
- ʼಬಿಜೆಪಿಗರು ವಿಕೃತ ಮನೋಭಾವದವರು ಎಂಬುದನ್ನು ಮತ್ತೆ ಡ್ಯಾನ್ಸ್ ಮೂಲಕ ದೇಶಕ್ಕೆ ತೋರಿಸಿಕೊಟ್ಟರುʼ
- ʼಮಳೆಗಾಲದ ಅಧಿವೇಶನದಲ್ಲಿ ಮಳೆ ಅನಾಹುತ, ಸರ್ಕಾರದ ವೈಫಲ್ಯ, 40% ಕಮಿಷನ್ ಬಗ್ಗೆ ಮಾತಾಡುತ್ತೇವೆʼ
ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ 46 ಜನ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪರಪ್ಪನ ಅಗ್ರಹಾರಕ್ಕೆ ಸೇರಲು ಜೈಲು ಹೇಗಿದೆ ಎಂಬುದನ್ನು ನೋಡಿಕೊಂಡು ಬಂದಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಕುಟಿಕಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಆರಗ ಜ್ಞಾನೇಂದ್ರ ಅವರು ಜೈಲಿಗೆ ಹೋಗಲು ತಯಾರಿ ಮಾಡಿಕೊಂಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ” ಎಂದರು.
“ಜನೋತ್ಸವದ ಸಂದರ್ಭದಲ್ಲಿ ಶೋಕಾಚರಣೆ ಇದ್ದರೂ ಮಂತ್ರಿ ಶಾಸಕರು ಡ್ಯಾನ್ಸ್ ಮಾಡಿದ್ದಾರೆ. ಜನರು ಸಂಕಷ್ಟದಲ್ಲಿ ಇದ್ದಾರೆ. ಇದು ಒಂದು ರೀತಿಯ ವಿಕೃತಿ ನಡೆ. ಬಿಜೆಪಿಗರು ವಿಕೃತ ಮನೋಭಾವದವರು ಎಂಬುದನ್ನು ಮತ್ತೆ ದೇಶಕ್ಕೆ ತೋರಿಸಿಕೊಟ್ಟರು” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ವಿಧಾನಮಂಡಲ ಅಧಿವೇಶನ ಆರಂಭ; ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ
“ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ಮಳೆ ಅನಾಹುತ, ಸರ್ಕಾರದ ವೈಫಲ್ಯದ , ಜನರ ಕಷ್ಟಗಳ ಬಗ್ಗೆ ಸದನದಲ್ಲಿ ಮಾತನಾಡುತ್ತೇವೆ. ಪೊಲೀಸ್ ಇಲಾಖೆಯಲ್ಲಿನ ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಹಾಗೂ 40% ಕಮಿಷನ್ ಆರೋಪದ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡುತ್ತೇವೆ” ಎಂದರು.
“ಈ ಹಿಂದೆ ಸದನದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಆದರೆ ನಂತರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಬಂಧನ ಆಯಿತು. ತಾನು ತಪ್ಪಿಸಿಕೊಳ್ಳಲು ಐಪಿಎಸ್ ಅಧಿಕಾರಿಯನ್ನು ಬಲಿ ಕೊಟ್ಟಿದ್ದಾರೆ. ಅಮಿತ್ ಶಾ ಮತ್ತು ಆರಗ ಜ್ಞಾನೇಂದ್ರ ಅವರಿಗೆ ಯಾವುದೇ ವ್ಯತ್ಯಾಸವಿಲ್ಲ” ಎಂದು ಜರಿದರು.