ಹಾಸನ| ಸಾವಿಗೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ವಾಸವಿದ್ದ ಗುಡಿಸಲುಗಳೆಲ್ಲ ನೆಲಸಮ!

  • ನೆಲೆ ಇಲ್ಲದೆ ಬೀದಿಗೆ ಬಿದ್ದ 150 ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳು
  • ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಹಶೀಲ್ದಾರ್ ಹೇಳಿಕೆ

ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರು ತಮ್ಮ ನಾಯಕಿಯ ಸಾವಿಗೆ ಹೋಗಿ ಅಂತ್ಯಕ್ರಿಯೆ ಮುಗಿಸಿಕೊಂಡು ಹಿಂತಿರುಗಿ ತಾವು ವಾಸವಿದ್ದ ಜಾಗಕ್ಕೆ ಬಂದು ನೋಡಿದರೆ ಗುಡಿಸಲುಗಳೆಲ್ಲ ನೆಲಸಮವಾಗಿದ್ದವು.

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ತಾರಿಮರ ಗ್ರಾಮದಲ್ಲಿ. ಕಳೆದ 8 ವರ್ಷಗಳಿಂದ ಹಕ್ಕಿಪಿಕ್ಕಿ ಸಮುದಾಯದ ಸುಮಾರು 75 ಕುಟುಂಬಗಳು ಪುಟ್ಟ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಿದ್ದರು. ಅಲೆಮಾರಿ ಸಮುದಾಯವಾದ್ದರಿಂದ ಸಮಾಜ ಕಲ್ಯಾಣ ಇಲಾಖೆ ಗುರುತಿಸಿದ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಆದರೆ, ಸ್ಥಳದಲ್ಲಿ ಯಾರೂ ಇಲ್ಲದ ಸಮಯ ನೋಡಿ ಜೆಸಿಬಿ ಯಂತ್ರದ ಮೂಲಕ ಗುಡಿಸಲುಗಳನ್ನೆಲ್ಲ ನೆಲಸಮ ಮಾಡಲಾಗಿದೆ. ಇದರಿಂದ 150ಕ್ಕೂ ಹೆಚ್ಚು ಕುಟುಂಬಗಳು ನೆಲೆ ಇಲ್ಲದೆ ಬೀದಿಗೆ ಬಿದ್ದಿವೆ.

ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಅಂಗಡಿಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಸಮುದಾಯ ಮುಖಂಡರಾದ ಇಂದ್ರಾಣಿ ಅವರ ಅಂತ್ಯಕ್ರಿಯೆಗೆ ಎಲ್ಲರೂ ಹೋಗಿದ್ದೆವು. ಅಂತ್ಯಕ್ರಿಯೆ ಮುಗಿದ ಬಳಿಕ ಸೂತಕ ಎಂಬ ಕಾರಣಕ್ಕೆ ಮೂರು ದಿನ ಯಾರು ತಾರಿಮರ ಗ್ರಾಮಕ್ಕೆ ಹಿಂತಿರುಗಲಿಲ್ಲ. ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಹಾಸನದ ರಿಯಲ್ ಎಸ್ಟೇಟ್ ಉದ್ಯಮಿ ಫಾರೂಕ್ ಎಂಬಾತ ಜೆಸಿಬಿ ಯಂತ್ರ ಬಳಸಿ ಗುಡಿಸಲುಗಳನ್ನು ಧ್ವಂಸ ಮಾಡಿದ್ದಾರೆ, ಗುಡಿಸಲುಗಳಲ್ಲಿದ್ದ ಟಿವಿ, ಗ್ಯಾಸ್ ಸ್ಟೌವ್, ಸಿಲಿಂಡರ್ ಸೇರಿದಂತೆ ಇತ್ಯಾದಿ ಪೀಠೋಪಕರಣಗಳು ನಾಶ ಮಾಡಿದ್ದಾರೆ. ಆದ್ದರಿಂದ ತಪಿಸ್ಥತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಬೇಲೂರು ತಹಶೀಲ್ದಾರ್ ಮತ್ತು ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ” ಎಂದು ಹೇಳಿದರು. 

Image

“ಸರ್ಕಾರ  ಮಂಜೂರು ಮಾಡಿರುವ 8 ಎಕರೆ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಕಳೆದ ಎಂಟು ವರ್ಷಗಳಿಂದ ವಾಸವಿದ್ದೇವೆ. ಸರ್ಕಾರದ ವತಿಯಿಂದ ವಿದ್ಯುತ್ ಸಂಪರ್ಕ ನೀಡಲಾಗಿದೆ, ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಜತೆಗೆ ಕೆಲವು ಮೂಲ ಸೌಲಭ್ಯಗಳನ್ನು ಸಹ ಒದಗಿಸಿಕೊಡಲಾಗಿದೆ” ಎಂದು ವಿವರಿಸಿದರು.

“ಯಾವುದೇ ಸೂಚನೆ ನೀಡದೆ, ಯಾರೂ ಇಲ್ಲದ ಸಂದರ್ಭದಲ್ಲಿ ಏಕಾಏಕಿ ಗುಡಿಸಲುಗಳನ್ನು ತೆರವು ಮಾಡಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುಡಿಸಲುಗಳನ್ನು ಕಳೆದುಕೊಂಡ ಸಮುದಾಯದ ಜನರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಬೇಕು. ಜತೆಗೆ ಗುಡಿಸಲು ಕಳೆದುಕೊಂಡು ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

ಪರಿಶೀಲಿಸಿ ಮೇಲಧಿಕಾರಿಗೆ ವರದಿ ಸಲ್ಲಿಸುತ್ತೇನೆ: ತಹಶೀಲ್ದಾರ್ 

ಘಟನೆ ಕುರಿತು ಈ ದಿನ.ಕಾಮ್ ಜತೆಗೆ ಬೇಲೂರು ತಹಶೀಲ್ದಾರ್ ರಮೇಶ್ ಮಾತನಾಡಿ, “ಕಚೇರಿಯ ಕೆಲಸದ ನಿಮ್ಮಿತ್ತ ಬೆಂಗಳೂರಿಗೆ ತೆರಳಿದ್ದೇನೆ. ತಾಲೂಕು ಕಚೇರಿಗೆ ಹಕ್ಕಿಪಿಕ್ಕಿ ಸಮುದಾಯದ ಜನರು ಮನವಿ ನೀಡಿರುವುದು ಗಮನಕ್ಕೆ ಬಂದಿದೆ. ಬೇಲೂರಿಗೆ ಹೋದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು” ಎಂದು ತಿಳಿಸಿದರು.

Image

8 ಎಕರೆ ಜಮೀನು ಖರೀದಿಸಿದ್ದೇವೆ: 

ಬೇಲೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆಯಿಂದ ಹಕ್ಕಿಪಿಕ್ಕಿ ಸಮುದಾಯದ 159 ಕುಟುಂಬಗಳಿಗೆ ನಿವೇಶನ ಒದಗಿಸಲು ತಾರಿಮರ ಗ್ರಾಮದಲ್ಲಿ ಪ್ರಸ್ತುತ ಅವರು ಗುಡಿಸಲು ಹಾಕಿಕೊಂಡು ವಾಸವಿದ್ದ ಜಾಗದ ಪಕ್ಕದಲ್ಲಿಯೇ 8 ಎಕರೆ ಖರೀದಿ ಮಾಡಿದ್ದೇವೆ. ಆದರೆ, ತಾಂತ್ರಿಕ ಸಮಸ್ಯೆ ಉಂಟಾಗಿದೆ. ಸಮಾಜ ಕಲ್ಯಾಣ ಇಲಾಖೆ ನೇರವಾಗಿ ಖರೀದಿ ಮಾಡದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಖಾಂತರ ಖರೀದಿ ಮಾಡಿದ್ದರೆ ಇಷ್ಟೊಂದು ಕಾನೂನು ತೊಡಕು ಆಗುತ್ತಿರಲಿಲ್ಲ." ಎಂದರು.

ಈ ಸುದ್ದಿ ಓದಿದ್ದೀರಾ? ಅಲೆಮಾರಿ, ಬುಡಕಟ್ಟು ಸಮುದಾಯಗಳಿಗೆ ತ್ವರಿತವಾಗಿ ಗ್ರಂಥಾಲಯ ಸ್ಥಾಪಿಸಿ: ಹೈಕೋರ್ಟ್

"ವಾರದ ಹಿಂದೆ ಜಮೀನನ್ನು ಇಒ ಅವರಿಗೆ ಹಸ್ತಾಂತರ ಮಾಡಿದ್ದೇವೆ. ನಿವೇಶನ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್‌ಗೆ ಕಳುಹಿಸಿ ಶೀಘ್ರದಲ್ಲಿಯೇ ಅನುಮತಿ ಪಡೆಯಲಾಗುವುದು. ನಿವೇಶನ ಕೊಡುವುದಾಗಿ ನಿರ್ಧರಿಸಿದ್ದೆವು. ಆದರೆ, ಈಗ ಮನೆಗಳನ್ನು ನಿರ್ಮಾಣ ಮಾಡಿಕೊಡಲು ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಮೊನ್ನೆ ನಡೆದ ಘಟನೆ ಏನು ಎಂದರೆ, ಹಕ್ಕಿಪಿಕ್ಕಿ ಸಮುದಾಯ ಮಂದಿ ಏಳೆಂಟು ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಖರೀದಿ ಮಾಡಿದ ಜಾಗದ ಪಕ್ಕದ ಜಮೀನಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಿದ್ದರು. ಆದರೆ, ಅದು ಸಮಾಜ ಕಲ್ಯಾಣ ಇಲಾಖೆ ಖರೀದಿ ಮಾಡಿದ ಜಮೀನಲ್ಲ. ಗುಡಿಸಲುಗಳನ್ನು ತೆರವು ಮಾಡಿರುವ ಘಟನೆ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್