ನಮ್ಮ ಅವಧಿಯಲ್ಲಿ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನೂ ಬಂಧಿಸಲಿ: ಡಿ ಕೆ ಶಿವಕುಮಾರ್‌

D K shivakumar
  • ಡಿವಿಸಿಯಿಂದ ತನಿಖೆಯಾಗುವ ವಿಚಾರ ಇದಲ್ಲ
  • ಮುಖ್ಯಮಂತ್ರಿಗಳು ಇದರ ಗಂಭೀರತೆ ಅರಿಯಲಿ

ನಮ್ಮ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನೂ ಬಂಧಿಸಲಿ. ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಮಂತ್ರಿಗಳು ಅದಕ್ಕೆ ಅವಕಾಶ ನೀಡಿದ್ದಾರೋ ನನಗೆ ಗೊತ್ತಿಲ್ಲ. ಇದು ಗಂಭೀರ ಅಪರಾಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದರು.

ಸದಾಶಿವನಗರ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಚುನಾವಣಾ ಆಯೋಗವು ಈ ವಿಚಾರವನ್ನು ಡಿವಿಸಿಗೆ (ವಿಭಾಗೀಯ ಅಧಿಕಾರಿ) ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ನಾವು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ” ಎಂದರು.

Eedina App

“ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಗೌರವ್ ಗುಪ್ತಾ ಏಕಾಏಕಿ ಹಿಂಪಡೆದಿದ್ದಾರೆ. ಆದರೆ, ಈಗಾಗಲೇ ಈ ಸಂಸ್ಥೆಯ ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ವರದಿ ಮಾಧ್ಯಮಗಳಲ್ಲಿ ನೋಡಿದೆ” ಎಂದರು.

“ಚಿಲುಮೆ ಸಂಸ್ಥೆಯ ಕಾರ್ಯವ್ಯಾಪ್ತಿ ಏನಿದೆ ಎಂದು ನಮ್ಮ ಬಳಿ ಮಾಹಿತಿ ಇದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಅವರು ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್‌ನಲ್ಲಿ ಕಾರ್ಪೊರೇಟರ್ ಬಳಿ ₹1 ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಕೂಡ ನಮ್ಮದೇ ಆದ ತನಿಖೆ ಮಾಡಿದ್ದೇವೆ” ಎಂದು ವಿವರಿಸಿದರು.

AV Eye Hospital ad

ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಉಡಾಫೆಯಾಗಿ ಮಾತನಾಡುವುದು ಸರಿಯಲ್ಲ. ಅವರೇ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರಬೇಕು. ಮುಖ್ಯಮಂತ್ರಿಗಳೇ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ, ಅನುಮತಿ ಆದೇಶ ನೀಡಿದ್ದಾರೆ. ಆದರೂ ಆಯೋಗದವರು ಯಾಕೆ ಕ್ರಮ ಕೈಗೊಂಡಿಲ್ಲ” ಎಂದು ಪ್ರಶ್ನಿಸಿದರು.

“ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ಚಿಲುಮೆ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ. ಆ ಗುರುತಿನ ಚೀಟಿ ಮಾಡಿದವರು ಯಾರು? ಈ ಗುರುತಿನ ಚೀಟಿ ವಿತರಣೆ ಮಾಡಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಧಿಕಾರಗಳ ವಿರುದ್ಧವೂ ಎಫ್ಐಆರ್ ಆಗಬೇಕು. ಸರ್ಕಾರಿ ಹುದ್ದೆಯನ್ನು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ಈ ವಿಚಾರದಿಂದಲೂ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಮುಖ್ಯಮಂತ್ರಿಗಳು ಇದರ ಗಂಭೀರತೆ ಅರಿಯಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಕೆಜಿಎಫ್ ಚಿತ್ರದ ರಾಕಿ ಭಾಯ್‌ ಕತೆಯಲ್ಲ: ಸಿದ್ದರಾಮಯ್ಯ ಆಕ್ರೋಶ

“26 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, 14 ಲಕ್ಷ ಹೆಸರನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಅವರೇ ಹೇಳಿದ್ದಾರೆ. ಯಾರ ಹೆಸರು ಕೈ ಬಿಟ್ಟು, ಯಾರ ಹೆಸರು ಸೇರಿಸಿದ್ದಾರೆ? ಪ್ರತಿ ಕ್ಷೇತ್ರದಲ್ಲೂ ಹೀಗೆ ಮಾಡಲಾಗಿದೆ. ಹೀಗಾಗಿ ಕಾರ್ಯಕರ್ತರು ಬಹಳ ಜಾಗರೂಕರಾಗಿ ಈ ಬಗ್ಗೆ ಗಮನ ಹರಿಸಬೇಕು. ಪ್ರತಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಇರುವ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು, ಅಕ್ರಮವಾಗಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ” ಎಂದು ಆರೋಪಿಸಿದರು.

“24 ಗಂಟೆಗಳ ಒಳಗಾಗಿ ನಕಲಿ ಬಿಎಲ್ಒ ಗುರುತಿನ ಚೀಟಿ ವಿತರಣೆ ಮಾಡಿದವರು, ಮತದಾರರ ಮಾಹಿತಿ ಕಲೆಹಾಕಿ ಅಕ್ರಮ ಎಸಗಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ಚುನಾವಣಾ ಆಯೋಗವೇ ಇದರಲ್ಲಿ ಭಾಗಿಯಾಗಿದೆ. ಈ ವಿಚಾರವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ದೆಹಲಿ ಚುನಾವಣಾ ಆಯೋಗದವರೆಗೂ ತೆಗೆದುಕೊಂಡು ಹೋಗುತ್ತೇವೆ” ಎಂದು ಎಚ್ಚರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app