ದಾವಣಗೆರೆ | ಇದು ನಮ್ಮ ಸೌಹಾರ್ದ: ಈದ್ಗಾ ಮೈದಾನಕ್ಕೆ ಭೂಮಿ ದಾನ ಮಾಡಿದ ಹಿಂದುಗಳು

  • ಮುಸ್ಲಿಂ ಸಮುದಾಯದ ಪ್ರಾರ್ಥನೆಗೆ ಭೂಮಿ ಕೊಟ್ಟ ಹಿಂದು ಬಾಂಧವರು
  • ಮುಸ್ಲಿಂ ಮತಗಳೇ ಇಲ್ಲದ ವಾರ್ಡ್‌ನಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲುವು

ದಾವಣಗೆರೆಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಗ್ರಾಮ ಅಣಬೇರು. ಇಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಅವರೆಲ್ಲರು ಅನೇಕ ಜಾತಿ-ಧರ್ಮಗಳಿಗೆ ಸೇರಿದವರಾಗಿದ್ದು, ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿದ್ದಾರೆ.

ಸುಮಾರು 6 ತಿಂಗಳ ಹಿಂದೆ ಬೀಸಿದ ಬಿರುಗಾಳಿ ಮತ್ತು ಮಳೆಯಿಂದಾಗಿ ಗ್ರಾಮದಲ್ಲಿದ್ದ ಬೃಹತ್ ಮರವೊಂದು ಉರುಳಿ ಬಿದ್ದು, ಈದ್ಗಾ ಮೈದಾನದ ಗೋಡೆ ಕುಸಿದಿತ್ತು. ಅದರ ಮರು ನಿರ್ಮಾಣಕ್ಕೆ ಹಿಂದು ಸಮುದಾಯದ ರಾಜಶೇಖರಪ್ಪ ಮತ್ತು ಕೆ ಸಿ ರಾಜಪ್ಪ ಎಂಬವರು ಸಹಾಯ ಮಾಡಿದ್ದಾರೆ. ಅಲ್ಲದೆ, ತಮ್ಮ ಜಮೀನಿನ ಸ್ವಲ್ಪ ಭಾಗವನ್ನೂ ದಾನವಾಗಿ ನೀಡಿದ್ದಾರೆ.

ಗ್ರಾಮದಲ್ಲಿದ್ದ ಈದ್ಗಾ ಮೈದಾನವೂ ವ್ಯಾಜ್ಯಕ್ಕೆ ಸಿಲುಕಿ, ಕೋರ್ಟ್‌ ಮೆಟ್ಟಿಲೇರಿತ್ತು. ಸುಮಾರು ನೂರಐವತ್ತಕ್ಕೂ ಹೆಚ್ಚು ವರ್ಷಗಳಿಂದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದ ಮೈದಾನ ಖಾಸಗಿ ವ್ಯಕ್ತಿಗಳಿಗೆ (ರಾಜಶೇಖರಪ್ಪ ಮತ್ತು ಕೆ ಸಿ ರಾಜಪ್ಪ) ಸೇರಬೇಕೆಂದು ಕೋರ್ಟ್‌ ತೀರ್ಪು ನೀಡಿತ್ತು. 

ಕೋರ್ಟ್‌ ತೀರ್ಪು ನೀಡಿದರೂ ಕೂಡ, ಮುಸ್ಲಿಂ ಭಾಂದವರಿಂದ ಜಾಗವನ್ನು ಕಸಿದುಕೊಳ್ಳದ ರಾಜಶೇಖರಪ್ಪ ಮತ್ತು ಕೆ ಸಿ ರಾಜಪ್ಪ, ಮುಸ್ಲಿಮರು ಪ್ರಾರ್ಥನೆ ಮುಂದುವರೆಸಲು ಅವಕಾಶ ನೀಡುವ ಮೂಲಕ ಸೋದರತ್ವ ಸಾರಿದ್ದರು. 

ಇದೀಗ, 6 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಈದ್ಗಾ ಮೈದಾನ ಗೋಡೆ ಕುಸಿದಿದ್ದು, ಮುಸ್ಲಿಂ ಸಮುದಾಯವು ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶವಿಲ್ಲದಂತಾಗಿತ್ತು. ಇದನ್ನು ಮನಗಂಡ ಗ್ರಾಮದ ಆಂಜನೇಯ ದೇವಸ್ಥಾನದ ಸಮಿತಿಯ ಮುಖ್ಯಸ್ಥ ಕೆ ಸಿ ರಾಜಪ್ಪ ಮತ್ತು ರಾಜಶೇಖರಪ್ಪ ಅವರು ಮುಸ್ಲಿಮರ ಜೊತೆ ಗೂಡಿ, ಈದ್ಗಾ ಗೋಡೆಯನ್ನು ಮರುನಿರ್ಮಾಣ ಮಾಡಲು ನೆರವು ನೀಡಿದ್ದಾರೆ. ಅಲ್ಲದೆ, ಈಗಿರುವ ಮೈದಾನದ ಜೊತೆಗೆ ಮತ್ತಷ್ಟು ಜಾಗವನ್ನು ಕೂಡ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ. 

ಇತ್ತೀಚೆಗೆ, ಗೋಡೆಯನ್ನು ಮರು ಸ್ಥಾಪಿಸಿದ ಮುಸ್ಲಿಮರು, ರಂಝಾನ್‌ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ, ದಾನಿಗಳಿಗೆ ಮತ್ತು ಊರಿನ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಬುಡೆನ್ ಸಾಬ್ ರವರು 'ಈ ದಿನ.ಕಾಮ್‌' ಜೊತೆ ಮಾತನಾಡಿ "ಹಿಂದಿನಿಂದಲೂ ನಾವು ಅಣಬೇರು ಗ್ರಾಮದಲ್ಲಿ ಸಾಮರಸ್ಯದಿಂದ ಬದುಕುತಿದ್ದೇವೆ. ನಮ್ಮ ಮಧ್ಯೆ ಯಾವುದೇ ಕಲಹ ಗಲಾಟೆಗೆ ಅವಕಾಶವಿಲ್ಲ. ಹೊರಗಿನ ಪ್ರಪಂಚದಲ್ಲಿ ಏನೇ ನಡೆದರೂ, ನಾವು ಗಮನ ಕೊಡುವುದಿಲ್ಲ. ನಮ್ಮ ಊರಿನ ಎಲ್ಲ ಗ್ರಾಮಸ್ಥರು ಸೌಹಾರ್ದ ಮತ್ತು ಸಾಮರಸ್ಯದಿಂದ ಬದುಕುತ್ತೇವೆ. ಊರಿನಲ್ಲಾಗುವ ಎಲ್ಲ ಸಮಾರಂಭಗಳಲ್ಲೂ ಎಲ್ಲರೂ ಒಟ್ಟಾಗಿ ಭಾಗವಹಿಸುತ್ತೇವೆ. ಕೆಲಸ ಕಾರ್ಯಗಳನ್ನು ಮಾಡುತ್ತೇವೆ" ಎಂದು ತಿಳಿಸಿದ್ದಾರೆ. 

ಗ್ರಾಮದ ಮತ್ತೋರ್ವ ಮುಖಂಡ, ದಾನವಾಗಿ ಭೂಮಿ ನೀಡಿದ ಕೆಸಿ ರಾಜಪ್ಪ ಮಾತನಾಡಿ, "ಊರು ಹುಟ್ಟಿದಂದಿನಿಂದಲೂ ಅವರು ಕೂಡ ನಮ್ಮೊಂದಿಗೆ ಇಲ್ಲಿ ಬದುಕುತ್ತಿದ್ದಾರೆ. ನಮ್ಮ ತಾತ-ಮುತ್ತಾತಂದಿರು ಸಹಬಾಳ್ವೆಯಿಂದ ಜೀವನ ನಡೆಸಿದ್ದಾರೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭೇದಭಾವವಿಲ್ಲ. ಬಸವಣ್ಣನವರು ಕೂಡ ಅದನ್ನೇ ಹೇಳಿರುವುದು, ನಾವು ದೇವರಿಗಾಗಿ ಭೂಮಿಯನ್ನು ಬಿಟ್ಟು ಕೊಟ್ಟಿದ್ದೇವೆ ಅಷ್ಟೇ. ಎಲ್ಲಾ ದೇವರುಗಳು ಒಂದೇ" ಎಂದು ಹೇಳಿದ್ದಾರೆ.

ಮತ್ತೋರ್ವ ದಾನಿ ರಾಜಶೇಖರಪ್ಪ ಮಾತನಾಡಿ, "ಮುಸ್ಲಿಮರು ಕೂಡ ನಮ್ಮಂತೆ ಮನುಷ್ಯರು. ಮುಂಚಿನಿಂದಲೂ ನಾವು ಒಟ್ಟಾಗಿ ಬದುಕುತ್ತಿದ್ದೇವೆ. ನಮ್ಮ ಮಧ್ಯೆ ಯಾವುದೇ ಭೇದವಿಲ್ಲ. ಅವರು ಮುಂಚಿನಿಂದಲೂ ನಮ್ಮ ಜಮೀನಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಾವು ಎಂದೂ ಅಡ್ಡಿಪಡಿಸಿಲ್ಲ. ಕೋರ್ಟ್ ಸೂಚನೆ ನಂತರವೂ ಮುಂದುವರಿಸಿಕೊಂಡು ಹೋಗಿ ಎಂದು ಹೇಳಿದ್ದೆವು, ಈಗ ಹೊಸದಾಗಿ ಕಟ್ಟುವುದಕ್ಕೆ ಇನ್ನಷ್ಟು ಹೆಚ್ಚುವರಿ ಜಾಗವನ್ನು ಬಿಟ್ಟು ಕೊಟ್ಟಿದ್ದೇವೆ" ಎಂದು ವಿವರಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ʼನಾನು ರಾಧಾ ಇವಳು ಜಮೀಲಾ ಅಕ್ಕತಂಗೀರಂತೆ ಬದುಕ್ತಿದ್ದೀವಿʼ

"ಈದ್ಗಾ ಮೈದಾನಕ್ಕೆ ಭೂಮಿಯನ್ನು ಬಿಟ್ಟುಕೊಟ್ಟಿರುವುದು ಮಾತ್ರವಲ್ಲದೆ, ಮುಸ್ಲಿಂ ಮತಗಳೇ ಇಲ್ಲದ ವಾರ್ಡ್‌ನಲ್ಲಿ ಮುಸ್ಲಿಂ ಸಮುದಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗ್ರಾಮಸ್ಥರು ಗೆಲ್ಲಿಸಿದ್ದಾರೆ. ಅವರು ಈಗ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿದ್ದಾರೆ. ಅಧಿಕಾರಕ್ಕಾಗಿ ಕಿತ್ತಾಡುವ ಹೊರಗಿನ ಪ್ರಪಂಚಕ್ಕೆ ನಮ್ಮೂರು ಮಾದರಿಯಾಗಲಿದೆ" ಎಂದು ಗ್ರಾಮದ ಮುಸ್ಲಿಂ ಮುಖಂಡ ಬುಡೆನ್ ಸಾಬ್ ತಿಳಿಸಿದ್ದಾರೆ. 

 

ಮಾಸ್‌ ಮೀಡಿಯಾ ದಾವಣಗೆರೆ ಜಿಲ್ಲಾ ಸಂಯೋಜಕ ವಿನಯ್ ಮಾಹಿತಿ ಆಧಾರಿತ ವರದಿ
ನಿಮಗೆ ಏನು ಅನ್ನಿಸ್ತು?
3 ವೋಟ್