ಮುರುಘಾ ಮಠದಲ್ಲಿ ಮಕ್ಕಳ ಅಕ್ರಮ ದತ್ತು; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ 'ಒಡನಾಡಿ' ಆಗ್ರಹ

Murugha matt
  • ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು
  • ವಾರದೊಳಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ಆಯೋಗ

ಮಕ್ಕಳ ಮೇಲಿನ ಲೈಂಗಿಕ ಹಗರಣದ ಕೇಂದ್ರಬಿಂದುವಾದ ಮುರುಘಾ ಮಠದಲ್ಲಿ ಇದೀಗ ಮಕ್ಕಳನ್ನು ಅಕ್ರಮವಾಗಿ ದತ್ತು ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. 

ಈ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದು, ಮುರುಘಾ ಮಠದ 'ಮಡಿಲು' ಕಾರ್ಯಕ್ರಮದಲ್ಲಿ ಬೆಳೆದ ಎರಡು ಮಕ್ಕಳನ್ನು ಅಕ್ರಮವಾಗಿ ದತ್ತು ನಿಡಲಾಗಿದೆ. ಮತ್ತೊಂದು ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಒಡನಾಡಿ ಸಂಸ್ಥೆ ಒತ್ತಾಯಿಸಿದೆ.

Eedina App

ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕೈಗೊಂಡ ಕ್ರಮದ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ 'ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ' 'ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ' ನಿರ್ದೇಶಕರಿಗೆ ನ.9ರಂದು ಪತ್ರ ಬರೆದಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರದಲ್ಲಿ ಏನಿದೆ?

AV Eye Hospital ad

ಚಿತ್ರದುರ್ಗ ಮುರುಘಾ ಮಠದಲ್ಲಿ 'ಮಡಿಲು' ಎಂಬ ದತ್ತು ಕಾರ್ಯಕ್ರಮದಲ್ಲಿ ಬೆಳೆದ ಮಗು ವಿಶ್ವಬಂಧುವನ್ನು ಬೆಂಕಿಕೆರೆ ಸುವರ್ಣ ಎಂಬುವವರು ಅಕ್ರಮವಾಗಿ ದತ್ತು ಪಡೆದಿದ್ದಾರೆ ಎಂದು ಚಿತ್ರದುರ್ಗದ ಸಾಮಾಜಿಕ ಕಾರ್ಯಕರ್ತರಾದ ಡಾ. ಕುಮಾರ್ ಮಧುಕರ್ ಎಂಬುವವರು ಅರ್ಜಿದಾರರಿಗೆ (ಒಡನಾಡಿ) ಮಾಹಿತಿ ನೀಡಿರುತ್ತಾರೆ. 

ಮುರುಘಾ ಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಣಿ ಎಂಬ ಬಾಲಕಿಯು ಮೃತಪಟ್ಟಿದ್ದಾಳೆ. ಮಕ್ಕಳ ಪಾಲನಾ ಸಂಸ್ಥೆಯ ಪರಿಶೀಲನಾತ್ಮಕ ಭೇಟಿಯು ಸಮಗ್ರವಾಗಿ ನಡೆದಿಲ್ಲ. ಆದ್ದರಿಂದ, ಮೃತ ಮಗುವಿನ ವಿಚಾರವಾಗಿ ಸಮಗ್ರ ತನಿಖೆಯಾಗಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.

ಇದೇ ಮಠದಲ್ಲಿದ್ದ 6 ವರ್ಷದ ಹೆಣ್ಣು ಮಗು ಚಿಗುರು ದತ್ತು ಪ್ರಕ್ರಿಯೆಗೆ ಒಳಪಟ್ಟಿಲ್ಲ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ, ಚಿತ್ರದುರ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕರ್ತವ್ಯಲೋಪ ಉಂಟುಮಾಡಿರುವುದು ಕಂಡು ಬಂದಿದೆ ಎಂದು ದೂರು ನೀಡಿದ್ದಾರೆ.

ಶೋಷಣೆಗೆ ಒಳಪಟ್ಟಿದ್ದಾರೆ ಎನ್ನಲಾದ ಹಲವಾರು ಸಂತ್ರಸ್ತ ಬಾಲಕಿಯರನ್ನು ತರಾತುರಿಯಲ್ಲಿ ಅವರ ಶಾಲಾ ಆವರಣದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮಕ್ಕಳನ್ನು ಬೇರೆಬೇರೆ ಜಿಲ್ಲೆಗಳಿಗೆ ರವಾನಿಸಿರುವುದು ಅನುಮಾನಾಸ್ಪದವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಒಡನಾಡಿ ಸಂಸ್ಥೆ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುತ್ತಾರೆ. 

ಈ ಸುದ್ದಿ ಓದಿದ್ದೀರಾ? ಹತ್ತು ದಿನದಲ್ಲಿ ಡಿಕೆಶಿ ಎದುರಿಸಬೇಕು ಸಾಲು ಸಾಲು ವಿಚಾರಣೆ; ಪಕ್ಷ ಸಂಘಟನೆಗೆ ಸಮಯಾವಕಾಶ ನೀಡದ ತನಿಖಾ ಸಂಸ್ಥೆಗಳು

ಒಡನಾಡಿ ಸೇವಾ ಸಮಿತಿಯವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಮೃತ ಬಾಲಕಿ ರಾಣಿ, ಬಾಲಕ ವಿಶ್ವಬಂಧು ಹಾಗೂ 6 ವರ್ಷದ ಹೆಣ್ಣು ಮಗು ಚಿಗುರು. ಈ ಮೂವರು ಅಪ್ರಾಪ್ತ ಮಕ್ಕಳ ವಿಷಯವೂ ಸಹ ನಮ್ಮ ಗಮನಕ್ಕೆ ಬಂದಿದೆ ಎಂದು ಆಯೋಗ ತನ್ನ ಪತ್ರದಲ್ಲಿ ತಿಳಿಸಿದೆ.

ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಆಯೋಗ ಒತ್ತಾಯಿಸಿದೆ.

ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿರುವ ಆಯೋಗ, ಇಂತಹ ಘಟನೆಗಳು ಸಂಭವಿಸಲು ಕಾರಣಕರ್ತರಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸೂಕ್ತ ವಿಚಾರಣೆಗೆ ಒಳಪಡಿಸುವುದು ತುಂಬಾ ಅಗತ್ಯ ಎಂದು ಹೇಳಿದೆ.

ಒಡನಾಡಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ, ಮಕ್ಕಳ ಪಾಲನೆ, ಪೋಷಣೆ ಹಾಗೂ ಸುರಕ್ಷತೆಗೆ ಇರುವ ಕಾನೂನುಗಳ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಮ್ಮ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದ್ದು, ನಿಯಮಾನುಸಾರ ವಿಚಾರಣೆಗೆ ಒಳಪಡಿಸಿ, ಕ್ರಮ ಕೈಗೊಳ್ಳಬೇಕು. ಏಳು ದಿನಗಳ ಒಳಗಾಗಿ ಆಯೋಗಕ್ಕೆ ವರದಿ ಕಳಿಸಿಕೊಡಬೇಕು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app