
- ರಾಜಭವನ ಚಲೋ ಮುನ್ನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ಪ್ರತಿಭಟನೆ
- ಮೋದಿ ಸರ್ಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ: ಆರೋಪ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ವಿಚಾರಣೆ ಖಂಡಿಸಿ ರಾಜ್ಯ ಕಾಂಗ್ರೆಸ್ ಘಟಕ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ರಾಜಭವನ ಚಲೋ ಮುನ್ನ ಗುರುವಾರ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, “ಮೋದಿ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸೋನಿಯಾ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ” ಎಂದು ದೂರಿದರು.
“ನಮ್ಮ ನಾಯಕರನ್ನೇ ಗುರಿ ಮಾಡುತ್ತಿರುವ ಬಿಜೆಪಿ ನಾಯಕರು ಹೇಡಿಗಳು. ಧೀಮಂತ ಮಹಿಳೆಗೆ ಕಿರುಕುಳ ನೀಡುತ್ತಿದ್ದಾರೆ. ಮೋದಿ, ಅಮಿತ್ ಶಾ ಅವರ ಬೆದರಿಕೆಗೆ ನಾವು ಹೆದರುವುದಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಮುಟ್ಟಿದರೆ ಬಿಜೆಪಿ ಸರ್ಕಾರ ಚೂರು ಚೂರಾಗಲಿದೆ” ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಕಿಡಿ ಕಾರಿದರು.
“ಕಾನೂನಿಗಿಂತ ಮೇಲೆ ಸೋನಿಯಾ ಗಾಂಧಿ ಇದ್ದಾರಾ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ 12 ವರ್ಷಕ್ಕೂ ಹೆಚ್ಚು ಕಾಲ ನೆಹರು ಜೈಲಿನಲ್ಲಿದ್ದರು. ಆರ್ಎಸ್ಎಸ್, ಜನಸಂಘದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೈಲಿಗೆ ಹೋಗಿದ್ದರಾ? ಇಡಿ ತನಿಖಾ ಸಂಸ್ಥೆ ವಿಚಾರಣೆಗೆ ನಮ್ಮ ಆಕ್ಷೇಪ ಇಲ್ಲ. ರಾಜಕೀಯ ದುರುದ್ದೇಶದಿಂದ ಇಡಿ ಮೂಲಕ ಬಿಜೆಪಿಯವರು ವಿಚಾರಣೆ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಯನ್ನು ಆತಂಕಕ್ಕೆ ಗುರಿಪಡಿಸಬೇಕು ಎಂಬ ಉದ್ದೇಶವಿದೆ” ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಕೆ ಆರ್ ರಮೇಶ್ ಕುಮಾರ್ ಹರಿಹಾಯ್ದರು.
‘ನಮ್ಮ ನಾಯಕಿಗೆ ಕೇಂದ್ರ ಸರ್ಕಾರ ಕಿರುಕುಳ ಕೊಡುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನಾಶಮಾಡಲು ಇಡಿ, ಸಿಬಿಐ, ಐಟಿಯನ್ನು ಚೂ ಬಿಡಲಾಗಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿಲ್ಲ. ಆದರೂ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ” ಶಾಸಕ ಕೃಷ್ಣ ಭೈರೇಗೌಡ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮುಖ್ಯಮಂತ್ರಿ ಪಟ್ಟ | ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದ ಕಾಂಗ್ರೆಸ್: ಬಿಎಸ್ವೈ ಲೇವಡಿ
“ಗುಜರಾತ್ ಹತ್ಯಾಕಾಂಡದ ವೇಳೆ ರಾಜಧರ್ಮ ಪಾಲನೆ ಮಾಡಬೇಕು ಎಂದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ವಾಜಪೇಯಿ ಹೇಳಿದ್ದರು. ಈಗ ನರೇಂದ್ರ ಮೋದಿ ಕೈಯಲ್ಲಿ ದೇಶದ ಆಡಳಿತ ಇದೆ. ಅಮಿತ್ ಶಾ ಗಡಿಪಾರು ಆಗಿದ್ದಾರೆ. ಅವರ ಕೈಯಲ್ಲಿ ಗೃಹ ಖಾತೆ ಇದೆ” ಎಂದು ವೀರಪ್ಪ ಮೊಯಿಲಿ ಟೀಕಿಸಿದರು.
ಪ್ರತಿಭಟನೆಗೂ ಮುನ್ನವೇ ತಮ್ಮ ನಿವಾಸದ ಬಳಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, “ಗಾಂಧಿ ಪರಿವಾರದ ಮೇಲೆ ಸುಕಾಸುಮ್ಮನೇ ಪ್ರಕರಣ ದಾಖಲಿಸಲಾಗಿದೆ. ರಾಹುಲ್ ಗಾಂಧಿ ಅವರನ್ನು ಐವತ್ತು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಏನಾಯ್ತು? ಅದರ ವಿಡಿಯೋ ಬಿಡಲಿ ನೋಡೋಣ. ಸುಳ್ಳು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕರು, ಮಾಜಿ ಸಚಿವರು, ಮುಖಂಡರು ಸೇರದಂತೆ ಇತರರು ಭಾಗವಹಿಸಿದ್ದರು.