
- ಬುಧವಾರ ಕೆಎಂಎಫ್ ಸಭೆ
- ರೈತರಿಗೆ ಅನ್ಯಾಯ ಆಗಬಾರದೆಂದ ಸಿಎಂ
ನಂದಿನಿ ಹಾಲಿನ ದರ ಹೆಚ್ಚಳದ ಚರ್ಚೆ ಕಳೆದ ಎರಡು ವಾರಗಳಿಂದ ಭಾರೀ ಚರ್ಚೆಯಾಗುತ್ತಿದೆ. ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್ ಜೊತೆ ಸಭೆ ನಡೆಸಿದ್ದು, ಗ್ರಾಹಕರಿಗೆ ಹೊರೆ ಆಗದಂತೆ ಹಾಗೂ ರೈತರಿಗೂ ತೊಂದರೆ ಆಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಬುಧವಾರ ಕೆಎಂಎಫ್ ಸಭೆ ನಡೆಸಲಿದ್ದು, ಹಾಲು ಹಾಗೂ ಮೊಸರಿನ ದರವನ್ನು 3 ರೂಪಾಯಿ ಬದಲಿಗೆ 2 ರೂ. ಹೆಚ್ಚಳ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ.
ಸೋಮವಾರದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, "ಹಾಲಿನ ದರ 3 ರೂ. ಹೆಚ್ಚಳ ಮಾಡುವುದು ಬೇಡವೆಂದು ಕೆಎಮ್ಎಫ್ ಅಧಿಕಾರಿಗಳಿಗೆ ಹೇಳಿದ್ದೇನೆ. ಆದರೆ, ಹಾಲಿನ ದರ ಹೆಚ್ಚಳ ಮಾಡದಿದ್ದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ಕೆಎಂಎಫ್ನವರು ತಿಳಿಸಿದ್ದಾರೆ. ಹೀಗಾಗಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ, ನಷ್ಟ ಆಗಬಾರದು. ಅದೇ ರೀತಿ ಗ್ರಾಹಕರಿಗೂ ಹೊರೆ ಅನಿಸಬಾರದು. ಆ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯಲ್ಲಿ ಆಗುತ್ತಿರುವ ಅನಗತ್ಯ ಸೋರಿಕೆಯನ್ನು ತಡೆಗಟ್ಟುವುದು ಮತ್ತು ಖರ್ಚು-ವೆಚ್ಚಗಳನ್ನು ತುಸು ಕಡಿಮೆ ಮಾಡಿಕೊಳ್ಳುವಂತೆ ಒಂದು ಸೂತ್ರ ರೂಪಿಸಲು ನಿರ್ದೇಶನ ನೀಡಿದ್ದೇನೆ" ಎಂದರು.
ಎರಡು ದಿನಗಳ ಸಮಯ ಕೇಳಿರುವ ಕೆಎಂಎಫ್ ಬುಧವಾರ ಸಭೆ ಸೇರಲಿದ್ದು, ಪ್ರತಿ ಲೀಟರ್ ಹಾಲು ಮತ್ತು ಮೊಸರಿಗೆ 3 ರೂ. ಬದಲಿಗೆ 2 ರೂ. ಹೆಚ್ಚಳ ಮಾಡುವ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.