ಮೇಲ್ಮನೆ ಹಣಾಹಣಿ| ವಿಧಾನ ಪರಿಷತ್‌ ಚುನಾವಣೆ ಹೇಗೆ, ಬಿಜೆಪಿಗೆ ಈ ಫಲಿತಾಂಶ ಏಕೆ ಮುಖ್ಯ?

ಏಳು ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಲೆಕ್ಕಾಚಾರ ಮೂರೂ ಪಕ್ಷಗಳಲ್ಲಿ ಈಗಾಗಲೇ ಶುರುವಾಗಿದೆ. ಆದರೆ, ಯಾವೊಂದು ಪಕ್ಷವೂ ಅಭ್ಯರ್ಥಿಯ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ.
Vidhana Parishad

ವಿಧಾನಸಭೆ ಸದಸ್ಯರಿಂದ ಆಯ್ಕೆಯಾಗುವ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ಆಯೋಗ ಜೂನ್ 3ರಂದು ಮತದಾನ ನಡೆಸಲಿದೆ. ಅದೇ ದಿನ ಸಂಜೆಯ ವೇಳೆಗೆ ಫಲಿತಾಂಶ ನೀಡಲಿದೆ.

ನಾಮಪತ್ರ ಸಲ್ಲಿಕೆಗೆ ಮೇ 27 ಕೊನೆಯ ದಿನವಾಗಿದ್ದು, ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮೂರೂ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರಗಳು ಗರಿಗೆದರಿವೆ.

Eedina App

ಪರಿಷತ್‌ನ ಏಳು ಮಂದಿ ಸದಸ್ಯರ ಅವಧಿ ಜೂನ್ 14 ಕ್ಕೆ ಮುಕ್ತಾಯಗೊಳ್ಳಲಿದೆ. ಸದಸ್ಯರಾದ ಲಕ್ಷ್ಮಣ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಮ್ ವೀರಭದ್ರಪ್ಪ, ಎಚ್ ಎಂ ರಮೇಶ್ ಗೌಡ, ವೀಣಾ ಅಚ್ಚಯ್ಯ, ಕೆ ವಿ ನಾರಾಯಣ ಸ್ವಾಮಿ, ಲೆಹರ್ ಸಿಂಗ್ ಸೇರಿದಂತೆ ಏಳು ಮಂದಿ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಅದರಿಂದಾಗಿ ತೆರವಾಗಲಿರುವ ಸ್ಥಾನಗಳನ್ನು ತುಂಬುವ ಸಲುವಾಗಿ ಚುನಾವಣೆ ಘೋಷಿಸಲಾಗಿದೆ.

ಮೇಲ್ಮನೆಯ ಬಹುಮತದ ವಿಷಯದಲ್ಲಿ ಬಹಳ ನಿರ್ಣಾಯಕವಾಗಿರುವ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಲೆಕ್ಕಾಚಾರ ಮೂರೂ ಪಕ್ಷಗಳಲ್ಲಿ ಈಗಾಗಲೇ ಶುರುವಾಗಿದೆ. ಆದರೆ, ಯಾವೊಂದು ಪಕ್ಷವೂ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ. 

AV Eye Hospital ad

ಬಿಜೆಪಿ ಲೆಕ್ಕಾಚಾರ

ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಅಭ್ಯರ್ಥಿಗಳ ಪಟ್ಟಿ ಈವರೆಗೆ ಅಂತಿಮವಾಗಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಪರಿಷತ್‌ಗೆ ಅವಕಾಶ ನೀಡಲಾಗುವುದು ಎಂದು ಬಿಜೆಪಿ ಹೈಕಮಾಂಡ್ ಈಗಾಗಲೇ ಸ್ಪಷ್ಟಪಡಿಸಿದೆ. 

ಆದರೂ, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ್ ಶಹಾಪುರ್, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೋ ಮಧುಸೂದನ್ ಹಾಗೂ ಕಳೆದ ಬಾರಿ ಸೋತಿದ್ದ ಮೈ ವಿ ರವಿಶಂಕರ ಹೆಸರುಗಳು ಮುಂಚೂಣಿಯಲ್ಲಿದೆ.

ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ ಸ್ಥಾನಕ್ಕಾಗಿಯೇ ಜೆಡಿಎಸ್‌ನಿಂದ ಬಿಜೆಪಿ ಗೆ ಪಕ್ಷಾಂತರ ಮಾಡಿದ್ದರು. ಆದರೆ, 75 ವರ್ಷ ಮೀರಿದವರಿಗೆ ಬಿಜೆಪಿಯಲ್ಲಿ ಟಿಕೆಟ್‌ ನೀಡುವ ಪರಿಪಾಠ ಇಲ್ಲ. ಹೀಗಾಗಿ ಯಾರಿಗೆ ಟಿಕೆಟ್‌? ಯಾರು ಔಟ್? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ಗೆ ಎರಡು ಸ್ಥಾನ ಖಚಿತ

ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಇರುವ ಬಲಾಬಲವನ್ನು ಲೆಕ್ಕ ಹಾಕಿದರೆ ಏಳರ ಪೈಕಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತ. ಆದರೆ, ಈ ಎರಡು ಸ್ಥಾನಕ್ಕೆ ಬಿ ಎಲ್ ಶಂಕರ್, ವಿ ಆರ್ ಸುದರ್ಶನ್, ಪುಷ್ಪಾ ಅಮರನಾಥ್, ಎಸ್ ಎ ಹುಸೇನ್, ನಿವೇದಿತ್ ಆಳ್ವ, ಮನ್ಸೂರ್ ಅಲಿ ಖಾನ್, ಮಾಜಿ ಮೇಯರ್ ರಾಮಚಂದ್ರಪ್ಪ ಹೀಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.

ಇನ್ನು ಈ ಬಾರಿ ನಿವೃತ್ತಿ ಹೊಂದುತ್ತಿರುವ ಆರ್.ಬಿ. ತಿಮ್ಮಾಪುರ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ ಮತ್ತೂಂದು ಅವಧಿಗೆ ತಮ್ಮನ್ನು ಮುಂದುವರಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಪೈಕಿ ಕಾಂಗ್ರೆಸ್‌ ನಾಯಕರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‌ಗೆ ಒಂದು ಸ್ಥಾನ ಖಚಿತ

ಜೆಡಿಎಸ್‌ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿದೆ. ಈ ಸ್ಥಾನಕ್ಕೆ ಹಾಲಿ ಸದಸ್ಯ ರಮೇಶ್ ಗೌಡ ಮುಂದುವರಿಯಲು ಬಯಸಿದ್ದಾರೆ. ಈ ನಡುವೆ ಟಿ ಎ ಶರವಣ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಶರವಣ ಅವರಿಗೆ ಈ ಹಿಂದೆಯೇ ಪರಿಷತ್ ಸ್ಥಾನ ನೀಡುವುದಾಗಿ ಜೆಡಿಎಸ್‌ ವರಿಷ್ಠರು ಮಾತು ನೀಡಿದ್ದರು. ಅದರಂತೆ ಈ ಬಾರಿ ಪರಿಷತ್ ಸ್ಥಾನ ಅವರ ಪಾಲಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಆದರೆ, ಇತ್ತೀಚೆಗೆ ಮತ್ತೆ ಪಕ್ಷಕ್ಕೆ ಮರಳಿ ರಾಜ್ಯಾಧ್ಯಕ್ಷ ಹುದ್ದೆಗೆ ಏರಿರುವ ಹಿರಿಯ ನಾಯಕ ಸಿ ಎಂ ಇಬ್ರಾಹಿಂ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಜೆಡಿಎಸ್‌ ವರಿಷ್ಠರು ಯಾರಿಗೆ ಸ್ಥಾನ ನೀಡುವುದು ಎಂಬ ಅಡಕತ್ತರಿಗೆ ಸಿಲುಕಿದ್ದಾರೆ.

ಈ ಚುನಾವಣೆ ಬಿಜೆಪಿಗೆ ಏಕೆ ಮಹತ್ವದ್ದು

ವಿಧಾನಸಭೆಯಲ್ಲಿ ಪೂರ್ಣ ಬಹುಮತ ಹೊಂದಿರುವ ಆಡಳಿತ ಪಕ್ಷಕ್ಕೆ ಪರಿಷತ್‌ನಲ್ಲೂ ಬಹುಮತದ ಅಗತ್ಯ ಇದೆ. ಇಲ್ಲದಿದ್ದರೆ ಯಾವುದೇ ಕಾಯ್ದೆ ಅಥವಾ ಶಾಸನಗಳನ್ನು ಜಾರಿಗೆ ತರುವುದು ಕಷ್ಟ. ಪ್ರಸ್ತುತ ಪರಿಷತ್‌ನಲ್ಲಿ ಬಿಜೆಪಿ 32 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ 29 ಮತ್ತು ಜೆಡಿಎಸ್ 12 ಸ್ಥಾನಗಳನ್ನು ಹೊಂದಿದೆ. ಪರಿಣಾಮವಾಗಿ ಪರಿಷತ್‌ನಲ್ಲೂ ಪೂರ್ಣ ಬಹುಮತ ಪಡೆಯಲು ಬಿಜೆಪಿಗೆ ಒಂದು ಸ್ಥಾನದ ಕೊರತೆ ಇದೆ. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ ಬಿಜೆಪಿಗೆ ಮೇಲ್ಮನೆಯಲ್ಲಿ ಇನ್ನಷ್ಟು ಹಿನ್ನಡೆಯಾಗಲಿದೆ. ಹೀಗಾಗಿ ಬಿಜೆಪಿ ಪಾಲಿಗೆ ಇದು ಮಹತ್ವದ ಚುನಾವಣೆಯಾಗಿದೆ.

ಪರಿಷತ್ ಮತದಾನ ಹೇಗೆ?

ಮತದಾರರು ಮತಗಟ್ಟೆ ಅಧಿಕಾರಿ ನೀಡುವ ಪೆನ್ ಬಳಸಿ, ಮತಪತ್ರದಲ್ಲಿನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ '1' ಎಂದು ಗುರುತಿಸಬೇಕು. ಪಟ್ಟಿಯಲ್ಲಿನ ಉಳಿದ ಅಭ್ಯರ್ಥಿಗಳ ಹೆಸರಿನ ಮುಂದೆಯೂ ಸಹ 2, 3, 4 ಎಂದು ತಮ್ಮ ಪ್ರಾಶಸ್ತ್ಯವನ್ನು ಗುರುತಿಸಬಹುದು. ಅಕ್ಷರಗಳನ್ನು ಬಳಸುವಂತಿಲ್ಲ. ಮತಪತ್ರದಲ್ಲಿ ಹೆಸರು, ಸಹಿ ಅಥವಾ ಹೆಬ್ಬೆರಳ ಗುರುತು ಹಾಕಿದರೆ ಮತಪತ್ರ ಅಸಿಂಧುವಾಗುತ್ತದೆ.

ವಿಧಾನ ಪರಿಷತ್ ಚುನಾವಣೆ ಮತದಾನದ ಗೌಪ್ಯತೆಯನ್ನು ಕಾಪಾಡುವುದು ಸಹ ಮುಖ್ಯವಾಗುತ್ತದೆ. ಹೀಗಾಗಿ ಮತದಾರರ ತಮಗೆ ನೀಡಲಾದ ಮತಪತ್ರವನ್ನು ತಪ್ಪದೇ ಮತಪೆಟ್ಟಿಗೆಯಲ್ಲಿ ಹಾಕಬೇಕು. ಮತಪತ್ರವನ್ನು ಕೇಂದ್ರದಿಂದ ಹೊರಗೆ ತೆಗೆದುಕೊಂಡು ಹೋಗುವುದು ಅಪರಾಧ.

ವಿಧಾನ ಪರಿಷತ್ ಮಹತ್ವವೇನು

ಕೇಂದ್ರದ ರಾಜ್ಯಸಭೆಯಂತೆಯೇ ಗಂಭೀರ ಚರ್ಚೆಗಳು ನಡೆಯಬೇಕು ಎನ್ನುವ ಕಾರಣಕ್ಕಾಗಿಯೇ ವಿಧಾನ ಪರಿಷತ್‌ ಅನ್ನು ವಿಶಿಷ್ಟವಾಗಿ ರಚಿಸಲಾಗಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞರಾದವರು, ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗದೇ ಇರುವವನ್ನು ವಿಧಾನಸಭೆಯಿಂದ, ಸ್ಥಳೀಯ ಸಂಸ್ಥೆಗಳಿಂದ, ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ.

ಕರ್ನಾಟಕ ವಿಧಾನ ಪರಿಷತ್‌ ಸಂಖ್ಯಾ ಬಲ 75. ಈ ಪೈಕಿ 11 ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುತ್ತಾರೆ. ಸದಸ್ಯರ ಕಾರ್ಯಾವಧಿ 6 ವರ್ಷ. ಇದರಲ್ಲಿ 1/3 ನೇ ಭಾಗದಷ್ಟು ಸದಸ್ಯರು ಪ್ರತಿ 2 ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ಈ ಕಾರಣದಿಂದ, ವಿಧಾನ ಪರಿಷತನ್ನು ಸ್ಥಿರ ಅಥವಾ ಖಾಯಂ ಸಭೆ ಎಂದು ಕರೆಯಲಾಗುತ್ತದೆ.

ಅಸಲಿಗೆ ಕರ್ನಾಟಕ ಸೇರಿದಂತೆ ಭಾರತದ ಒಟ್ಟು 7 ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ರಾಜ್ಯಗಳಲ್ಲಿ ವಿಧಾನ ಪರಿಷತ್ ಅಸ್ತಿತ್ವದಲ್ಲೇ ಇಲ್ಲ. ತಮಿಳುನಾಡು ರಾಜ್ಯದಲ್ಲೂ ಪರಿಷತ್ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app