ಶೀಲ ಶಂಕಿಸಿ ಪತ್ನಿಗೆ ಬೆಂಕಿ ಇಟ್ಟ ಗಂಡ| 26 ದಿನಗಳ ಜೀವನ್ಮರಣ ಹೋರಾಟ, ಸಾವಿನಲ್ಲಿ ಅಂತ್ಯ

Sakaleshapura
  • ಶೀಲ ಶಂಕಿಸಿ ಪತ್ನಿಗೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನ
  • ಗ್ಯಾಸ್‌ ಲೀಕ್‌ ಎಂದು ಕತೆ ಹೆಣೆದವ ಪೊಲೀಸರ ಅತಿಥಿ

ಕೈ ಹಿಡಿದ ಹೆಂಡತಿ ಬಗ್ಗೆ ಅನುಮಾನ ಪಟ್ಟ ಗಂಡ, ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದ. ಅದೃಷ್ಟವಶಾತ್‌ ಬದುಕಿದ್ದಾಕೆ 26 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದಳು. ಆದರೆ, ಶನಿವಾರ ಸಂಜೆ ಆಕೆ ಪ್ರಾಣಬಿಟ್ಟಿದ್ದಾಳೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ವಾಸವಿದ್ದ ಭವ್ಯಾ (22) ಅಸುನೀಗಿರುವ ನತದೃಷ್ಟೆ. ಆಕೆಯ ಪತಿ ಸತೀಶ್ ಕೊಲೆ ಯತ್ನದ ಆರೋಪಿ.

ಮೂಲತಃ ಅರಕಲಗೂಡು ತಾಲೂಕಿನವರಾದ ಭವ್ಯಾ 5 ವರ್ಷಗಳ ಹಿಂದೆ ಹೆತ್ತವರ ವಿರೋಧದ ನಡುವೆಯೂ, ಸತೀಶನನ್ನು ಪ್ರೀತಿಸಿ ಮದುವೆಯಾಗಿದ್ದಳು. ಫಸ್ಟ್‌ ಪಿಯುಸಿ ಓದುತ್ತಿದ್ದ ಹುಡುಗಿ, ಕೂಲಿ ಕೆಲಸ ಮಾಡುತ್ತಿದ್ದವನನ್ನು ನಂಬಿ ಆತನೊಂದಿಗೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ವಾಸಿಸುತ್ತಿದ್ದಳು. 

ಜೀವನದ ಮೇಲೆ ಸಾಕಷ್ಟು ಕನಸು ಕಂಡಿದ್ದ ಭವ್ಯಾ ದಿನಕಳೆದಂತೆ ಸತೀಶನಿಂದ ಕಿರುಕುಳ ಅನುಭವಿಸಿದ್ದಾಳೆ. ವಿನಾಕಾರಣ ಅನುಮಾನಿಸಿ ಹಿಂಸಿಸುತ್ತಿದ್ದ ಗಂಡ,  ಆದರೂ ಪ್ರೀತಿಸಿ ಮದುವೆಯಾದ ಮೇಲೆ ಆತನೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂದು ಎಲ್ಲವನ್ನು ಸಹಿಸಿಕೊಂಡಿದ್ದಳು. ಆದರೆ ಮಾರ್ಚ್‌ 5ರ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ ಭವ್ಯಾ ಮೇಲೆ ಸತೀಶ್ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಅಂದಿನಿಂದ 26 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿದ್ದ ಭವ್ಯಾ ಈಗ ಸಾವಿನ ಮನೆ ಸೇರಿದ್ದಾಳೆ.

ಪೊಲೀಸರ ಬಳಿ ಗ್ಯಾಸ್ ಲೀಕ್ ಎಂದು ಹೇಳಿಕೆ ಕೊಡಿಸಿದ್ದ ಪತಿ ಜೈಲು ಪಾಲು

ಹೊಸತರಲ್ಲಿ ಎಲ್ಲವೂ ಚೆಂದ ಎನ್ನುವಂತೆ ಮದುವೆಯಾದಾಗ ಚೆನ್ನಾಗಿಯೇ ಇದ್ದ ಸತೀಶ್‌ ನಂತರ ತನ್ನ ಮತ್ತೊಂದು ಮುಖ ತೋರಿಸಿದ್ದಾನೆ. ಆದರೂ ಎಲ್ಲವನ್ನೂ ಹೆತ್ತ ಮಗುವಿಗಾಗಿ ಸಹಿಸಿಕೊಂಡು ಸಹ ಜೀವನ ನಡೆಸುತ್ತಿದ್ದವಳ ಮೇಲೆ ಅನುಮಾನ ಪಟ್ಟು ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಆದರೆ ಭವ್ಯಾ ಬದುಕುಳಿದಿದ್ದಳು. ಶೇ.70 ರಷ್ಟು ದೇಹ ಸುಟ್ಟು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಭವ್ಯಾಳನ್ನು ಆರೋಪಿ ಪತಿ ಗ್ಯಾಸ್‌ ಲೀಕ್‌ ಆಗಿದ್ದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಹೇಳುವಂತೆ ಹೆದರಿಸಿದ್ದಾನೆ.

ಆದರೆ ಆತನ ಮೇಲೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಗಂಡ- ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ, ಏನೂ ಅರಿಯದ 1 ವರ್ಷದ ಕೂಸಿನ ತಾಯಿ ಸತ್ತಿದ್ದಾಳೆ, ತಂದೆ ಜೈಲು ಸೇರಿದ್ದಾನೆ, ಮಗು ಅನಾಥವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್