ಸರ್ಕಾರಕ್ಕೆ ಧಮ್‌ ಇದ್ದರೆ ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಲಿ: ಬ್ರಿಜೇಶ್‌ ಕಾಳಪ್ಪ

  • ನಗರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ 28 ಶಾಸಕರಿದ್ದಾರೆ
  • ಬಿಬಿಎಂಪಿ ಚುನಾವಣೆಗೆ ಬಿಜೆಪಿ ಹೆದರುವ ಸ್ಥಿತಿಗೆ ತಲುಪಿದೆ

ಬೆಂಗಳೂರಿನ ಹಿತಕ್ಕಿಂತ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಚಲಾಯಿಸುವುದೇ ಮುಖ್ಯವೆಂಬುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಪದೇಪದೆ ಮುಂದೂಡುವುದರಿಂದ ಸ್ಪಷ್ಟವಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್‌ ಕಾಳಪ್ಪ ಹೇಳಿದರು.

ಆಮ್‌ ಆದ್ಮಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಕಳೆದ ಬಿಬಿಎಂಪಿ ಚುನಾವಣೆ ವೇಳೆ ಬೆಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿ ಹಾಗೂ ಅಮಿತ್‌ ಷಾ ಅವರು ಬೆಂಗಳೂರನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಬಿಜೆಪಿಯು ಡಬಲ್‌ ಎಂಜಿನ್‌ ಕೇಳಿದ್ದರೆ, ಜನರು ದೇಶ, ರಾಜ್ಯ ಹಾಗೂ ಬಿಬಿಎಂಪಿಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ತ್ರಿಬಲ್‌ ಎಂಜಿನ್‌ ನೀಡಿದರು" ಎಂದರು.

"ಅಧಿಕಾರ ಸಿಕ್ಕ ಬಳಿಕ ಬೆಂಗಳೂರಿನ ಜನರನ್ನು ಬಿಜೆಪಿ ಮರೆತಿದೆ. ಈಗ ಬಿಬಿಎಂಪಿ ಚುನಾವಣೆಗೆ ಹೆದರುವ ಸ್ಥಿತಿಗೆ ತಲುಪಿದೆ. ಸರ್ಕಾರಕ್ಕೆ ಧಮ್‌ ಇದ್ದರೆ ಚುನಾವಣೆ ನಡೆಸಲಿ” ಎಂದು ಸವಾಲು ಹಾಕಿದರು.

“ಮೃತಪಟ್ಟ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕುಟುಂಬದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ನೌಕರಿ ನೀಡಿದ್ದಾರೆ. ಆದರೆ, ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬಲಿಯಾದವರ ಕುಟುಂಬದವರಿಗೆ ನೌಕರಿ ನೀಡಿಲ್ಲ" ಎಂದು ಹೇಳಿದರು.

"ಬೆಂಗಳೂರಿಗರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಇರುವ ತಾತ್ಸಾರವನ್ನು ಇದರಿಂದ ತಿಳಿಯಬಹುದು. ಬಿಬಿಎಂಪಿ ಚುನಾವಣೆ ನಡೆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು 243 ಜನಪ್ರತಿನಿಧಿಗಳು ಸಿಗುತ್ತಾರೆ ಎಂಬ ಯೋಚನೆ ಕೂಡ ಈ ಸರ್ಕಾರಕ್ಕಿಲ್ಲ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಬೆಂಗಳೂರಿನಲ್ಲಿ ಶನಿವಾರ ಸಾಧಾರಣ ಮಳೆ ಸಾಧ್ಯತೆ: ಹವಾಮಾನ ಇಲಾಖೆ

"ಬೆಂಗಳೂರಿನಲ್ಲಿ ನೆರೆ ಬಂದಾಗ ಕೂಡ ಯಾರನ್ನು ಪ್ರಶ್ನಿಸಬೇಕು ಎಂಬ ಗೊಂದಲವು ಬೆಂಗಳೂರಿನ ಜನರನ್ನು ಕಾಡಿತು. ಬಿಬಿಎಂಪಿ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ” ಎಂದು ಅವರು ಹೇಳಿದರು.

“ಬೆಂಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ 28 ಶಾಸಕರಿದ್ದಾರೆ. ಅವರಲ್ಲಿ ಯಾರೂ ಕೂಡ ಬಿಬಿಎಂಪಿ ಚುನಾವಣೆ ನಡೆಯಬೇಕು ಎಂದು ಗಟ್ಟಿಧ್ವನಿಯಲ್ಲಿ ಕೇಳುವ ಪ್ರಯತ್ನ ಮಾಡಿಲ್ಲ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180