ಹುಬ್ಬಳ್ಳಿ | ಒಂಟಿ ಮಹಿಳೆಯರನ್ನು ಅಪಹರಿಸಿ ಕೊಲೆ ಮಾಡುತ್ತಿದ್ದ ವಿಕೃತ ಹಂತಕರ ಬಂಧನ

  • ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಹಂತಕರು
  • ತಲೆಗೆ ಬಲವಾಗಿ ಹೊಡೆದು ಮೂಟೆಯಲ್ಲಿ ಕಟ್ಟುತ್ತಿದ್ದರು

ಒಂಟಿ ಮಹಿಳೆಯನ್ನು ಅಪಹರಿಸಿ, ಹತ್ಯೆಗೈದು, ಮೃಹದೇಹವನ್ನು ಕತ್ತರಿಸಿ ಸುಟ್ಟುಹಾಕುತ್ತಿದ್ದ ವಿಕೃತ ಹಂತಕರ ಗುಂಪನ್ನು ಹುಬ್ಬಳ್ಳಿ-ಧಾರವಾಡ ಪೋಲಿಸರು ಬಂಧಿಸಿದ್ದಾರೆ. 

ಕಳೆದ ಮೇ 11ರಂದು ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿ ಇಂದಿರಾಬಾಯಿ ಪವಾರ (73) ಎನ್ನುವ ವೃದ್ಧೆಯನ್ನು ಅಪಹರಿಸಿ ಕಾಡನಕೊಪ್ಪ ಎಂಬ ಪ್ರದೇಶದಲ್ಲಿ ಕೊಲೆ ಮಾಡಿ ಸುಟ್ಟು ಹಾಕಲಾಗಿತ್ತು. 

ಜುಲೈ 2 ರಂದು ಇಂತದ್ದೆ ಮತ್ತೊಂದು ಪ್ರಕರಣದಲ್ಲಿ ಅದೇ ಪ್ರದೇಶದಲ್ಲಿ ದನ ಕಾಯುತ್ತಿದ್ದ ಮಹಾದೇವಿ ನೀಲಣ್ಣವರ (52) ಎನ್ನುವ ಮಹಿಳೆಯನ್ನು ಅಪಹರಿಸಿ ಕಲಘಟಗಿ ತಾಲೂಕಿನ ತಂಬೂರು ಕ್ರಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಲಾಗಿರುತ್ತದೆ. 

ಈ ಎರಡು ಪ್ರಕರಣಗಳಿಂದ ಜಿಲ್ಲೆಯಲ್ಲಿ ಆತಂಕದ ಛಾಯೆ ಆವರಿಸಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

AV Eye Hospital ad

"ಹುಬ್ಬಳ್ಳಿಯ ಈಶ್ವರ ನಗರದಲ್ಲಿ ವಾಸವಿದ್ದ ಸಾಗರ ತಾಲೂಕು ಮೂಲದ ಆರೋಪಿ ದೇವರಾಜ ಎಂಬಾತ ಒಂಟಿ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ., ಅದರಗುಂಚಿ ಎನ್ನುವ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಆರೋಪಿಗಳ ಗುಂಪಿನಿಂದ ಮಹಿಳೆಯರನ್ನು ಅಪಹರಿಸಿ, ಹತ್ಯೆಗೈಯುತ್ತಿದ್ದ" ಎಂದು ಪೊಲೀಸರು ತಿಳಿಸಿದ್ದಾರೆ. 

ಗೋಣಿ ಚೀಲದಲ್ಲಿ ಶವ ಸಾಗಾಟ 

ಮಹಿಳೆಯರನ್ನು ಅಪಹರಿಸಿ ಅವರನ್ನು ಕೊಲ್ಲಬೇಕೆಂದು ತೀರ್ಮಾನಿಸುತ್ತಿದ್ದ ಹಂತಕರು, ಒಂಟಿ ಮಹಿಳೆ ಸಿಕ್ಕ ತಕ್ಷಣ ಅವರ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡುತ್ತಿದ್ದರು. ಮಹಿಳೆ ಮೃತಪಟ್ಟ ನಂತರ ಮೃತದೇಹದ ಹೊಟ್ಟೆಯನ್ನು ಬಗೆದು, ಕೈ ಕಾಲು ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿಕೊಂಡು ಹೆದ್ದಾರಿ ಅಕ್ಕಪಕ್ಕದ ಜನನಿಬಿಡ ಪ್ರದೇಶದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಸಾಕ್ಷಿ ನಾಶ ಪಡಿಸುತ್ತಿದ್ದರು.

ಈ ಸುದ್ದಿ ಓದಿದ್ದೀರಾ? :  ಉಡುಪಿ | ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಪೋಕ್ಸೋ ಕಾಯ್ದೆ ಅಡಿ ಯುವಕ ಬಂಧನ

ಅದರಂತೆ ಮೇ 11ರಂದು ವೃದ್ಧೆಯನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿ, ಅಲ್ಲಿಂದ ಹೊರಸಾಗಿಸಿದ್ದಾರೆ. ಜುಲೈ 2ರಂದು ದನ ಮೇಯಿಸುತ್ತಿರುವ ಮಹಿಳೆಯನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿಕೊಂಡು ತಮ್ಮಲ್ಲಿದ್ದ ಮಾರುತಿ ವ್ಯಾನ್‌ನಲ್ಲಿ ಸಾಗಿಸಿ ಸುಟ್ಟುಹಾಕಿದ್ದರು. 

ಪ್ರಕರಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, “ಸಾಗರ ಮೂಲದ ದೇವರಾಜ ಮೊಗಲೇರ, ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಕಾಳಪ್ಪ ರಘುವೀರ ರೋಗಣ್ಣವರ, ಬಸವರಾಜ ಶಂಕರಪ್ಪ ವಾಳದ, ಮಹಮ್ಮದ ರಫೀಕ ಬಡಿಗೇರ, ಶಿವಾನಂದ ಕೆಂಚಣ್ಣವರ ಮತ್ತು ಗಂಗಪ್ಪ ಮರತಂಗಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ 29-30 ವರ್ಷದವರಾಗಿದ್ದು, ತಮ್ಮ ಮೋಜಿಗೆ ಹಣ ಬೇಕಾದಾಗ, ಇಂತಹ ಕೃತ್ಯ ನಡೆಸಿ, ಸಾಕ್ಷಿಗಳನ್ನು ನಾಶ ಮಾಡುತ್ತಿದ್ದರು. ಹಾಗಾಗಿ ಇವರನ್ನು ಸೆರೆಯಿಡಿಯಲು ಅತ್ಯಂತ ಜಾಗರೂಕತೆಯಿಂದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app