ಹುಬ್ಬಳ್ಳಿ | ಎನ್‌ಐಎ ದಾಳಿ ವಿರೋಧಿಸಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ; ಬಂಧನ

Hubballi
  • 15 ರಾಜ್ಯಗಳಲ್ಲಿ ದಾಳಿ ನಡೆಸಿರುವ ಎನ್ಐಎ
  • ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಚಾರ್ಚ್

ಎಸ್‌ಡಿಪಿಐ ಹಾಗೂ ಪಿಎಫ್‌ಐ ಮುಖಂಡರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿಯನ್ನು ಖಂಡಿಸಿ ಹುಬ್ಬಳ್ಳಿಯ ಕೌಲ್‌ಪೇಟೆ ಬಳಿ ರಸ್ತೆ ತಡೆದು ಪಿಎಫ್‌ಐ ಹಾಗೂ ಎಸ್‌ಡಿಪಿಐ ಪ್ರತಿಭಟನೆ ಮಾಡಿದ್ದು, ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

ಪಕ್ಷದ ಬಾವುಟ ಹಿಡಿದು ಸುಮಾರು ಮಧ್ನಾಹ 3 ಗಂಟೆಯ ವೇಳೆಯಲ್ಲಿ ‘ಗೋ ಬ್ಯಾಕ್‌ ಎನ್‌ಐಎ’ ಎಂಬ ಘೋಷಣೆ ಕೂಗುತ್ತಾ ಬೆಂಗಳೂರು ರಸ್ತೆ ಬಂದ್‌ ಮಾಡಿದ್ದಾರೆ. ಇದರಿಂದ ಸ್ವಲ್ಪ ಸಮಯ ಸಂಚಾರ ದಟ್ಟಣೆ ಉಂಟಾಯಿತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ಮಾಡುವಂತೆ ತಿಳಿಸಿದ್ದಾರೆ. ಪೊಲೀಸ್‌ ಮಾತಿಗೆ ಬೆಲೆ ಕೊಡದ ಕಾರ್ಯಕರ್ತರು ಜೋರಾಗಿ ಘೋಷಣೆ ಕೂಗಿದ್ದಾರೆ. ಸಂಚಾರ ದಟ್ಟಣೆಯಾಗುವ ಕಾರಣಕ್ಕೆ ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಹೊರಗೆ ಚದುರಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಕೊನೆಗೆ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಉತ್ತರ ಕನ್ನಡ | ತಮ್ಮ ಸಿಗಲಿಲ್ಲವೆಂದು ಅಣ್ಣನನ್ನು ಬಂಧಿಸಿದ ಎನ್‌ಐಎ

ಲಾಠಿ ಪ್ರಹಾರದಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವಾರಣ ಸೃಷ್ಟಿಯಾಗಿತ್ತು. ಬಳಿಕ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

“ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ರಸ್ತೆಯಿಂದ ಚದುರಿಸಲು ಲಘು ಲಾಠಿ ಚಾರ್ಚ್‌ ನಡೆಸಬೇಕಾಯಿತು. 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ” ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್