಳಿಗೆ ನುಗ್ಗಿ ಬೆಳೆ ಜಲಾವೃತವಾಗಿದೆ. 

ಚಿತ್ರದುರ್ಗ ಜಿಲ್ಲೆಯ ಧರ್ಮಪುರಿ ಹೋಬಳಿಯಲ್ಲಿ ಸುವರ್ಣಮುಖಿ ಮತ್ತು ವೇದಾವತಿ ನದಿಗಳು ಸುಮಾರು 40 ವರ್ಷಗಳ ನಂತರ ಉಕ್ಕಿ ಹರಿಯುತ್ತಿವೆ.

ಇಕ್ಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಲಗುರ ಮತ್ತು ಇಕ್ಕನೂರಿನಲ್ಲಿ ಮಳೆಯ ಅವಾಂತರಕ್ಕೆ ಅಪಾರ ನಷ್ಟ ಸಂಭವಿಸಿದೆ. ಕೋಡಿಹಳ್ಳಿಯಲ್ಲಿ 9 ಎಕರೆಯಲ್ಲಿ ಬೆಳೆದಿದ್ದ ಪರಂಗಿ ಹಣ್ಣಿನ ತೋಟ, ಇಕ್ಕನೂರು ಗ್ರಾಮದಲ್ಲಿ 20 ಎಕರೆಯಲ್ಲಿಯ ಶೇಂಗಾ, ಕುರುಬರಹಳ್ಳಿಯಲ್ಲಿ ಹತ್ತಿ, ರಾಗಿ ಫಸಲು ಜಲಾವೃತವಾಗಿದೆ.

ಕಲಬುರಗಿ ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಚಿಂಚೋಳಿ ತಾಲೂಕಿನ ದೇಗಲಮಡಿ ಗ್ರಾಮದ ಕೂಡ ರಸ್ತೆ ಸಂಪರ್ಕ ಕಡಿತವಾಗಿದೆ. ಗ್ರಾಮದಿಂದ ಚಿಂಚೋಳಿ ತಾಲೂಕಿಗೆ ಹೋಗುವ ಕೂಡ ರಸ್ತೆ ಮಧ್ಯೆ ಇರುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಜನರು ನೀರಿನಲ್ಲಿಯೇ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

ಸುತ್ತಲಿನ ಗ್ರಾಮಗಳಿಂದ ಹರಿದು ಬರುವ ಮಳೆ ನೀರಿನ ಪ್ರವಾಹಕ್ಕೆ ದೇಗಲಮಡಿ ಗ್ರಾಮದ ಹತ್ತಿರ ನಿರ್ಮಿಸಿದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಗ್ರಾಮದ ನೂರಾರು ಎಕರೆ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಳಗಾವಿ ನಗರದಲ್ಲಿ ಬುಧವಾರ ತುಸು ಜೋರು ಮಳೆಯಾಗಿದ್ದು, ಎರಡು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಳೇ ಪಿ.ಬಿ ರಸ್ತೆಯಲ್ಲಿ ಹಲವು ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ತವಾಗಿತ್ತು.

ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸುಳ್ಯ ತಾಲೂಕಿನಲ್ಲಿ ಆಗಸ್ಟ್‌ 4 ರಂದು ಎಲ್ಲ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್