ಅಪ್ರಬುದ್ಧ ರಾಜಕಾರಣ: ಮುಗಿಯದ ಮಹದಾಯಿ ರಗಳೆ; ಕೈಗೂಡದ ಕಳಸ-ಬಂಡೂರಿ ಕನಸು

ವಾಸ್ತವದಲ್ಲಿ ಕಳಸ ಮತ್ತು ಬಂಡೂರಿ ಮಹದಾಯಿ ನದಿಯನ್ನು ಕೂಡುವ ಎರಡು ನಾಲೆಗಳು ಮಾತ್ರ. ಮೈಲಿಗಟ್ಟಲೆ ದೂರವಿರುವ ಈ ಎರಡು ಹಳ್ಳಗಳಿಗೆ ಪ್ರತ್ಯೇಕವಾಗಿ ಅಡ್ಡಗಟ್ಟೆಗಳನ್ನು ಕಟ್ಟಿ, ಅವುಗಳ ಸಂಗ್ರಹಿತ ನೀರನ್ನು ಸುತ್ತಮುತ್ತಲ ಒಣಭೂಮಿಗೆ ಹರಿಸಿ ಸ್ಥಳೀಯರ ಬದುಕಿನಲ್ಲೊಂದು ಶಾಶ್ವತ ಭರವಸೆ ಮೂಡಿಸುವುದು “ಕಳಸ-ಬಂಡೂರಿ” ಮೂಲ ಯೋಜನೆಯ ಉದ್ದೇಶವಾಗಿತ್ತು. ಇದಕ್ಕೆ ಗುದ್ದಲಿ ಪೂಜೆ ಆಗಿದ್ದು 1963 ಅಕ್ಟೋಬರ್ 2 ತಾರೀಕಿನಂದು. ಅಂದರೆ ಅಧಿಕೃತವಾಗಿ ಇಲ್ಲಿಗೆ 59 ವರ್ಷಗಳ ಹಿಂದಿನ ಮಾತು. ಆದರೆ, ಈ ಕನಸು ಶುರುವಾಗಿ 65 ವರ್ಷಗಳೇ ಗತಿಸಿವೆ.
KALASA-BANDURI endless struggle

ಮತ್ತೊಮ್ಮೆ ಮಹದಾಯಿ ವಿವಾದಕ್ಕೆ ಜೀವ ಬಂದಿದೆ. ಹಲತರಾ ನಾಲಾ ಬಳಿ ಕರ್ನಾಟಕ ಕಾಮಗಾರಿ ಆರಂಭಿಸಿರುವುದರ ವಿರುದ್ಧ ಗೋವಾದ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಪಣಜಿಯಲ್ಲಿ ತಕರಾರು ತೆಗೆದಿದ್ದಾರೆ. "ವಿವಾದ ಇನ್ನೂ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ ಕರ್ನಾಟಕ ದುರಂಕಾರದಿಂದ ವರ್ತಿಸುತ್ತಿದೆ" ಎಂದು ಆರೋಪಿಸಿದ್ದಾರೆ.

ಇದಕ್ಕೆ ಕೆಲವೇ ದಿನಗಳ ಮುಂಚೆ ಕರ್ನಾಟಕ ಸರ್ಕಾರ ಮಹದಾಯಿ ನೀರನ್ನು ಕಳಸ-ಬಂಡೂರಿಗೆ ಏತ ನೀರಾವರಿ ಮೂಲಕ ಹರಿಸುವುದಾಗಿ ಹೇಳಿತ್ತು.

ಇದಕ್ಕೂ ಕೆಲವು ದಿನಗಳ ಮುಂಚೆ  ಕಳಸ-ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷರಾದ ವಿಜಯ ಕುಲಕರ್ಣಿ “ಸರ್ಕಾರ ಸಮರ್ಪಕವಾಗಿ ನೀರು ಹರಿಸುವವರೆಗೆ ನೀರಿನ ಕರ ಪಾವತಿಸಬೇಡಿ” ಎಂದು ಆ ಪ್ರದೇಶದ ರೈತರಿಗೆ ಕರನಿರಾಕಣೆಯ ಕರೆ ನೀಡಿದ್ದರು. ಸರ್ಕಾರದ ನೆನಪು ತಾಜಾ ಆಗಲು ಈ ಘೋಷಣೆ ಮೂಲವಾಗಿತ್ತು.

ಇವೆಲ್ಲ ಮಹದಾಯಿ ಕುರಿತು ಕೇವಲ ಒಂದೆರಡು ತಿಂಗಳೊಳಗಿನ ಬೆಳವಣಿಗೆಗಳು. ಹೀಗೇ ಹಿಮ್ಮುಖವಾಗಿ ಸಾಗುತ್ತಾ ಹೋದರೆ ಓದುಗ ಹೈರಾಣಾಗಿ ಬಿಡುವಷ್ಟು ಸುದ್ದಿಗಳ ಕಂತೆ ನಮ್ಮ ಮುಂದೆ ಚೆಲ್ಲಿಕೊಳ್ಳುತ್ತದೆ. ಆರು ತಿಂಗಳಿಗೊಂದು ಹೊಸ ವಿವಾದ, ಮೂರು ತಿಂಗಳಿಗೊಂದು ಹೇಳಿಕೆ, ಪ್ರತಿ ಹೇಳಿಕೆಗಳ ಸರಣಿ ನಮ್ಮನ್ನು ಕಂಗಾಲಾಗಿಸುತ್ತವೆ. ಇದು ಈ ಶತಮಾನದಲ್ಲಿಯಾದರೂ ಮುಗಿಯಬಹುದೇ ಎಂಬ ಸಂದೇಹ ಹುಟ್ಟಿಸುತ್ತವೆ.

ಮರುಭೂಮಿಯ ಮಳೆ ಮತ್ತು ಮಹದಾಯಿ ವಿವಾದ ಬಹುಶಃ ಅವಳಿ-ಜವಳಿಗಳು ಅನಿಸುತ್ತದೆ. ಹೇಗೆಂದರೆ, ಮರುಭೂಮಿಗಳಲ್ಲೂ ಮಳೆಯಾಗುತ್ತದೆ. ಹಠಾತ್ತಾಗಿ ಪ್ರವಾಹಗಳು ಉಕ್ಕಿ ಹರಿಯುತ್ತವೆ. ಅಂದರೆ, ನಮ್ಮಲ್ಲಿ ಆದಂತೆ ನೈರುತ್ಯ ಮುಂಗಾರು, ಪೂರ್ವ ಮುಂಗಾರು, ಹಿಂಗಾರು ಹೀಗೆ ನಿರ್ದಿಷ್ಟ ಕಾಲಮಾನವನ್ನು ಅನುಸರಿಸಿ ಮಳೆ ಆಗುವುದಿಲ್ಲ. 

ಆದರೆ, ಅಲ್ಲಿ ಎಷ್ಟು ಅನಿರೀಕ್ಷಿತವಾಗಿ ಮಳೆಯಾಗುತ್ತದೋ ಅಷ್ಟೇ ವೇಗವಾಗಿ ಪ್ರವಾಹ ಬಸಿದು ಖಾಲಿಯೂ ಆಗುತ್ತದೆ. ಆ ಮಳೆ, ಆ ಪ್ರವಾಹ ಮತ್ತೆ ಯಾವಾಗ ಬರಬಹುದು ಎಂದು ಊಹಿಸುವುದು ಅಸಾಧ್ಯ. ಅದು ಯಾವಾಗ ಬೇಕಾದರೂ ಆಗಬಹುದು. ನಾಳೆಯೂ ಆಗಬಹುದು ಅಥವಾ ಇನ್ನೈದು ವರ್ಷ ಆಗದೆಯೂ ಇರಬಹುದು. ಕರ್ನಾಟಕದಲ್ಲಿ ಈ ಮರುಭೂಮಿಯ ವಿಲಕ್ಷಣ ನಡತೆಯೊಂದಿಗೆ ಹೋಲಿಸಬಹುದಾದ ಒಂದೇ ಒಂದು ವಿಷಯವಿದ್ದರೆ ಅದು “ಮಹದಾಯಿ ನದಿ ಯೋಜನೆ ಮತ್ತು ಕಳಸ-ಬಂಡೂರಿ ಅಣೆಕಟ್ಟೆ”ಯ ಕನಸು.  

ಯಾರೋ ರಾಜಕಾರಣಿಗೆ ರಾಜಕೀಯವಾಗಿ ಏನೋ ಆಗಬೇಕಾಗಿದ್ದಾಗ ಅಂತಹವರು ಅವರ ಕಾಯನ್ನು ಹಣ್ಣು ಮಾಡಿಕೊಳ್ಳಲೆಂದೋ, ಇಲ್ಲವೇ ಇನ್ನಾವುದೋ ವಿವಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲೆಂದೋ “ಮಹದಾಯಿ” ಸುದ್ದಿಗೆ ಬರುತ್ತಾಳೆ. ಇಲ್ಲವೇ ಕಾದೂ ಕಾದೂ ರೋಸಿಹೋದ ರೈತರು ಸರ್ಕಾರವನ್ನು ಎಚ್ಚರಿಸಲೆಂದು ಒಮ್ಮೆ ಗುಟುರು ಹಾಕಿದಾಗ ಮತ್ತೆ “ಮಹದಾಯಿ” ಸುದ್ದಿಗೆ ಬರುತ್ತಾಳೆ. ಒಂದೋ ಎರಡೋ ದಿನ ಚಲಾವಣೆಯಲ್ಲಿದ್ದು, ಮರುಭೂಮಿಯ ಮಳೆ-ಪ್ರವಾಹದಂತೆ ಮತ್ತೆ ಕಣ್ಮರೆಯಾಗುತ್ತಾಳೆ.  

ಆದರೆ, ನಿಜವಾದ ಅರ್ಥದಲ್ಲಿ ಇವೆರಡೂ ಒಂದೇ ಯೋಜನೆ ಎಂಬಂತೆ ಬಿಂಬಿಸಿ, ಜನತೆಯನ್ನು ದಿಕ್ಕು ತಪ್ಪಿಸಲಾಗಿದೆ. 

ವಾಸ್ತವದಲ್ಲಿ ಕಳಸ ಮತ್ತು ಬಂಡೂರಿ ಮಹದಾಯಿ ನದಿಯನ್ನು ಕೂಡುವ ಎರಡು ನಾಲೆಗಳು ಮಾತ್ರ. ಮೈಲಿಗಟ್ಟಲೆ ದೂರವಿರುವ ಈ ಎರಡು ಹಳ್ಳಗಳಿಗೆ ಪ್ರತ್ಯೇಕವಾಗಿ ಅಡ್ಡಗಟ್ಟೆಗಳನ್ನು ಕಟ್ಟಿ, ಅವುಗಳ ಸಂಗ್ರಹಿತ ನೀರನ್ನು ಸುತ್ತಮುತ್ತಲ ಒಣ ಭೂಮಿಗಳಿಗೆ ಹರಿಸಿ ಸ್ಥಳೀಯರ ಬದುಕಿನಲ್ಲೊಂದು ಶಾಶ್ವತ ಭರವಸೆ ಮೂಡಿಸುವುದು “ಕಳಸ-ಬಂಡೂರಿ” ಮೂಲ ಯೋಜನೆಯ ಉದ್ದೇಶವಾಗಿತ್ತು. ಇದಕ್ಕೆ ಗುದ್ದಲಿ ಪೂಜೆ ಆಗಿದ್ದು 1963 ಅಕ್ಟೋಬರ್ 2 ತಾರೀಕಿನಂದು. ಅಂದರೆ ಅಧಿಕೃತವಾಗಿ ಇಲ್ಲಿಗೆ 59 ವರ್ಷಗಳ ಹಿಂದಿನ ಮಾತು. ಆದರೆ, ಈ ಕನಸು ಶುರುವಾಗಿ 65 ವರ್ಷಗಳೇ ಗತಿಸಿವೆ.

ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿನ ಭೀಮಗಡ ಸಮೀಪದ 30 ಚಿಲುಮೆಗಳಿಂದ ರೂಪಗೊಳ್ಳುವ ಈ ನದಿಯ ಒಟ್ಟಾರೆ ಜಲಾನಯನ ಪ್ರದೇಶ 2,032 ಚ.ಕಿ.ಮೀ.ಗಳು. ಇದರಲ್ಲಿ 375 ಚ.ಕಿ.ಮೀ ಕರ್ನಾಟಕ, 77 ಚ.ಕಿ.ಮೀ ಮಹಾರಾಷ್ಟ್ರ ಮತ್ತು 1,580 ಚ.ಕಿ.ಮೀ ಗೋವಾ ರಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತವೆ. ಇದರಲ್ಲಿ ಹರಿವಿನ ದೂರ ಕರ್ನಾಟಕದಲ್ಲಿ 35 ಕಿ.ಮೀ, ಒಂದು ಕಿ.ಮೀ ಮಹಾರಾಷ್ಟ್ರ ಮತ್ತು 45 ಕಿ.ಮೀ ಗೋವಾದಲ್ಲಿ ಸಾಗುತ್ತದೆ. ಕರ್ನಾಟಕದ ಗಡಿ ದಾಟುತ್ತಿದ್ದಂತೆ ಇದು ತನ್ನ “ಮಹದಾಯಿ” ಹೆಸರನ್ನು ಹಿಂದೆ ಬಿಟ್ಟು, ಮುಂದೆ "ಮಾಂಡೋವಿ" ಆಗುತ್ತದೆ. ಒಂದು ಕಿ.ಮೀ ದೂರ ಹರಿವಿನ ಮಹಾರಾಷ್ಟ್ರದಲ್ಲಿಯೂ ಇದಕ್ಕೊಂದು ಹೆಸರಿದೆ. ಅದರ ಹೆಸರು “ಗೋಮತಿ”

ಈ ಮಹದಾಯಿ ಎಂಬ 30 ಚಿಲುಮೆಗಳ ಶಿಶುವಿಗೆ ಕರ್ನಾಟಕದ ಕಳಸ, ಬಂಡೂರಿ, ಹರತಾಳ, ಗುರ್ಕಿ, ಸುರ್ಲ ಮತ್ತು ಪೋಟ್ಲ ಎಂಬ ಆರು ಹಳ್ಳಗಳು ಕೂಡಿ, ನದಿಯ ರೂಪ ಕೊಡುತ್ತವೆ. ಈ ಮಹದಾಯಿ ಹನಿಹನಿ ಕೂಡಿದರೆ ಹಳ್ಳವಾಗಿ, ಹಳ್ಳ ಹಳ್ಳ ಕೂಡಿ ನದಿಯಾಗಿ ಪ್ರಕೃತಿ ನಿಯಮವನ್ನು ಸಾಕಾರವಾಗಿಸುತ್ತವೆ.  ಈ ಮಹದಾಯಿ ಮೂರು ರಾಜ್ಯಗಳಲ್ಲಿ, ಮೂರು ಹೆಸರುಗಳಲ್ಲಿ ಹರಿದು, ಅಂತಿಮವಾಗಿ ಅರಬ್ಬಿ ಸಮುದ್ರ ಸೇರಿ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ.

ಇಲ್ಲಿನ ಒಟ್ಟು ಜಲರಾಶಿ 210 ಟಿಎಂಸಿ; ಇದರಲ್ಲಿ ಕರ್ನಾಟಕದ ಪಾಲು 57 ಟಿಎಂಸಿ. ಇದರಲ್ಲಿ ಬಹುತೇಕ ಸಿಹಿನೀರು ಹರಿದು ಸಮುದ್ರ ಸೇರಿ ಉಪ್ಪು ನೀರಾಗುತ್ತದೆ. ಹೀಗಾಗಿ, ಈಗಿರುವ ಯೋಜನೆಯ ಪ್ರಕಾರ ಮಹದಾಯಿಗೆ 11 ಸರಣಿ ಡ್ಯಾಮುಗಳನ್ನು  ಕಟ್ಟಿ 600 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮತ್ತು ಧಾರವಾಡ, ಬೆಳಗಾವಿ, ಬಾಗಲಕೋಟೆ ಹಾಗೂ ಗದಗ ನಗರಗಳಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಿದೆ.

ಆದರೆ, ಕೇವಲ ಸಣ್ಣ ನಿರಾವರಿಯನ್ನು ಸೃಷ್ಟಿಸುವ ಉದ್ದೇಶ ಉಳ್ಳ ಯೋಜನೆಗಳಾದ ಕಳಸ ಮತ್ತು ಬಂಡೂರಿಗಳು ಈ ಮಹದಾಯಿಂದ ಬಹುಪಾಲು ಪ್ರತ್ಯೇಕ ಯೋಜನೆಗಳು. ಇವೆರಡೂ ರಾಜ್ಯದ ಆಸ್ತಿಗಳು. ಮಹದಾಯಿ ಅಂತರರಾಜ್ಯ ಆಸ್ತಿ.

ಈ ಅಂತರರಾಜ್ಯ ನದಿ ವಿವಾದದ ಕಾರಣದಿಂದಾಗಿ ಈಗ ಇಡೀ ಯೋಜನೆಯನ್ನು ಬದಲಿಸಿ ಏತ ನಿರಾವರಿ ತಂತ್ರದ ಮೂಲಕ 300 ಅಡಿ ತಗ್ಗು ಪ್ರದೇಶದಿಂದ ನೀರನ್ನು ಮತ್ತೆ ಅದೇ ನೀರು ಹರಿದು ಹೋಗಿದ್ದ ಹಳ್ಳಗಳಿಗೆ ಹಿಂತಿರುಗಿ ಹರಿಸುವ ಯೋಜನೆಯೊಂದನ್ನು ಸರ್ಕಾರ ಒಪ್ಪಿಕೊಂಡು ಮುಂದುವರೆದಿದೆ.

ಈ ಸುದ್ದಿ ಓದಿದ್ದೀರಾ?: ನೀರಾವರಿ ಹೋರಾಟಗಾರ ವಿಜಯ ಕುಲಕರ್ಣಿ ಸಂದರ್ಶನ: ಕಳಸ ಬಂಡೂರಿ ಯೋಜನೆ, ಮಹದಾಯಿ ಯೋಜನೆ ಬೇರೆ ಬೇರೆ

ಇದರ ಸಾಧಕ ಬಾಧಕಗಳ ಬಗ್ಗೆ ಕಳಸ-ಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷರಾದ ವಿಜಯ ಕುಲಕರ್ಣಿ ಅವರು ಈ ದಿನ.ಕಾಮ್ ಜೊತೆ ವಿಶೇಷ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ.          

ನಿಮಗೆ ಏನು ಅನ್ನಿಸ್ತು?
0 ವೋಟ್