ಮಳೆಗಾಳಿಗೆ ಕುಸಿದು ಬಿತ್ತು ಅಂಧನಿಗೆ ಆಸರೆಯಾಗಿದ್ದ ಮನೆ; ದನದ ಕೊಟ್ಟಿಗೆಯಲ್ಲಿ ಮಲಗುತ್ತಿರುವ ಸಿದ್ದೇಶ್‌ಗೆ ಬೇಕು ಆಸರೆ

  • ಏಕಾಂಗಿ ಜೀವನ ನಡೆಸುತ್ತಿರುವ ಜೆ ಸೂರಾಪುರ ಗ್ರಾಮದ ಸಿದ್ದೇಶ್
  • ಅಂಧನಿಗೆ ನ್ಯಾಯ ದೊರಕಿಸಿಕೊಡುವಂತೆ ರೈತ ಮುಖಂಡರ ಆಗ್ರಹ

ಸಿದ್ದೇಶ್‌ ಹುಟ್ಟಿನಿಂದಲೇ ಅಂಧ. ಮನೆಯಲ್ಲಿರುವುದು ಅವರೊಬ್ಬರೇ. ಅವರಿಗೆ ಆಸರೆ ಅಂತ ಇದ್ದದ್ದು ಮನೆಯೊಂದೇ. ಸಿದ್ದೇಶ್ ಮೊನ್ನೆ ಪಟ್ಟಣಕ್ಕೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಧಾರಾಕಾರ ಗಾಳಿಮಳೆಗೆ ಆ ಮನೆ ಕುಸಿದು ಬಿದ್ದಿದೆ. ಈಗ ಸಿದ್ದೇಶ್‌ಗೆ ಆಸರೆಯೇ ಇಲ್ಲವಾಗಿದ್ದು, ಬದುಕಿನಲ್ಲಿ ಮತ್ತೊಮ್ಮೆ ಕತ್ತಲು ಕವಿದಿದೆ. ಮಳೆಗಾಳಿಯಿಂದ ರಕ್ಷಿಸಿಕೊಳ್ಳಲು ಅವರು ಪಕ್ಕದಲ್ಲಿಯೇ ಇದ್ದ ದನದ ಕೊಟ್ಟಿಗೆಯನ್ನು ಆಶ್ರಯಿಸಿದ್ದಾರೆ.   

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಬೇಲೂರು ತಾಲೂಕು, ಇಬ್ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ ಸೂರಾಪುರ ಗ್ರಾಮದಲ್ಲಿ. ಸಿದ್ದೇಶ್ ಹುಟ್ಟಿನಿಂದಲೇ ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಬದುಕಿನಲ್ಲಿ ಕೈ ಹಿಡಿದು ನಡೆಸಬೇಕಾಗಿದ್ದ ತಂದೆ, ತಾಯಿಯನ್ನೂ ಕಳೆದುಕೊಂಡಿದ್ದಾರೆ. ತಂದೆಗೆ ಇಬ್ಬರು ಪತ್ನಿಯರು; ಸಿದ್ದೇಶ್‌ ಅವರ ಮಲತಾಯಿಗೂ ಹೃದಯ ಸಂಬಂಧಿ ಕಾಯಿಲೆ ಇದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮಲತಾಯಿ ಮಗ ಬೇಲೂರಿನಲ್ಲಿ ನೆಲೆಸಿದ್ದು, ಸಿದ್ದೇಶ್‌ ಒಬ್ಬರೇ ಗ್ರಾಮದಲ್ಲಿ ವಾಸವಿದ್ದಾರೆ.

ಸಿದ್ದೇಶ್‌ ಯಗಚಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರು. ಅವರಿಗೆ 30 ಗುಂಟೆ ಜಮೀನು ಇದ್ದು, ಅದನ್ನು ಗ್ರಾಮಸ್ಥರಿಗೆ ಗುತ್ತಿಗೆ ನೀಡಿದ್ದಾರೆ. ಊರಿನವರೇ ಒಂದೊಂದು ದಿನ ಒಬ್ಬರು ಸಿದ್ದೇಶ್‌ಗೆ ಊಟ ನೀಡುತ್ತಾರೆ. ಅಲ್ಲದೇ ಯಾರದ್ದಾದರೂ ಸಹಾಯ ಪಡೆದು ಬೇಲೂರು ಪಟ್ಟಣಕ್ಕೆ ಹೋಗುವ ಸಿದ್ದೇಶ್‌ ಅವರಿವರ ನೆರವಿನಿಂದ ಬದುಕು ದೂಡುತ್ತಿದ್ದಾರೆ.

ಮನೆ ಬಿದ್ದಿರುವ ವಿಷಯ ತಿಳಿದು ಗ್ರಾಮಕ್ಕೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಹಾಗೂ ಇತರರು ಭೇಟಿ ನೀಡಿ ಮನೆ ಬಿದ್ದಿರುವುದನ್ನು ಪರಿಶೀಲನೆ ನಡೆಸಿದರು. ಸಿದ್ದೇಶ್‌ ಅವರಿಗೆ ಸಾಂತ್ವನ ಹೇಳಿ ಬಂದಿದ್ದಾರೆ. ಇದಾದ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಮನೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ಕೊಟ್ಟಿಗೆಯಲ್ಲಿ ಮಲಗುತ್ತಿದ್ದೇನೆ: ಸಿದ್ದೇಶ್

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದೇಶ್, "ನನಗೆ ಹುಟ್ಟಿನಿಂದಲೂ ಎರಡು ಕಣ್ಣುಗಳಿಲ್ಲ, ತಂದೆತಾಯಿ ಬಂಧು ಬಳಗವಿಲ್ಲ. ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ನನ್ನ ಮನೆಯ ಗೋಡೆ ಕುಸಿದು ಬಿದ್ದಿದೆ. ಈಗ ಪಕ್ಕದಲ್ಲಿಯೇ ಇದ್ದ ಕೊಟ್ಟಿಗೆಯಲ್ಲಿ ಮಲಗಿಕೊಳ್ಳುತ್ತಿದ್ದೇನೆ. ಆದರೆ, ಅಧಿಕಾರಿಗಳು ಯಾರೂ ಸಹಾಯಕ್ಕೆ ಬಂದಿಲ್ಲ" ಎಂದು ತಮ್ಮ  ಅಳಲು ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಹಾಸನ| ಸಾವಿಗೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ವಾಸವಿದ್ದ ಗುಡಿಸಲುಗಳೆಲ್ಲ ನೆಲಸಮ!

ಮನೆ ನಿರ್ಮಿಸಿ ಕೊಡದಿದ್ದರೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ: ಎಚ್ಚರಿಕೆ

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, ಈ ದಿನ.ಕಾಮ್‌ ಜತೆಗೆ ಮಾತನಾಡಿ, "ಸಿದ್ದೇಶ್‌ ತುಂಬಾ ವರ್ಷಗಳಿಂದ ಗೊತ್ತು. ಯಾವ ಕಾರಣಕ್ಕೆ ಆತ ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಂಡಿದ್ದರೋ ಗೊತ್ತಿಲ್ಲ. ಅದರಿಂದಾಗಿ ನಮ್ಮ ರೈತ ಸಂಘದವರಿಗೆ ಅವರ ಬಗ್ಗೆ ಸ್ವಲ್ಪ ಕಾಳಜಿ. ಮೊನ್ನೆ ಬೇಲೂರು ಪಟ್ಟಣದಲ್ಲಿ ಸಿಕ್ಕಿದ್ದ ವೇಳೆ, ವಿಷಯ ತಿಳಿಸಿದ. ಹಾಗಾಗಿ ಗ್ರಾಮಕ್ಕೆ ಭೇಟಿ ಮಾಡಿ ಮನೆ ಬಿದ್ದಿರುವ ಬಗ್ಗೆ ಪರಿಶೀಲಿಸಿದ್ದೇವೆ" ಎಂದು ತಿಳಿಸಿದರು.

"ಅಂಗವಿಕಲಾಗಿರುವ ಸಿದ್ದೇಶ್‌ ಅವರ ಮನೆ ಮಳೆಯಿಂದ ಬಿದ್ದಿದ್ದರೂ ತಹಶೀಲ್ದಾರ್‌, ಶಾಸಕರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಹುಟ್ಟಿನಿಂದಲೇ ಅಂಧರಾಗಿರುವ ಸಿದ್ದೇಶ್‌ ಇವರ ಜೀವನಕ್ಕೆ ಆಶ್ರಯವಾಗಿದ್ದ ಮನೆಯನ್ನು ಕಳೆದುಕೊಂಡಿದ್ದು, ಬದುಕು ಬೀದಿಗೆ ಬಿದ್ದಿದೆ. ಇಷ್ಟಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಷ್ಟಕ್ಕೆ ಸ್ಪಂದಿಸದೆ ಇರುವುದು ಬೇಸರದ ಸಂಗತಿ. ತಾಲೂಕು ಆಡಳಿತ ಸಿದ್ದೇಶ್‌ ಅವರ ನೆರವಿಗೆ ಧಾವಿಸದಿದ್ದರೆ ರೈತ ಸಂಘದ ವತಿಯಿಂದ ತಹಶೀಲ್ದಾರ್‌ ಕಚೇರಿ ಮತ್ತು ಶಾಸಕರು ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್