ಚಿಕ್ಕಬಳ್ಳಾಪುರ | ಜುಲೈ 2ಕ್ಕೆ ‘ಹೈದರಾಬಾದ್ ಚಲೋ’ಗೆ ಕರೆ ನೀಡಿದ ಮಾದಿಗ ದಂಡೋರ ಸಮಿತಿ

  • ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
  • ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಜಾರಿ ಮಾಡಿ: ಕೆ ಎಂ ದೇವರಾಜ್

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯು ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಆಗ್ರಹಿಸಿ ಜುಲೈ 2ಕ್ಕೆ ‘ಹೈದರಾಬಾದ್ ಚಲೋ’ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಜನರನ್ನು ಸಂಘಟಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಾದಯಾತ್ರೆ ಆರಂಭವಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿಸಿ ಬಳಿಕ, ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಭಾನುವಾರ ಕೂಡ ಜಾಥಾ ಮುಂದುವರಿದಿದ್ದು, ತಾಲ್ಲೂಕುವಾರು ಮನೆ ಮನೆ ಭೇಟಿ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಮಾದಿಗ ದಂಡೋರ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಕೆ ಎಂ ದೇವರಾಜ್ ಈ ದಿನ.ಕಾಮ್ ಜೊತೆ‌  ಮಾತನಾಡಿ, “ಪರಿಶಿಷ್ಟ ಜಾತಿಯಲ್ಲಿ ನೂರಾರು ಜಾತಿಗಳಿವೆ. ಅದರಲ್ಲಿ ಮಾದಿಗ ಸಮುದಾಯವೇ ಬಹುಸಂಖ್ಯಾತರು. ಹಾಗಾಗಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಜಾರಿ ಮಾಡಿ ಎಂಬುದು ನಮ್ಮ ಮುಖ್ಯ ಬೇಡಿಕೆ” ಎಂದು ತಿಳಿಸಿದರು.

“ಸಮುದಾಯದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಸದಾಶಿವ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.. ಈ ಆಯೋಗ ಮೂರು ವರ್ಷ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದಕ್ಕಾಗಿ ರಾಜ್ಯ ಸರ್ಕಾರ 15 ಕೋಟಿ ರೂಪಾಯಿ ಖರ್ಚು ಮಾಡಿದೆ” ಎಂದು ವಿವರಿಸಿದರು.

“ಸದಾಶಿವ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿ 15 ವರ್ಷ ಕಳೆದಿದ್ದರೂ ಅದನ್ನು ಈವರೆಗೂ ಯಾವುದೇ ಸರ್ಕಾರ ಜಾರಿ ಮಾಡಿಲ್ಲ. ಆಯೋಗದ ವರದಿ ತಪ್ಪಿದ್ದರೆ ಬಹಿರಂಗವಾಗಿ ತಿರಸ್ಕರಿಸಲಿ. ಇಲ್ಲ ಜಾರಿಮಾಡಲಿ” ಎಂದು ಒತ್ತಾಯಿಸಿದರು.

“ಪ್ರಸ್ತುತ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಜುಲೈ 2 ಮತ್ತು 3 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ಆಮಿತ್ ಶಾ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಬಿಜೆಪಿಯ ಎಲ್ಲ ಮುಖಂಡರು, ಆರ್‌ಎಸ್‌ಎಸ್‌ನ ನಾಯಕರನ್ನು ಒಳಗೊಂಡು ಹೈದರಾಬಾದ್‌ನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದೆ” ಎಂದು ತಿಳಿಸಿದರು.

“ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮೂರು ರಾಜ್ಯಗಳಲ್ಲಿ ಮಾದಿಗ ದಂಡೋರದ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಕೇಂದ್ರದಲ್ಲಿ ‘ಉಷಾ ಮೀರಾ ಕಮಿಷನ್’ ಮತ್ತು ಕರ್ನಾಟಕದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ತರುವುದು ನಮ್ಮ ಮುಖ್ಯ ಬೇಡಿಕೆ. ಜುಲೈ 2 ರಂದು ಏಕಕಾಲದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ದೊಡ್ಡ ಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿದೆ” ಎಂದು ವಿವರಿಸಿದರು.

“ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಉಪ ಚುನಾವಣೆಗಳು ನಡೆದಾಗಲೂ ಒಳಮೀಸಲಾತಿ ಜಾರಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಯಾವುದೂ ಈಡೇರಿಸಿಲ್ಲ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ದೇವಸ್ಥಾನದ ಜಮೀನು ವಿವಾದದಲ್ಲಿ ಓರ್ವನ ಕೊಲೆ; ವಾಹನಗಳಿಗೆ ಬೆಂಕಿ

“ಹಾಗಾಗಿ ಜುಲೈ 3ಕ್ಕೆ ಹೈದ್ರಾಬಾದ್ ಚಲೋ ಹಮ್ಮಿಕೊಂಡಿದ್ದು, ಮನೆ ಮನೆಗೆ ತೆರಳಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶನಿವಾರ ಚಿಕ್ಕಬಳ್ಳಾಪುರದಲ್ಲಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಭಾನುವಾರ ಜಾಗೃತಿ ಜಾಥಾವು ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಕ್ಕಬಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಭಾಗದಲ್ಲಿ ಸಂಚರಿಸಲಿದೆ. ಜತೆಗೆ ಆರು ತಾಲ್ಲೂಕುಗಳಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ” ಎಂದು ಹೇಳಿದರು.

ಜಾಗೃತಿ ಜಾಥಾದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಕೆ ಎಂ ದೇವರಾಜ್, ಜಂಟಿ ಕಾರ್ಯದರ್ಶಿ ಎಂ ವಿ ರಾಮಪ್ಪ, ಮುಖಂಡರಾದ ಡಿ ಎಂ ಮಂಜುನಾಥ್, ರಾಮಕೃಷ್ಣ, ರಾಮಾಂಜಿ, ಶಿವಣ್ಣ, ರಾಜ್ಯ ಯುವ ಘಟಕದ ಅಧ್ಯಕ್ಷ ಆಂಜಿ ಹಾಗೂ ಇತರರು ಭಾಗವಹಿಸಿದ್ದರು.

ಮಾಸ್ ಮೀಡಿಯಾ ಫೌಂಡೇಶನ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಮಾಧ್ಯಮ ಸಂಯೋಜಕ ಕಿರಣ್‌ ಕುಮಾರ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್