ತಮಿಳುನಾಡು-ಬೆಂಗಳೂರಿನ ಸಂಪನ್ಮೂಲಗಳಿಂದ ಬೃಹತ್ತಾಗಿ ಬೆಳೆದಿದೆ ಗಡಿ ಪ್ರದೇಶ ಹೊಸೂರು

ಹೊಸೂರಿನಲ್ಲಿ ಕಳೆದ ನಾಲ್ಕೈದು ದಶಕಗಳ ಹಿಂದೆ ಅಲ್ಲಿ ತೀರಾ ಅಗ್ಗದ ಬೆಲೆಗೆ ಭೂಮಿ ಸಿಗುತ್ತಿತ್ತು. ಅಲ್ಲದೇ, ಮೂರು ಸಾವಿರಕ್ಕೂ ಅಧಿಕ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಇಲ್ಲಿ ನಡೆಯುತ್ತಿದ್ದವು.

1970ರ ದಶಕದಲ್ಲಿ ತಮಿಳುನಾಡು-ಕರ್ನಾಟಕದ ಗಡಿಯಂಚಿನಲ್ಲಿರುವ ಹೊಸೂರಿಗೆ ಬೆಂಗಳೂರಿನಿಂದ ಕೆಲವೇ ನಿಮಿಷಗಳ ಪ್ರಯಾಣವಿತ್ತು. ಆದರೆ, ಕಳೆದ ಐದು ದಶಕಗಳಿಂದ ಹಂತಹಂತವಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವ ಹೊಸೂರು, ಈಗ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ.

ಹೊಸೂರು - ಉಭಯ ರಾಜ್ಯಗಳ ಗಡಿಯಲ್ಲಿರುವ ಕಾರಣ ಅಲ್ಲಿನ ಕಾರ್ಖಾನೆಗಳಲ್ಲಿ ಎರಡೂ ರಾಜ್ಯಗಳ ಜನರು ದುಡಿಯುತ್ತಿದ್ದಾರೆ. ಕಳೆದ ನಾಲ್ಕೈದು ದಶಕಗಳ ಹಿಂದೆ ಅಲ್ಲಿ ತೀರಾ ಅಗ್ಗದ ಬೆಲೆಗೆ ಭೂಮಿ ಸಿಗುತ್ತಿತ್ತು. ಅಲ್ಲದೇ, ಮೂರು ಸಾವಿರಕ್ಕೂ ಅಧಿಕ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಇಲ್ಲಿ ನಡೆಯುತ್ತಿದ್ದವು. ಇದು ಹೂಡಿಕೆದಾರರನ್ನು ಮತ್ತಷ್ಟು ಆಕರ್ಷಿಸಿತು. 

1974ರಲ್ಲಿ ಕೃಷ್ಣಗಿರಿ ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ಧಿಗೆ ತಮಿಳುನಾಡು ಸರ್ಕಾರ ನಿರ್ಧರಿಸಿತು. ಇದರ ಭಾಗವಾಗಿ ಹೊಸೂರಿನಲ್ಲಿ ಕೈಗಾರಿಕೆಗಳು ಆರಂಭವಾದವು. ಆ ರಾಜ್ಯದ ಕೈಗಾರಿಕಾ ಉತ್ತೇಜನ ನಿಗಮವು ಹೊಸೂರಿನಲ್ಲಿ ಕಾರ್ಖಾನೆಗಳನ್ನು ನಿರ್ಮಾಣ ಮಾಡಲು ಬಂಡವಾಳಗಾರರಿಗೆ ಆಹ್ವಾನ ನೀಡಿತು. 

ಅಶೋಕ್‌ಲೇಲ್ಯಾಂಡ್‌ ಮತ್ತು ಟೈಟಾನ್‌ನಂತಹ ಸಂಸ್ಥೆಗಳು ನಿಗಮದ ಕೈಗಾರಿಕಾ ಎಸ್ಟೇಟ್‌ನಲ್ಲಿ ತಮ್ಮ ಉದ್ದಿಮೆಗಳನ್ನು ಆರಂಭಿಸಿದವು. ಆದರೆ, ದ್ವಿಚಕ್ರವಾಹನಗಳ ಸರದಾರ ಟಿವಿಎಸ್‌ ತನ್ನದೇ ಭೂಮಿಯಲ್ಲಿ ಕಾರ್ಖಾನೆ ಸ್ಥಾಪಿಸಿತು. ಇದೇ ರೀತಿಯಲ್ಲಿ ನೂರಾರು ಕೈಗಾರಿಕೆಗಳು ಅಲ್ಲಿ ತಲೆ ಎತ್ತಿವೆ. ಈಗ, ತಮಿಳುನಾಡಿನ ಉತ್ಪಾದನಾ ವಲಯದಲ್ಲಿ ಹೊಸೂರು ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಿದೆ. 

ನಗರವು ಅಭಿವೃದ್ಧಿ ಹೊಂದುತ್ತಿದ್ದಂತೆ ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿದಿದೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯವಿಲ್ಲ. ಅಲ್ಲದೇ, ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಗ್ರಾನೈಟ್‌ ಗಣಿಗಾರಿಕೆಯು ಎಗ್ಗಿಲ್ಲದೆ ನಡೆಯುತ್ತಿದ್ದು, ಪರಿಸರದ ಅವನತಿಗೆ ಕಾರಣವಾಗಿದೆ. 

ಚೆನ್ನೈ-ಬೆಂಗಳೂರು ಹೆದ್ದಾರಿ ಸಂಪರ್ಕವು ಕೂಡ ಹೊಸೂರು ಮೂಲಕವೇ ಹಾದುಹೋಗುವುದರಿಂದಾಗಿ, ಇಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಜನಸಾಮಾನ್ಯರು ರಸ್ತೆ ದಾಟಲು ಸಹ ಕಷ್ಟವಾಗುತ್ತದೆ. ಅಸಮರ್ಪಕ ಪಟ್ಟಣ ಯೋಜನೆಯೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಜನಸಂಖ್ಯೆಯ ದೃಷ್ಟಿಯಲ್ಲಿ ಹೊಸೂರು ವೇಗವಾಗಿ ಬೆಳೆಯುತ್ತಿರುವ ವಿಶ್ವದ 13ನೇ ನಗರವಾಗಿದೆ. 

ಫ್ಲೈ ಓವರ್‌ಗಳಿಂದ ಹಿಡಿದು ವಸತಿ ಸಂಕೀರ್ಣಗಳವರೆಗೆ, ನಗರವು ತನ್ನ ಕೈಗಾರಿಕಾಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಆದರೂ, ಹೊಸೂರು ತಮಿಳುನಾಡಿಗೆ ಬರುವ ಬಹುತೇಕ ಹೂಡಿಕೆಯನ್ನು ತನ್ನತ್ತ ಸೆಳೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದ್ದು, ಆಟೋಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಉತ್ಪಾದನೆಯು ಅಗ್ರಸ್ಥಾನದಲ್ಲಿದೆ. 

2017 ರಿಂದ ಹೊಸೂರಿನಲ್ಲಿ 21,424 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ಸ್‌ಗೆ 9,050 ಕೋಟಿ ರೂಪಾಯಿ, ಆಟೋಮೊಬೈಲ್‌ಗಳಿಗೆ 5,539 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. 

2017 ರಿಂದ ಎಂಒಯು(memorandum of understanding)ಗಳಿಗೆ ಸಹಿ ಹಾಕಲಾದ 43 ಯೋಜನೆಗಳು 70,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. 

ಹೊಸೂರು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ ವೇಲ್‌ ಮುರುಗನ್‌ ಮಾತನಾಡಿ, "ಹೂಡಿಕೆದಾರರಿಗೆ ಬೇಕಾದ ಎಲ್ಲ ಅನುಕೂಲಗಳು ನಮ್ಮ ನಗರದಲ್ಲಿವೆ. ಬೆಂಗಳೂರು ಸಮೀಪವಿರುವುದರಿಂದ ಅತ್ಯುತ್ತಮ ರಸ್ತೆ ಸಂಪರ್ಕ, ವಾಹನ ಸೌಕರ್ಯವಿದೆ. ನಮ್ಮ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ)ಗಳು ಮಾಡಲು ಸಾಧ್ಯವಾಗದ ಯಾವುದೇ ಕೆಲಸವಿಲ್ಲ. ನಾವು ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಟೂಲಿಂಗ್, ರಬ್ಬರ್, ಪ್ಲಾಸ್ಟಿಕ್, ಮ್ಯಾಚಿಂಗ್ ಫ್ಯಾಬ್ರಿಕೇಶನ್ ಮತ್ತು ಮೆಷಿನ್ ಟೂಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದೇವೆ" ಎಂದು ಹೇಳಿದ್ದಾರೆ.  

ಬಟ್ಟೆ ಉದ್ಯಮವೊಂದರ ಮುಖ್ಯ ಹಣಕಾಸು ಅಧಿಕಾರಿ ಬಿ ಸೆಂಥಿಲ್ ನಾಥನ್, "ಹೊಸೂರು ಈ ಮಟ್ಟಿಗೆ ಬೆಳೆಯಲು ಮೂರು ಅಂಶಗಳು ಕಾರಣ. ಅವುಗಳೆಂದರೆ ಸಮೀಪದಲ್ಲೇ ಇರುವ ಬೆಂಗಳೂರು, ನುರಿತ ಉದ್ಯೋಗಿಗಳು ಹಾಗೂ ಅಗ್ಗದ ಬೆಲೆಗೆ ಸಿಕ್ಕ ಭೂಮಿ. ಬೆಂಗಳೂರು ಅತ್ಯಂತ ಸಮೀಪವಿದ್ದು, ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇಡೀ ತಮಿಳುನಾಡಿನಲ್ಲಿಯೇ ಹೆಚ್ಚಿನ ಹೂಡಿಕೆ ಇರುವುದು ಚೆನ್ನೈನಲ್ಲಿ. ಅದನ್ನು ಬಿಟ್ಟರೆ ಹೊಸೂರಿನಲ್ಲಿಯೇ ಅನ್ನೋದು ಗಮನಾರ್ಹ. ಹೀಗಾಗಿ, ವಿಮಾನ ಸಂಪರ್ಕಕ್ಕಾಗಿ ಬೇಡಿಕೆ ಇದೆ. ಹೊಸೂರಿನಲ್ಲಿಯೇ ವಿಶೇಷ ವಿಮಾನ ನಿಲ್ದಾಣ ಮಾಡಬೇಕೆಂದು ಉದ್ಯಮಿಗಳು ತಮಿಳುನಾಡು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಟಾಟಾ, ಡೆಲ್ಟಾ, ಓಲಾ ಮೊಬಿಲಿಟಿ, ಅಥರ್ ಮತ್ತು ಸಿಂಪಲ್ ಎನರ್ಜಿಗಳು ಎಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್‌ ಚಾಲಿತ ವಾಹನಗಳನ್ನು ಹೊಸೂರಿನಲ್ಲಿಯೇ ತಯಾರಿಸಲಾಗುತ್ತದೆ. ವಿದ್ಯುತ್‌ ಚಾಲಿತ ವಾಹನ ತಯಾರಿಕೆಗಾಗಿ ಹೊಸೂರಿನಲ್ಲಿ 1,100 ಕೋಟಿ ರೂಪಾಯಿ ಹೂಡಿಕೆ ಮಾಡಲು ಟಿವಿಎಸ್‌ ನಿರ್ಧರಿಸಿದೆ. 

ಹೊಸೂರಿನಲ್ಲಿರುವ ಬಹುತೇಕ ಕಾರ್ಖಾನೆಗಳು ಈಗ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಿಗೂ ವಿಸ್ತರಿಸುತ್ತಿವೆ. ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ ತಮಿಳುನಾಡು ಸರ್ಕಾರ ಉತ್ತೇಜನ ನಿಡುತ್ತಿದ್ದು, ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಸರ್ಕಾರವು ಈ ಪ್ರದೇಶಗಳಲ್ಲಿ ಎಲ್ಲ ರೀತಿಯ ಆಟೋಮೊಬೈಲ್‌ಗಳ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ. ಈ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ ಎಂದು ತಮಿಳುನಾಡಿನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

ಹೂ ಕೃಷಿ ಪತನ

ತಮಿಳುನಾಡು ಸರ್ಕಾರ ಕೈಗಾರಿಕಾ ವಲಯಕ್ಕೆ ಉತ್ತೇಜನ ಕೊಡುವ ಭರದಲ್ಲಿ ಕೃಷಿಯ ಅವನತಿಗೆ ಕಾರಣವಾಗಿದೆ. ಪ್ರತಿ ವರ್ಷವೂ ಫೆಬ್ರವರಿ 14ರ ಸಮಯದಲ್ಲಿ ಹೊಸೂರಿನಲ್ಲಿ ಬೆಳೆಯುತ್ತಿದ್ದ ಗುಲಾಬಿಗಳಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಆದರೆ, ಇದೀಗ ಅಲ್ಲಿ ಗುಲಾಬಿ ಬೆಳೆಯುವುದೇ ಕಡಿಮೆಯಾಗಿದೆ. ಗುಲಾಬಿ ಬೆಳೆಯುತ್ತಿದ್ದ ಜಾಗದಲ್ಲೆಲ್ಲ ಕಾರ್ಖಾನೆಗಳು ತಲೆಯೆತ್ತಿವೆ. 

“ಹೂವಿನ ತೋಟದ ನಿರ್ವಹಣೆಗೆ ತಗಲುವ ವೆಚ್ಚ ದೊಡ್ಡದು. ಗುಲಾಬಿ ಹೂ ಬೆಳೆದಿದ್ದೆವು. ಮಾರಾಟ ಸಂದರ್ಭದಲ್ಲಿ ಕೊರೊನಾ ವಕ್ಕರಿಸಿತು. ಹಾಗಾಗಿ, ತೀವ್ರ ನಷ್ಟ ಅನುಭವಿಸಿದೆವು. ಇನ್ನು ಗುಲಾಬಿ ಬೆಳೆದು ಲಾಭ ಮಾಡುವುದು ಅಷ್ಟಕ್ಕಷ್ಟೇ ಎಂದುಕೊಂಡು ನಮ್ಮ ಜಮೀನುಗಳನ್ನು ಮಾರಿದೆವು" ಎಂದು ರೈತರೊಬ್ಬರು ಹೇಳಿದ್ದಾರೆ. 

"ಜನರ ಜೀವನೋಪಾಯಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಕೃಷಿಯೋಗ್ಯ ಭೂಮಿಯನ್ನು ಕೈಗಾರಿಕೆಗೆ ಪರಿವರ್ತಿಸುವುದನ್ನು ತಡೆಯಬೇಕು. ಸಮತೋಲಿತ ಅಭಿವೃದ್ಧಿಯು ಎಲ್ಲದಕ್ಕಿಂತ ಮುಖ್ಯ" ಎಂದು ಸೆಂಥಿಲ್‌ ನಾಥನ್‌ ಹೇಳಿದ್ದಾರೆ. 

ಎಲೆಕ್ಟ್ರಾನಿಕ್ಸ್, ವಿದ್ಯುತ್‌ ಚಾಲಿತ ವಾಹನಗಳ ತಯಾರಿ, ಆಟೋಮೊಬೈಲ್‌ಗಳ ಜೊತೆಗೆ ಏರೋಸ್ಪೇಸ್‌ಗೆ ಸಂಬಂಧಿಸಿದ ಕಾರ್ಖಾನೆಯೂ ಹೊಸೂರಿನಲ್ಲಿದೆ. ಸೇಲಂ ಮೂಲದ ಏರೋಸ್ಪೇಸ್‌ ಎಂಜಿನಿಯರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಹೊಸೂರಿನಲ್ಲಿ ಬೋಯಿಂಗ್‌ ವಿಮಾನ ತಯಾರಿಕೆಗೆ ಬೇಕಾದ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯೊಂದನ್ನು ಸ್ಥಾಪಿಸಿದೆ.  

"ಹೂಡಿಕೆದಾರರು ಕಾರ್ಖಾನೆಗಳನ್ನು ಸ್ಥಾಪಿಸಲು ಸರ್ಕಾರದ ಬೆಂಬಲದ ಜೊತೆಗೆ ಅನುಕೂಲಕರ ವಾತಾವರಣವನ್ನೂ ನಿರೀಕ್ಷಿಸುತ್ತಾರೆ. ಹೊಸೂರು ಇಂಥ ವಾತಾವರಣ ಸೃಷ್ಟಿಸಿರುವಲ್ಲಿ ಬಹಳ ಮುಂದಿದೆ. ಟಿವಿಎಸ್, ಟೈಟಾನ್, ಅಶೋಕ್ ಲೇಲ್ಯಾಂಡ್ ಹಾಗೂ ಹಲವಾರು ಎಂಎಸ್‌ಎಂಇಗಳು ಈ ಪ್ರದೇಶದಲ್ಲಿ ಹೂಡಿಕೆ ಮಾಡಿವೆ" ಎಂದು ತಮಿಳುನಾಡು ಮಾರ್ಗದರ್ಶಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಓ ಪೂಜಾ ಕುಲಕರ್ಣಿ ಹೇಳಿದ್ದಾರೆ.  

ಈಗಾಗಲೇ ಟಾಟಾ ಎಲೆಕ್ಟ್ರಾನಿಕ್ಸ್‌ನಂತಹ ಕಂಪನಿಗಳಿಗೆ ಎಂಎಸ್‌ಎಂಇಗಳು ಉಪಕರಣಗಳನ್ನು ಪೂರೈಸುತ್ತವೆ. ಮುಂದಿನ ದಿನಗಳಲ್ಲಿ ಇವು ಮತ್ತಷ್ಟು ಹೆಚ್ಚಾಗವಹುದು ಎಂದು ವೇಲ್‌ ಮುರುಗನ್‌ ತಿಳಿಸಿದ್ದಾರೆ.

ಸರ್ಕಾರವು ಹೂಡಿಕೆದಾರರಿಗೆ ಹೆಚ್ಚು ಉತ್ತೇಜನ ಕೊಡುತ್ತಿದೆ. ಇದೀಗ ಕೇವಲ ಹೊಸೂರು ಮಾತ್ರವಲ್ಲದೆ, ಕೃಷ್ಣಗಿರಿ-ಧರ್ಮಪುರಂಗಳಲ್ಲೂ ಹೂಡಿಕೆ ಮಾಡಲು ಉದ್ಯಮಿಗಳನ್ನು ಉತ್ತೇಜಿಸುತ್ತಿದೆ. 

ಹೊಸೂರಿನ ಒಟ್ಟು ಆರ್ಥಿಕತೆಯು ಮೂರೂವರೆ ಲಕ್ಷ ಕೋಟಿ ರೂಪಾಯಿ ಇದೆ. ಇದಕ್ಕೆ ತಮಿಳುನಾಡು ಸರ್ಕಾರದ ಕೃಗಾರಿಕಾ ನೀತಿಗಳೇ ಸಹಕಾರಿ ಎಂದು ಹೇಳಿರುವ ಮೂಲಸೌಕರ್ಯ ಸಮಿತಿಯ ಸದಸ್ಯ ಎಸ್‌. ಸುಂದರಯ್ಯ, "ಅಡೆತಡೆಗಳನ್ನೆಲ್ಲ ನಿಭಾಯಿಸಲು ಹಾಗೂ ಜನದಟ್ಟಣೆಯನ್ನು ತಡೆಯಲು ಹೊಸೂರಿನಲ್ಲಿ ಕನಿಷ್ಠ 6 ಫ್ಲೈ ಓವರ್‌ಗಳ ಅಗತ್ಯವಿದೆ. ಅಲ್ಲದೆ, ಬೆಂಗಳೂರಿನ ನಮ್ಮ ಮೆಟ್ರೋ ಸೌಲಭ್ಯವನ್ನು ಹೊಸೂರಿನವರೆಗೆ ವಿಸ್ತರಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಹೊಸೂರಿನಲ್ಲಿ 'ಸರಳ' ಜೀವನ

ನೆರೆಯ ಬೆಂಗಳೂರಿಗೆ ಹೋಲಿಸಿದರೆ, ಹೊಸೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆಗಳು ಸಿಗುತ್ತವೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕೆಲಸ ಮಾಡುವ ಬಹುತೇಕರು ಹೊಸೂರಿನಲ್ಲಿಯೇ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. 

1970ರ ದಶಕದಲ್ಲಿ 10 ಸಾವಿರಕ್ಕಿಂತ ಕಡಿಮೆಯಿದ್ದ ಜನಸಂಖ್ಯೆ, 2011ರ ಜನಗಣತಿ ಪ್ರಕಾರ ಹೊಸೂರಿನಲ್ಲಿ ಎರಡೂವರೆ ಲಕ್ಷ ದಾಟಿತ್ತು. ಸದ್ಯ, ಐದರಿಂದ ಆರು ಲಕ್ಷ ಜನಸಂಖ್ಯೆಯಿದೆ ಎಂದು ಅಂದಾಜಿಸಲಾಗಿದೆ. 

ಬೆಂಗಳೂರಿನ ಪ್ರಭಾವದಿಂದಾಗಿ ಹೊಸೂರು ವೈವಿಧ್ಯತೆಗಳನ್ನು ಹೊಂದಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್‌ ಭಾಷಿಕರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಗುಣಮಟ್ಟದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ. ತಮಿಳುನಾಡು ಸರ್ಕಾರವೀಗ ಕೃಷ್ಣಗಿರಿಯಲ್ಲಿ ವೈದ್ಯಕೀಯ ಕಾಲೇಜನ್ನೂ ನಿರ್ಮಿಸಲು ಮುಂದಾಗಿದೆ. 

ಶೀಘ್ರದಲ್ಲೇ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ

ಕೈಗಾರಿಕಾ ಮತ್ತು ಸುತ್ತಲಿನ ಪ್ರದೇಶದಲ್ಲಿ ನೀರಿನ ಸಮಸ್ಯೆ ದಶಕಗಳಿಂದಲೂ ಇದೆ ಎಂದು ಹೊಸೂರು ಪಾಲಿಕೆ ಆಯುಕ್ತ ಕೆ.ಬಾಲಸುಬ್ರಮಣ್ಯಂ ಒಪ್ಪಿಕೊಂಡಿದ್ದಾರೆ. ಹೊಗೇನಕಲ್‌ ನೀರು ಸರಬರಾಜು ಮತ್ತು ಫ್ಲೋರೋಸಿಸ್‌ ನಿವಾರಣೆ ಯೋಜನೆಯ 2ನೇ ಹಂತದ ಅನುಷ್ಠಾನದಿಂದ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದಿದ್ದಾರೆ. 

"ನಗರದಲ್ಲಿ ನೀರಿನ ಲಭ್ಯತೆ ದಿನಕ್ಕೆ 10 ಮಿಲಿಯನ್‌ ಲೀಟರ್‌ ಮಾತ್ರ ಇದೆ. ಆದರೆ 27 ಮಿಲಿಯನ್‌ ಲೀಟರ್‌ ಬೇಡಿಕೆಯಿದೆ. ನಾವು ಸ್ಥಳೀಯ ಮೂಲಗಳನ್ನು ಬಳಸಿಕೊಂಡು ಪೂರೈಕೆ ಮಾಡುತ್ತಿದ್ದೇವೆ. ನಮ್ಮಲ್ಲಿ 400 ಬೋರ್‌ವೆಲ್‌ಗಳಿವೆ. ಹೊಗೇನಕಲ್ ನೀರಿನ ಯೋಜನೆಯ ಎರಡನೇ ಹಂತದಲ್ಲಿ, ಹೊಸೂರಿನ ಪಾಲಿಗೆ 46 ಮಿಲಿಯನ್‌ ಲೀಟರ್‌ ನೀರು ದೊರೆಯುತ್ತದೆ. ಆಗ ನೀರಿನ ಬವಣೆ ತೀರುತ್ತದೆ" ಎಂದು ಬಾಲಸುಬ್ರಮಣ್ಯಂ ಹೇಳಿದ್ದಾರೆ. 

ಇದನ್ನು ಓದಿದ್ದೀರಾ?: ಸತತ ಎರಡನೇ ಬಾರಿಗೆ ಫ್ರಾನ್ಸ್‌ ಅಧ್ಯಕ್ಷರಾಗಿ ಇಮ್ಯಾನುಯೆಲ್ ಮ್ಯಾಕ್ರನ್; ಇತಿಹಾಸ ಸೃಷ್ಟಿ 

ಕರ್ನಾಟಕದ ಮೂಲ ಸೌಕರ್ಯಗಳನ್ನು (ನೀರು, ಉದ್ಯೋಗಿ, ರಸ್ತೆ ಸಂಪರ್ಕ ಇತ್ಯಾದಿ) ಬಳಸಿಕೊಂಡು ತಮಿಳುನಾಡಿನ ಹೊಸೂರು ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದೆ ಅನ್ನೋದು ಗೊತ್ತಿರದ ಸಂಗತಿಯೇನಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್