
- ಆರೋಪಿ ಕುಟುಂಬದೊಂದಿಗಿನ ಗೃಹ ಸಚಿವರ ಫೋಟೋ ವೈರಲ್
- ಪ್ರಕರಣ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಎಂದು ಪ್ರಶ್ನಿಸುತ್ತಿರುವ ನೆಟ್ಟಿಗರು
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಇದೇ ಪ್ರಕರಣದಲ್ಲಿ ಈ ಹಿಂದೆ ವೀರೇಶ ಎನ್ನುವ ಸೇಡಂನ ಯುವಕನನ್ನು ಬಂಧಿಸಲಾಗಿತ್ತು. ಈತ ಕೇವಲ 20 ಪ್ರಶ್ನೆಗಷ್ಟೇ ಉತ್ತರಿಸಿ ಪಿಎಸ್ಐ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ. ಇದರ ಬೆನ್ನಿಗೆ ಕಳೆದ ಏ.16ರಂದು ಜ್ಞಾನ ಜ್ಯೋತಿ ಶಾಲೆಯ ಮೂವರು ಪರೀಕ್ಷಾ ಮೇಲ್ವಿಚಾರಕರು ಮತ್ತು ಮೂವರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.
ಭಾನುವಾರ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿ ಅವರನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದ ಪ್ರಮುಖ ಆರೋಪಿ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಮತ್ತು ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದಾರೆ. ಸಿಐಡಿ ಪೊಲೀಸರು ದಿವ್ಯಾ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಈ ನಡುವೆ ಆರೋಪಿ ದಿವ್ಯಾ ಹಾಗರಗಿ ಕುಟುಂಬ ಸಮೇತರಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆಗೆ ತೆಗೆಸಿಕೊಂಡಿರುವ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದರ ಬೆನ್ನಿಗೆ ಪ್ರಕಟಣೆ ಹೊರಡಿಸಿರುವ ಭಾರತೀಯ ಜನತಾ ಪಕ್ಷ "ಆರೋಪಿ ದಿವ್ಯಾ ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ಹೇಳುವ ಮೂಲಕ ಅಂತರ ಕಾಯ್ದುಕೊಂಡಿದೆ.
ಬಿಜೆಪಿ ಪ್ರಕಟಣೆಯಲ್ಲಿ ಏನಿದೆ?
"ಪಿಎಸ್ಐ ಪರೀಕ್ಷೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ದಿವ್ಯಾ ಹಾಗರಗಿ ಅವರಿಗೂ ಭಾರತೀಯ ಜನತಾ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ" ಎಂದು ರಾಜ್ಯ ಘಟಕದ ವಕ್ತಾರ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ದಿವ್ಯಾ ಹಾಗರಗಿ ಅಥವಾ ಇನ್ಯಾರೇ ಆಗಲಿ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅದನ್ನು ಪಕ್ಷ ಮತ್ತು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಅಕ್ರಮ ನಡೆದಿರುವುದು ಸಾಬೀತಾದರೆ ಆರೋಪಿಗಳಿಗೆ ಶಿಕ್ಷೆ ಆಗಲಿದೆ. ಈ ಅಕ್ರಮದ ಬಗ್ಗೆ ಸರ್ಕಾರ ಸಿಐಡಿ ತನಿಖೆಗೂ ಸೂಚಿಸಿದೆ” ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಅನೇಕ ಬಿಜೆಪಿ ನಾಯಕರು ಈಗಾಗಲೇ ದಿವ್ಯಾ ಹಾಗರಗಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ದಿವ್ಯಾ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಪುನರುಚ್ಚರಿಸುತ್ತಿದ್ದಾರೆ.
ಇನ್ನೆಷ್ಟು ಅಂತರ ಕಾಯ್ದುಕೊಳ್ಳುವಿರಿ: ಕಾಳೆಲೆದ ನೆಟ್ಟಿಗರು
ಆರೋಪಿ ದಿವ್ಯಾ ಹಾಗರಗಿ ಅವರ ಕುಟುಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆಗೆ ತೆಗೆಸಿಕೊಂಡಿರುವ ಪೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಹಲವರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆ ಮತ್ತು ಪಕ್ಷದ ಪ್ರಕಟಣೆಯನ್ನು ಗೇಲಿ ಮಾಡಿದ್ದಾರೆ.
ಗೃಹ ಸಚಿವರಿಗೆ ಇಷ್ಟು ಹತ್ತಿರ ಆಗಿರುವ @BJP4Karnataka ದ ಕಾರ್ಯಕರ್ತೆಯಿಂದ ಎಷ್ಟು ಅಂತರ ಕಾಯ್ದುಕೊಳ್ಳಲು ಸಾಧ್ಯ ? ಈಗಾಗಲೇ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಕೂಡ ಪೊಲೀಸರ ವಶದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಪೊಲೀಸರಿಗೆ ಮತ್ತು ಗೃಹ ಸಚಿವರಿಗೆ ಇಷ್ಟು ಹತ್ತಿರದಲ್ಲಿರುವವರ ಜತೆ @BJP4Karnataka ಮಾತ್ರ ಅಂತರದಲ್ಲಿದೆಯಂತೆ !? pic.twitter.com/T2wFWY59x5
— Luqman Bantwal (@luqmanbantwal) April 18, 2022
ಲಕ್ಮನ್ ಬಂಟ್ವಾಳ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ, “ಗೃಹ ಸಚಿವರಿಗೆ ಇಷ್ಟು ಹತ್ತಿರ ಆಗಿರುವ ಬಿಜೆಪಿ ಕರ್ನಾಟಕದ ಕಾರ್ಯಕರ್ತೆಯಿಂದ ಎಷ್ಟು ಅಂತರ ಕಾಯ್ದುಕೊಳ್ಳಲು ಸಾಧ್ಯ ? ಈಗಾಗಲೇ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಕೂಡ ಪೊಲೀಸರ ವಶದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಪೊಲೀಸರಿಗೆ ಮತ್ತು ಗೃಹ ಸಚಿವರಿಗೆ ಇಷ್ಟು ಹತ್ತಿರದಲ್ಲಿರುವವರ ಜತೆ ಬಿಜೆಪಿ ಕರ್ನಾಟಕ ಮಾತ್ರ ಅಂತರದಲ್ಲಿದೆಯಂತೆ !?” ಎಂದು ಬರೆದುಕೊಂಡಿದ್ದಾರೆ.
ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವೇ?
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಿಗೆ ದಿವ್ಯಾ ಹಾಗರಗಿ ಅವರಿಂದ ಬಿಜೆಪಿ ಅಂತರ ಕಾಯ್ದುಕೊಳ್ಳುವುದು ಸಹಜ. ಆದರೆ, ದಿವ್ಯಾ ಅವರು ಕಲಬುರಗಿ ಕ್ಷೇತ್ರದ ಪ್ರಮುಖ ಬಿಜೆಪಿ ನಾಯಕಿಯರಲ್ಲೊಬ್ಬರು ಎಂಬುದು ಸ್ಥಳೀಯವಾಗಿ ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತರು ಎಂದು ಹೇಳಲಾಗುತ್ತಿದೆ.
ಇದನ್ನು ಓದಿದ್ದೀರಾ?: ಪಿಎಸ್ಐ ನೇಮಕಾತಿ| ಸರ್ಕಾರವೇ ಅಕ್ರಮ ಒಪ್ಪಿಕೊಂಡಿದೆ: ಪ್ರಿಯಾಂಕ್ ಖರ್ಗೆ
ದಿವ್ಯಾ ಹಾಗರಗಿ ಕುಟುಂಬ ಸಮೇತರಾಗಿ ಆರಗ ಜ್ಞಾನೇಂದ್ರ ಜೊತೆಗೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಎಲ್ಲ ಸಂದೇಗಳಿಗೆ ಪುಷ್ಟಿ ನೀಡುವಂತಿದೆ. ಈ ನಡುವೆ ಪ್ರಕರಣದಲ್ಲಿ ಸ್ವತಃ ಗೃಹ ಸಚಿವರೇ ಭಾಗಿಯಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆ ಎದುರಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಜೊತೆಗೆ ಗೃಹ ಸಚಿವರ ಆಪ್ತರ ವಿರುದ್ಧ ಗೃಹ ಸಚಿವರೇ ಪ್ರತಿನಿಧಿಸುವ ಇಲಾಖೆಯಿಂದ ನಿಜವಾಗಿಯೂ ನಿಷ್ಪಕ್ಷಪಾತ ತನಿಖೆ ಸಾಧ್ಯವೇ? ಎಂಬ ಪ್ರಶ್ನೆಗಳೂ ಈಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.