ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆಪಡುವವರಲ್ಲಿ ನಾನೂ ಒಬ್ಬ: ಸಚಿವ ಶ್ರೀರಾಮುಲು

Sriramulu Siddaramaiah
  • ಬಳ್ಳಾರಿಯಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಉದ್ಘಾಟಿಸಿ ಅಭಿಮತ
  • ನನಗೂ ಸಿದ್ದರಾಮಯ್ಯಗೂ ಯಾವುದೇ ದ್ವೇಷವಿಲ್ಲ: ಶ್ರೀರಾಮುಲು ಸ್ಪಷ್ಟನೆ

ಮುಖ್ಯಮಂತ್ರಿ ವಿಚಾರವಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಸಿದ್ದರಾಮಯ್ಯ ಪರ ಮಾತಾಡಿದ್ದು,  “ದೇವರು ಆರ್ಶಿವಾದ ಮಾಡಿದರೆ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ” ಎಂದಿದ್ದಾರೆ.

ಬಳ್ಳಾರಿಯಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಉದ್ಘಾಟಿಸಿದ ಅವರು, “ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ದ್ವೇಷ ಇಲ್ಲ.  ರಾಜಕೀಯ ಕಾರಣಗಳಿಗಾಗಿ ನಾವು ಪರ-ವಿರೋಧ ಮಾತಾಡುತ್ತೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ನೀವು ಇನ್ನೊಬ್ಬ ದೇವರಾಜ ಅರಸ್ ಆಗಬೇಕೆಂದು ನಾನು ಹೇಳಿದ್ದೆ” ಎಂದರು

“ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಹೇಗೆ ಗೆಲುವು ದಾಖಲಿಸಿದ್ದಾರೆ ಎಂದು ಅವರನ್ನೊಮ್ಮೆ ಕೇಳಿ ನೋಡಿ. ಅವರು ಬಹಿರಂಗವಾಗಿ ಹೇಳಲ್ಲ. ಸಮಯ ಬಂದಾಗ ನಾನೇ ಎಲ್ಲ ಹೇಳುತ್ತೇನೆ. ಹಿಂದುಳಿದ ಸಮುದಾಯವನ್ನು ನಾವು ಬಿಟ್ಟು ಕೊಡಲು ಸಿದ್ಧರಿಲ್ಲ” ಎಂದರು.

ನಾವಿಬ್ಬರು ಬಹಳಷ್ಟು ದೋಸ್ತಿಗಳು

“ಸಿದ್ದರಾಮಯ್ಯ ಮತ್ತು ನಾನು ರಾಜಕೀಯದಲ್ಲಿ ಬಹಳ ವಿರುದ್ಧ ದಿಕ್ಕಿನಲ್ಲಿ ಇರುವವರು. ಆದರೆ, ನಮ್ಮಿಬ್ಬರ ನಡುವೆ ಗಾಢ ದೋಸ್ತಿ ಇದೆ. ಪರಸ್ಪರ ಸಾಕಷ್ಟು ಆಪ್ತವಾಗಿ ಮಾತನಾಡಿಕೊಳ್ಳುತ್ತೇವೆ. ನಾವಿಬ್ಬರೂ ರಾಜಕಾರಣದಲ್ಲಿರಬೇಕು. ಒಬ್ಬರು ಇದ್ದು, ಇನ್ನೊಬ್ಬರು ಹೊರಗಡೆ ಹೋದರೆ ಹೇಗೆ?” ಎಂದರು.

ಅವಕಾಶ ಸಿಕ್ಕರೆ ನಾನೂ ಮುಖ್ಯಮಂತ್ರಿಯಾಗುವೆ

“ನಮ್ಮ ಪಕ್ಷದಲ್ಲಿ ಹಿಂದುಳಿದ ಸಮುದಾಯದಿಂದ ಅವಕಾಶ ಒದಗಿ ಬಂದರೆ ನಾನೂ ಮುಖ್ಯಮಂತ್ರಿಯಾಗುವೆ. ಶ್ರೀರಾಮುಲು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರೂ ಒಪ್ಪುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡಬೇಕು. ರಾಜಕಾರಣದ ತಂತ್ರಗಾರಿಕೆಗಳಿವು” ಎಂದರು.

“ಸಿದ್ದರಾಮಯ್ಯ ಮತ್ತು ನಾವು ಇಬ್ಬರು ಸೇರಿ ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯ ಮತ್ತು ದೇಶದಲ್ಲಿ ಹಿಂದುಳಿದ ಸಮುದಾಯಗಳು ಒಂದಾದರೆ ಕ್ರಾಂತಿ ಸಾಧ್ಯ. ಹಿಂದುಳಿದವರ ವಿಚಾರ ಬಂದಾಗ ನಾನು ಮತ್ತು ಸಿದ್ದರಾಮಯ್ಯ ಒಂದೇ” ಎಂದರು.

ಕುರುಬ ಸಮಾಜದ ವಿರೋಧಿಯಲ್ಲ

“ಶ್ರೀರಾಮುಲು ಅವರು ಕುರುಬ ಸಮಾಜ ಮತ್ತು ಸಿದ್ದರಾಮಯ್ಯ ವಿರುದ್ಧವಿದ್ದಾರೆ ಎಂದು ಯಾರೂ ಭಾವಿಸಬಾರದು. ನಾವಿಬ್ಬರು ಎರಡು ಕ್ಷೇತ್ರಗಳಲ್ಲಿ ನಿಂತು ಒಂದು ಕಡೆ ಗೆದ್ದು, ಒಂದೊಂದು ಕಡೆ ಸೋತಿದ್ದೇವೆ. ನನ್ನ ವಿಚಾರ ನಾನು ಹೇಳಲು ಯಾವ ಭಯವಿಲ್ಲ. ಹಾಗೆಯೇ ನಾನು ಯಾರಿಗೂ ಗುಲಾಮನಲ್ಲ. ಯಾರ ಕೈ ಕೆಳಗೂ ಕೆಲಸ ಮಾಡುತ್ತಿಲ್ಲ” ಎಂದು ಸೂಚ್ಯವಾಗಿ ಮಾತನಾಡಿದರು.

ನಿಮಗೆ ಏನು ಅನ್ನಿಸ್ತು?
4 ವೋಟ್